ಪ್ರಜಾಪ್ರಭುತ್ವ ಒಂದು ಹೆಮ್ಮರ ಇದ್ದಂತೆ. ಅದಕ್ಕೆ ಬೀಜಾಂಕುರ ಮತದಾನ. ಜನಾದೇಶ ತನ್ನದೇ ಸಂದೇಶವನ್ನು ನೀಡುತ್ತದೆ. ಮೊಳಕೆಯಲ್ಲೇ ಬೆಳೆಯ ಆರೋಗ್ಯ ತಿಳಿದುಹೋಗುತ್ತದೆ. ಬೇವು ಬಿತ್ತಿ ಮಾವು ನಿರೀಕ್ಷಿಸಲು ಬರುವುದಿಲ್ಲ. ರೈತನಿಗೆ ಭೂಮಿಯ ಫಲವತ್ತತೆ, ಬೀಜದ ಲಕ್ಷಣ ಹಾಗೂ ಮೊಳಕೆಯ ಗುಣಧರ್ಮ ತಿಳಿದಿರುತ್ತದೆ. ಅದೇರೀತಿ ಪ್ರತಿಯೊಬ್ಬ ಮತದಾರನಿಗೂ ರಾಷ್ಟçದ ಕಲ್ಪನೆ ಇದ್ದೇ ಇರುತ್ತದೆ. ಜಾಗತಿಕ ಮಟ್ಟದಲ್ಲಿ ನಮ್ಮ ದೇಶ-ರಾಜ್ಯದ ಬೆಳವಣಿಗೆ ಕಾಣಬೇಕು ಎಂದರೆ ಭದ್ರ ಬುನಾದಿ ಹಾಕಬೇಕು. ಅದಕ್ಕೆ ಮತದಾನವೇ ಅಡಿಪಾಯ. ಇದನ್ನು ಅರಿತುಕೊಂಡ ಮತದಾರರು ಯಾರೂ ಮತದಾನದಿಂದ ಹಿಂದೆ ಸರಿಯುವುದಿಲ್ಲ. ಹೀಗಾಗಿ ಮತದಾನ ಹಕ್ಕು-ಕರ್ತವ್ಯ ಎರಡೂ ಹೌದು.
ಸಂವಿಧಾನದಲ್ಲಿ ಹೇಳಿರುವಂತೆ ದೇಶದ ಏಕತೆ ಮತ್ತು ಸಮಗ್ರತೆಯನ್ನು ಕಾಪಾಡುವುದು ಎಲ್ಲ ಪ್ರಜೆಗಳ ಕರ್ತವ್ಯ. ಅದನ್ನು ಈಡೇರಿಸಬೇಕು ಎಂದರೆ ಎಲ್ಲರೂ ಮತದಾನ ಮಾಡಬೇಕು. ಮತದಾನದ ಬಗ್ಗೆ ಗಂಟೆಗಟ್ಟಲೆ ಮಾತನಾಡುವವರು ಮತಗಟ್ಟೆಗೆ ಹೋಗುವುದೇ ಇಲ್ಲ. ನಮ್ಮ ಒಂದು ಮತದಿಂದ ಏನೂ ಬದಲಾವಣೆ ಬರುವುದಿಲ್ಲ ಎಂದು ಹೇಳುವವರೂ ಇದ್ದಾರೆ. ಇವರಲ್ಲಿ ಬಹುತೇಕ ಜನ ಬುದ್ಧಿಜೀವಿಗಳು. ಅವರು ಮನೆಯಲ್ಲೇ ಕುಳಿತು ಎಲ್ಲ ವಿಶ್ಲೇಷಣೆ ಮಾಡುತ್ತಿರುತ್ತಾರೆ. ಮತದಾನ ಮಾಡುವುದು ನನ್ನ ಕರ್ತವ್ಯ ಎಂದು ಭಾವಿಸುವುದೇ ಇಲ್ಲ. ಬಡವರು ದುಡ್ಡು ತೆಗೆದುಕೊಂಡು ಮತ ನೀಡುತ್ತಾರೆ. ನಾನೇಕೆ ನೀಡಲಿ ಎಂದು ವಾದಿಸುವವರೂ ಇದ್ದಾರೆ. ಇಂಥ ಮನೋಭಾವದವರಿಂದ ಯಾವ ಬದಲಾವಣೆಯೂ ಬರುವುದಿಲ್ಲ. ಸುದೈವದಿಂದ ಯುವ ಪೀಳಿಗೆ ಈಗ ಮತದಾನದ ಬಗ್ಗೆ ಒಲವು ತೋರುತ್ತಿರುವುದು ಸಂತಸದ ಸಂಗತಿ. ಮತದಾನ ಎನ್ನುವುದು ಪವಿತ್ರವಾದ ಕೆಲಸ. ಬೆಳಗ್ಗೆ ಎದ್ದ ಕೂಡಲೇ ಮೊದಲು ಮತಗಟ್ಟೆಗೆ ಹೋಗಿ ತಮ್ಮ ಹಕ್ಕನ್ನು ಚಲಾಯಿಸಿ ಬಂದು ನಂತರ ಉಳಿದ ಕೆಲಸಗಳನ್ನು ಮಾಡಬೇಕು. ಈ ನಿಷ್ಠೆ ಕಂಡು ಬಂದಲ್ಲಿ ರಾಜಕೀಯ ಪಂಡಿತರ ಲೆಕ್ಕಾಚಾರ ಎಲ್ಲವೂ ತಲೆಕೆಳಕಾಗುವುದರಲ್ಲಿ ಸಂದೇಹವಿಲ್ಲ. ಈಗ ಶೇ. ೫೦-೬೦ ಕ್ಕೆ ಮತದಾನ ನಿಂತು ಹೋಗುತ್ತಿದೆ. ಈ ಬಾರಿಯಾದರೂ ಮತದಾನ ಶೇ ೮೦-೯೦ ದಾಟಬೇಕು. ಆಗ ಫಲಿತಾಂಶದಲ್ಲೂ ಬದಲಾವಣೆ ನಿರೀಕ್ಷಿಸಬಹುದು. ಹಿಂದಿನಿAದಲೂ ವೋಟ್ ಬ್ಯಾಂಕ್ ರಾಜಕಾರಣ ನಡೆದುಕೊಂಡು ಬಂದಿದೆ. ಎಲ್ಲ ರಾಜಕೀಯ ಪಕ್ಷಗಳೂ ತಮ್ಮದೇ ಆದ ವೋಟ್ ಬ್ಯಾಂಕ್ ನಂಬಿಕೊAಡು ಅಲ್ಲಿ ಮಾತ್ರ ಪ್ರಚಾರವನ್ನು ಬಿರುಸಾಗಿ ಕೈಗೊಂಡಿರುತ್ತವೆ. ಕೆಲವು ಕಡೆ ಯಾವ ಪಕ್ಷದವರೂ ಪ್ರಚಾರಕ್ಕೆ ಹೋಗುವುದೇ ಇಲ್ಲ. ಇದಕ್ಕೆ ಪ್ರಮುಖ ಕಾರಣ ಅಲ್ಲಿಯ ಜನ ಮತದಾನದ ಬಗ್ಗೆ ಆಸಕ್ತಿಯನ್ನು ತೋರುವುದೇ ಇಲ್ಲ. ಈಗ ಎಲ್ಲ ಕಡೆ ಅಪರಾಧಿ ಹಿನ್ನೆಲೆ ಇರುವ ಅಭ್ಯರ್ಥಿಗಳ ಸಂಖ್ಯೆ ಹೆಚ್ಚಾಗುತ್ತಿರುವ ಬಗ್ಗೆ ಹಾಗೂ ಕೋಟ್ಯಧಿಪತಿಗಳು ಕಣಕ್ಕೆ ಇಳಿಯುತ್ತಿರುವ ಬಗ್ಗೆ ಆತಂಕ ಮೂಡಿದೆ. ಇದನ್ನು ತಪ್ಪಿಸಬೇಕು ಎಂದರೆ ಎಲ್ಲರೂ ಮತ ಚಲಾಯಿಸ ಬೇಕು. ಶೇಕಡವಾರು ಮತದಾನ ಅಧಿಕಗೊಂಡಲ್ಲಿ ಈಗಿನ ಎಲ್ಲ ತಲೆಬೇನೆಗಳು ನಿವಾರಣೆಯಾಗುತ್ತದೆ. ಜನರನ್ನು ಮನವೊಲಿಸಿಕೊಳ್ಳಲು ಎಲ್ಲ ರಾಜಕೀಯ ಪಕ್ಷಗಳು ಮತ್ತು ಪಕ್ಷೇತರ ಅಭ್ಯರ್ಥಿಗಳು ಹಲವು ಮಾರ್ಗಗಳನ್ನು ಬಳಸುವುದು ಸಹಜ. ಆದರೆ ಇವುಗಳಿಗೆ ಮತದಾರರು ಸೊಪ್ಪು ಹಾಕುವುದಿಲ್ಲ ಎಂಬುದು ಅಭ್ಯರ್ಥಿಗಳಿಗೆ ಮನವರಿಕೆಯಾಗುವಂತೆ ಮಾಡಬೇಕು. ಹಲವು ಬಾರಿ ಮತದಾರರು ಘೋಷಣೆಗೆ ಮಾರುಹೋಗುವುದುಂಟು. ಅದು ಕ್ಷಣಿಕ. ಜನ ದೀರ್ಘಕಾಲಿಕ ಚಿಂತನೆ ನಡೆಸುವುದಂತೂ ಖಂಡಿತ. ಇದುವರೆಗೆ ನಡೆದ ಚುನಾವಣೆಗಳ ಫಲಿತಾಂಶವನ್ನು ಒಮ್ಮೆ ಸಿಂಹಾವಲೋಕನ ಮಾಡಿದರೆ ಇದು ಸ್ಪಷ್ಟ. ಯಾವುದೇ ನಾಯಕನನ್ನು ಜನ ಆಯ್ಕೆ ಮಾಡಿಕೊಳ್ಳುವುದಕ್ಕೆ ಹಲವು ಮಾನದಂಡಗಳಿರುತ್ತವೆ. ಅವುಗಳು ಕಾಲಕಾಲಕ್ಕೆ ಬದಲಾಗುತ್ತ ಹೋಗುತ್ತದೆ. ಜನತೆ ಕೂಡ ಇಂದಿನ ರಾಜಕೀಯ ವಿದ್ಯಮಾನಗಳನ್ನು ನೋಡಿಕೊಂಡು ತೀರ್ಮಾನ ಕೈಗೊಳ್ಳುತ್ತಾರೆ. ಇಂದಿನ ಜನಾದೇಶ ಮುಂದಿನ ಹಲವು ಚುನಾವಣೆಗಳ ಮೇಲೆ ಪ್ರಭಾವ ಬೀರಲಿದೆ ಎಂಬ ದೂರದೃಷ್ಟಿ ಮತದಾರರಿಗೆ ಬಂದರೆ ಅವರು ಮತದಾನದಿಂದ ತಪ್ಪಿಸಿಕೊಳ್ಳುವುದಿಲ್ಲ.