ಜವಳು ಭೂಮಿಯಲ್ಲಿ ಅರಣ್ಯ ಕೃಷಿ

Advertisement

ಗೌಡಪ್ಪಗೌಡ ಪಾಟೀಲ, ರಾಮದುರ್ಗ
ವೃತ್ತಿ ಬೇರೆ ಇದ್ದರೂ, ಪ್ರವೃತ್ತಿಯಲ್ಲಿ ಹೊಸತನ ಸಾಧಿಸಿದವರು ಬಹಳಷ್ಟು. ಜವಳು ಭೂ ಪ್ರದೇಶದಲ್ಲಿ ಅರಣ್ಯ ಕೃಷಿ ಮಾಡುವ ಮೂಲಕ ನಿವೃತ್ತ ಅರಣ್ಯಾಧಿಕಾರಿಯೊಬ್ಬರು ಎಲ್ಲರ ಗಮನ ಸೆಳೆದಿದ್ದಾರೆ.
ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಸಿದ್ನಾಳ ಗ್ರಾಮದ ಚಂದ್ರಗೌಡ ಪಾಟೀಲ ಅರಣ್ಯ ಇಲಾಖೆಯಲ್ಲಿ ಎಸಿಎಫ್ ಆಗಿ ನಿವೃತ್ತರಾಗಿದ್ದಾರೆ. ಕಳೆದ ೧೫ ವರ್ಷಗಳಿಂದ ಗುಡ್ಡ ಪ್ರದೇಶದಿಂದ ಹರಿದು ಬರುವ ನೀರಿನಿಂದ ಜವಳು ಉಂಟಾಗಿದ್ದ ೧೯ ಎಕರೆ ಭೂಮಿಯಲ್ಲಿ ಸಾವಯವ ಪದ್ಧತಿ ಮೂಲಕ ಅರಣ್ಯ ಕೃಷಿ ಮಾಡಿದ್ದಾರೆ. ಸುಮಾರು ೭-೮ ದೇಶಿ ತಳಿಯ ಆಕಳುಗಳಿಂದ ಬಂದ ಸಗಣಿ ಹಾಗೂ ಗಂಜಲನ್ನು ಕೃಷಿ ಚಟುವಟಿಕೆಗೆ ಬಳಕೆ ಮಾಡಿಕೊಂಡಿದ್ದಾರೆ.
ಗುಡ್ಡಗಾಡು ಪ್ರದೇಶದಿಂದ ಹರಿದು ಬರುವ ಮಳೆ ನೀರಿಗೆ ತಮ್ಮ ಜಮೀನಿನಲ್ಲಿ ಅಡ್ಡಲಾಗಿ ಕೆರೆ ನಿರ್ಮಾಣ ಮಾಡಿದ್ದಾರೆ. ಸುಮಾರು ೧೫-೨೦ ಅಡಿ ಆಳದ ಕೆರೆಯಲ್ಲಿ ಮಳೆ ನೀರು ಸಂಗ್ರಹವಾಗಿದೆ. ಭೂಮಿಯಲ್ಲಿ ಇಂಗುವ ವ್ಯವಸ್ಥೆ ಮಾಡಲಾಗಿದೆ. ಈ ಕೆರೆ ನೀರನ್ನು ಲಿಫ್ಟ್‌ ಮಾಡುವ ಮೂಲಕ ಕೃಷಿ ಚಟುವಟಿಕೆಗೆ ಬಳಕೆ ಮಾಡಿಕೊಂಡಿದ್ದಾರೆ.
ತಾಲೂಕಿನ ಗೊಡಚಿ ಗ್ರಾಮದಿಂದ ಎರಡು ಕಿ.ಮೀ, ಹಾಗೂ ಕಟಕೋಳದಿಂದ ಮೂರು ಕಿಮೀ. ಅಂತರದಲ್ಲಿ ಚಲಿಸುವಾಗ ಸುಮಾರು ಒಂದು ಒಂದು ಕಿ.ಮೀವರೆಗೆ ಮನಮೋಹಕ ಆರೋಗ್ಯಕರ ವಾತಾವರಣ ಸೃಷ್ಟಿಯಾಗಿರುವುದು ರಸ್ತೆಯಲ್ಲಿ ಸಂಚರಿಸುವ ಪ್ರತಿಯೊಬ್ಬರ ಅನುಭವಕ್ಕೆ ಬರುತ್ತದೆ. ರೈತ ಚಂದ್ರಗೌಡರು ತಮ್ಮ ೧೯ ಎಕರೆ ಪ್ರದೇಶದಲ್ಲಿ ೬೦೦ ರಕ್ತಚಂದನ, ೩೦೦೦ ಬೆಟ್ಟದ ನೆಲ್ಲಿ, ೮೫೦ ತೆಂಗು, ೬೦೦೦ ಶ್ರೀಗಂಧ, ೨೦೦೦ ಹೆಬ್ಬೇವು, ೩೦೦೦ಕ್ಕು ಅಧಿಕ ಆಪೂಸ್ ಮತ್ತು ಕೇಸರ ಜಾತಿಯ ಮಾವು ಬೆಳೆದಿದ್ದು, ಗಿಡಗಳ ಮಧ್ಯದಲ್ಲಿ ಅಲ್ಲಲ್ಲಿ ವಿವಿಧ ಜಾತಿಯ ಹಣ್ಣಿನ ಗಿಡಗಳನ್ನು ನೆಟ್ಟಿದ್ದಾರೆ.

