ಹುಬ್ಬಳ್ಳಿ: ಆರ್‌ಎಸ್‌ಎಸ್, ಭಜರಂಗದಳ ನಿಷೇಧ ಮಾಡುವುದಾಗಿ ಹೇಳಿ ಜನರ ದಿಕ್ಕುತಪ್ಪಿಸುವುದನ್ನು ಬಿಟ್ಟು, ನೀವು ಕೊಟ್ಟ ಗ್ಯಾರಂಟಿಗಳತ್ತ ಗಮನಹರಿಸಿ ಎಂದು ಶಾಸಕ ಮಹೇಶ ಟೆಂಗಿನಕಾಯಿ ಎಚ್ಚರಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನರು ನಿಮ್ಮನ್ನು ಬಹುಮತದಿಂದ ಆರಿಸಿ ತಂದಿರುವುದು ಒಳ್ಳೆಯ ಆಡಳಿತ ಮಾಡುವುದಕ್ಕೆ. ಅಭಿವೃದ್ಧಿ ಕೆಲಸಗಳನ್ನು ನಿರೀಕ್ಷಿಸುತ್ತಿದ್ದಾರೆ. ಇದರ ಕಡೆ ಗಮನಹರಿಸಬೇಕು ಎಂದು ಆಗ್ರಹಿಸಿದರು.
ಪಾಲಿಕೆ ಮೇಯರ್ ಚುನಾವಣೆ ದಿನಾಂಕ ಇನ್ನೂ ನಿಗದಿಯಾಗಿಲ್ಲ. ನಿಗದಿಯಾದ ಬಳಿಕ ಈ ಕುರಿತು ನಾವೆಲ್ಲ ಚಿಂತನೆ ನಡೆಸಲಿದ್ದೇವೆ ಎಂದ ಅವರು, ಅವಳಿನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣಿಸಿರುವುದು ಗಮನಕ್ಕೆ ಬಂದಿದೆ. ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಈ ಕುರಿತು ಸಭೆ ನಡೆಸಿದ್ದಾರೆ. ಒಟ್ಟಾರೆಯಾಗಿ ಅವಳಿ ನಗರದ ನೀರಿನ ಸಮಸ್ಯೆ ಬಗೆಹರಿಸಲು ಶಾಶ್ವತ ಪರಿಹಾರದ ಯೋಜನೆ ರೂಪಿಸಲಾಗುವುದು. ಮುಂದಿನ ೩೦ ವರ್ಷಗಳವರೆಗೆ ಆಗುವ ಜನಸಂಖ್ಯೆ, ಅಗತ್ಯ ನೀರು ಇವೆಲ್ಲವನ್ನೂ ತಾಳೆ ಮಾಡಿ, ಜನರಿಗೆ ನೀರು ಪೂರೈಸುವ ಚಿಂತನೆ ನಡೆಸಲಾಗುವುದು ಎಂದರು.