ಜನರ ಪ್ರೀತಿ, ವಿಶ್ವಾಸಕ್ಕೆ ಚಿರಋಣಿ – ಮಾಜಿ ಶಾಸಕ ದೊಡ್ಡನಗೌಡ ಪಾಟೀಲ

ದೊಡ್ಡನಗೌಡ ಪಾಟೀಲ್
Advertisement

ಕುಷ್ಟಗಿ: ಜನರ ಪ್ರೀತಿ, ವಿಶ್ವಾಸಕ್ಕೆ ನಾನು ಏನು ಕೊಟ್ಟರೂ ಕಮ್ಮಿ. ನನ್ನ ಮತ್ತು ನನ್ನ ಧರ್ಮಪತ್ನಿಯ ಎಡ ಮತ್ತು ಬಲ ತೊಡೆಯ ಕಾಲಿನ ಚರ್ಮವನ್ನು ತೆಗೆದು ಚಪ್ಪಲಿ ಮಾಡಿ ಜನತೆಗೆ ನೀಡಿದರೂ ಸಹ ಸಮನಾಗುವುದಿಲ್ಲ ಎಂದು ಮಾಜಿ ಶಾಸಕ ದೊಡ್ಡನಗೌಡ ಪಾಟೀಲ್ ಹೇಳಿದರು.
ಅಭಿಮಾನಿಗಳು ಹಮ್ಮಿಕೊಂಡಿದ್ದ ಹುಟ್ಟುಹಬ್ಬ ಕಾರ್ಯಕ್ರಮದಲ್ಲಿ ಕೇಕ್ ಕತ್ತರಿಸಿದ ಬಳಿಕ ಜನತೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಸುಸಂಸ್ಕೃತ ಮನೆತನದಲ್ಲಿ ನಾನು ಹುಟ್ಟಿದ್ದೇನೆ. ಜನರು ಸಹ ನನಗೆ ಸಂಸ್ಕೃತಿಯನ್ನು ತೋರಿಸಿಕೊಟ್ಟಿದ್ದೀರಿ. ಹೀಗಾಗಿ ಆ ಪ್ರೀತಿ, ವಿಶ್ವಾಸಕ್ಕೆ ನಾನು ಸದಾ ಚಿರಋಣಿಯಾಗಿರುತ್ತೇನೆ ಎಂದರು.
ನಾನು ನಿಮ್ಮೆಲ್ಲರ ಪ್ರೀತಿಯ ಮಗ ಎಂದು ಹೇಳಲು ಬಯಸುತ್ತೇನೆ. ನಿಮ್ಮ ಪ್ರೀತಿ, ವಿಶ್ವಾಸ ನನ್ನ ಮೇಲೆ ಸದಾ ಕಾಲ ಇರಬೇಕು. ನನ್ನ ಕೊನೆ ಉಸಿರು ಇರುವವರೆಗೂ ಸಹ ನಾನು ನನ್ನ ಕುಷ್ಟಗಿ ಕ್ಷೇತ್ರದ ಜನತೆಗೆ ಋಣಿಯಾಗಿರುತ್ತೇನೆ. ಇದರಲ್ಲಿ ಯಾವುದೇ ಅನುಮಾನ ಬೇಡ ಎಂದರು.
ನನ್ನ ಹುಟ್ಟುಹಬ್ಬಕ್ಕೆ ಜನಸಾಗರವೇ ಹರಿದು ಬಂದಿದ್ದು, ನನಗೆ ಮಾತೇ ಹೊರಡುತ್ತಿಲ್ಲ. ಮೂಕವಿಸ್ಮಿತನಾಗಿದ್ದೇನೆ. ನನ್ನ ಕುಟುಂಬ ಕ್ಷೇತ್ರದ ಜನತೆಗೆ ಸದಾಕಾಲ ಸೇವೆ ಸಲ್ಲಿಸಲು ಸಿದ್ಧವಿದೆ. ನನ್ನ ಹುಟ್ಟು ಹಬ್ಬವನ್ನು ಅಭಿಮಾನಿಗಳು ಎಲ್ಲರೂ ಸಹ ಒಗ್ಗೂಡಿಕೊಂಡು ಅದ್ದೂರಿಯಾಗಿ ಆಚರಿಸಿದ್ದು ನನಗೆ ಮತ್ತು ನನ್ನ ಕುಟುಂಬಕ್ಕೆ ಸಂತಸವನ್ನು ಉಂಟು ಮಾಡಿದೆ. ಜನತೆ ನನ್ನನ್ನು ಎಂತಹ ಕಷ್ಟಕಾಲದಲ್ಲೂ ಸಹ ಕೈಬಿಟ್ಟಿಲ್ಲ ಎಂದರು.
ಕೊಪ್ಪಳ ಸಂಸದ ಕರಡಿ ಸಂಗಣ್ಣ, ಕನಕಗಿರಿ ಶಾಸಕ ಬಸವರಾಜ ದಢೇಸುಗೂರು, ಗಂಗಾವತಿ ಶಾಸಕ‌ ಪರಣ್ಣ ಮುನವಳ್ಳಿ, ವಿಧಾನ ಪರಿಷತ್ ಸದಸ್ಯೆ ಹೇಮಲತಾ ನಾಯಕ, ಮಾಜಿ ಶಾಸಕ ಕೆ. ಶರಣಪ್ಪ, ಮಾಜಿ ಶಾಸಕ ದೊಡ್ಡನಗೌಡ ಪಾಟೀಲ ಅವರನ್ನು ಅಭಿನಂದಿಸಿದರು.