ಅರಣ್ಯ ರಕ್ಷಣೆ
ಗುಡ್ಡಗಾಡು ಪ್ರದೇಶಕ್ಕೆ ಹೊಂದಿಕೊಂಡಿರುವ ಜಮೀನು ಅಭಿವೃದ್ಧಿಪಡಿಸಿದ್ದರಿಂದ ಅವರ ಜಮೀನು ರಕ್ಷಿಸಲು ಕೆಲಸಗಾರರು ಕಾಯಂ ವಾಸವಾಗುತ್ತಿರುವ ಪರಿಣಾಮ ಸರಕಾರಿ ಅರಣ್ಯ ಪ್ರದೇಶದಲ್ಲಿಯೂ ವಿವಿಧ ಜಾತಿಯ ಗಿಡಗಳು ಬೆಳೆಯಲಾರಂಭಿಸಿವೆ. ಸಿದ್ನಾಳ ಗೌಡರ ಅರಣ್ಯ ಕೃಷಿ ಪ್ರದೇಶದೊಂದಿಗೆ ಕುರುಚಲು ಅರಣ್ಯ ಪ್ರದೇಶ ದಟ್ಟವಾಗಿ ಬೆಳೆಯತೊಡಗಿದ್ದು, ಸರಕಾರಿ ಅರಣ್ಯ ಪ್ರದೇಶಕ್ಕೂ ರಕ್ಷಣೆ ದೊರೆತಂತಾಗಿದೆ. ರೈತರ ಜಮೀನಿಗೆ ಜನತೆ ತಂಡೋಪತಂಡವಾಗಿ ಭೇಟಿ ನೀಡಿ ಕೃಷಿ ಚಟುವಟಿಕೆಯನ್ನು ವೀಕ್ಷಣೆ ಮಾಡುವ ಮೂಲಕ ತಾವು ತಮ್ಮ ಜಮೀನಿನಲ್ಲಿ ಸಿದ್ನಾಳ ಗೌಡರ ಕೃಷಿ ಪದ್ಧತಿಯನ್ನು ಅಳವಡಿಕೆ ಮಾಡಿಕೊಳ್ಳುವ ಇಂಗಿತ ವ್ಯಕ್ತಪಡಿಸುತ್ತಿದ್ದಾರೆ.

ಅರಣ್ಯ ಕೃಷಿ

ನನ್ನ ಅರಣ್ಯ ಇಲಾಖೆಯ ಸೇವೆಯಲ್ಲಿ ಪರಿಸರದ ಬಗೆಗಿನ ಕಾಳಜಿ ಅರಣ್ಯ ಕೃಷಿಗೆ ಪ್ರೇರಣೆ ನೀಡಿದೆ. ಸಾವಯವ ಗೊಬ್ಬರ ಬಳಕೆ ಮಾಡುವ ಮೂಲಕ 15 ವರ್ಷಗಳಿಂದ ಅರಣ್ಯ ಕೃಷಿಗೆ ಶ್ರಮಿಸಿದ್ದೇನೆ. ಈಗಾಗಲೇ ಮಾವಿನ ಹಣ್ಣಿನಿಂದ ಆದಾಯ ಬರುತ್ತಿದೆ. ನಾಲ್ಕಾರು ವರ್ಷಗಳಲ್ಲಿ ವಿವಿಧ ಮರಗಳು ಬೆಳೆದು ಪರಿಶ್ರಮಕ್ಕೆ ತಕ್ಕ ಪ್ರತಿಫಲ ದೊರೆತಿದೆ.

ಚಂದ್ರಗೌಡ ಪಾಟೀಲ, ನಿವೃತ್ತ ಅರಣ್ಯಾಧಿಕಾರಿ ಹಾಗೂ ಪ್ರಗತಿಪರ ರೈತ