ಡಿಜಿಟಲ್ ಮಾಧ್ಯಮ ದೇಶಾದ್ಯಂತ ಜನಪ್ರಿಯಗೊಂಡ ಮೇಲೆ ಈಗ ಎಲ್ಲ ಖಾಸಗಿ ಬ್ಲೇಡ್ ಕಂಪನಿಗಳು ಡಿಜಿಟಲ್ ಮಾಧ್ಯಮದ ಮೂಲಕ ಸಾಲ ಕೊಡುವ ಕೆಲಸವನ್ನು ಕೈಗೊಂಡಿದೆ. ಈ ರೀತಿ ಸಾಲ ತೆಗೆದುಕೊಂಡವರು ಸಕಾಲಕ್ಕೆ ಕಂತು ನೀಡಲಿಲ್ಲ ಎಂದರೆ ಅವರಿಗೆ ದೈಹಿಕ ಮತ್ತು ಮಾನಸಿಕವಾಗಿ ಕಿರುಕುಳ ನೀಡುವ ಕೆಲಸ ಕೈಗೊಳ್ಳುತ್ತಿದೆ. ಇದಕ್ಕಾಗಿ ಅನೈತಿಕ ಚಟುವಟಿಕೆಗಳಲ್ಲಿ ತೊಡಗಿರುವುದು ಆತಂಕಕಾರಿ ಸಂಗತಿ. ಇದರ ವಿರುದ್ಧ ರಿಸರ್ವ್ ಬ್ಯಾಂಕ್ ಕಾನೂನು ರಚಿಸಿದರೆ ಸಾಲದು. ಕೂಡಲೇ ಇವುಗಳನ್ನು ಮುಚ್ಚಲು ಎಲ್ಲ ಕ್ರಮಗಳನ್ನು ಕೈಗೊಳ್ಳಬೇಕು. ಇವುಗಳ ಹಿಂದೆ ಚೀನಾ ಸೇರಿದಂತೆ ಹಲವು ವಿದೇಶಿ ಸಂಸ್ಥೆಗಳ ಕೈವಾಡವಿದೆ ಎಂಬ ಅನುಮಾನಗಳು ವ್ಯಕ್ತವಾಗಿವೆ. ಇವುಗಳು ಇಂಟರ್‌ನೆಟ್ ಬ್ಯಾಂಕಿಂಗ್‌ನಲ್ಲಿ ತೊಡಗಿರುವುದರಿಂದ ಇವುಗಳನ್ನು ಪತ್ತೆಹಚ್ಚುವುದು ಕಷ್ಟ. ಅದರಲ್ಲೂ ವಿದೇಶಿ ಕಂಪನಿಗಳು ಸ್ಥಳೀಯರನ್ನೇ ನಿರ್ದೇಶಕರಾಗಿ ನೇಮಿಸಿಕೊಂಡಿದೆ. ಬಹುತೇಕ ನಿರ್ದೇಶಕರಿಗೆ ತಮ್ಮ ಹೆಸರು ಕಂಪನಿಯಲ್ಲಿರುವುದೇ ತಿಳಿಯದು. ಎಲ್ಲವೂ ನಕಲಿ ಆಗಿರುವುದು ಪತ್ತೆಯಾಗಿದೆ. ಬೆಂಗಳೂರು, ಚೆನ್ನೈ ಸೇರಿದಂತೆ ಪ್ರಮುಖ ನಗರಗಳಲ್ಲಿ ಈ ಬ್ಲೇಡ್ ಕಂಪನಿಗಳ ವಹಿವಾಟು ಚುರುಕುಗೊಂಡಿದೆ. ಚೆನ್ನೈ ನಗರದಲ್ಲೇ ಪ್ರತಿ ದಿನ ೧ ಕೋಟಿ ರೂ. ವ್ಯವಹಾರವನ್ನು ಈ ಬ್ಲೇಡ್ ಕಂಪನಿಗಳು ನಡೆಸುತ್ತಿವೆ ಎಂದು ಪೊಲೀಸರೇ ಹೇಳಿದ್ದಾರೆ. ರಾಷ್ಟ್ರೀಯ ಮಟ್ಟದಲ್ಲಿ ಸೈಬರ್ ಅಪರಾಧಗಳು ಹೆಚ್ಚಿನ ಸಂಖ್ಯೆಯಲ್ಲಿ ೮ ನೋಂದಣಿಯಾಗುತ್ತಿದ್ದು, ಅದರಲ್ಲಿ ಡಿಜಿಟಲ್ ಸಾಲ ವಂಚನೆ ಪ್ರಮುಖವಾಗಿದೆ. ಕರ್ನಾಟಕದಲ್ಲಿ ೯೬೮೦, ಉತ್ತರ ಪ್ರದೇಶ ೪೬೭೪, ತೆಲಂಗಾಣದಲ್ಲಿ ೪೪೩೬ ಪ್ರಕರಣಗಳು ದಾಖಲಾಗಿವೆ. ಆರ್‌ಬಿಐಗೆ ೭೮೧೩ ದೂರುಗಳು ಬಂದಿವೆ. ಒಟ್ಟು ಪ್ರಕರಣಗಳಲ್ಲಿ ಶೇ.೨೫ ರಷ್ಟು ಮಾತ್ರ ಸೈಬರ್ ಅಪರಾಧವಾಗಿ ದಾಖಲಾಗುತ್ತಿವೆ. ಬಹುತೇಕ ಪ್ರಕರಣಗಳು ಪೊಲೀಸರ ಗಮನಕ್ಕೆ ಬರುತ್ತಿಲ್ಲ. ಸಾಲ ನೀಡುವ ಆಪ್‌ಗಳು ೧ ಸಾವಿರಕ್ಕೂ ಹೆಚ್ಚು ಇವೆ. ಇವುಗಳು ಇಂಟರ್‌ನೆಟ್ ಬ್ಯಾಂಕಿಂಗ್‌ನಲ್ಲಿರುವ ಗ್ರಾಹಕರನ್ನು ಮೊದಲು ಸೆಳೆದುಕೊಂಡು ವೈಯಕ್ತಿಕ ಸಾಲ ಕೊಟ್ಟು ನಂತರ ಕಿರುಕುಳ ನೀಡುವ ಕೃತ್ಯಕ್ಕೆ ಕೈಹಾಕುತ್ತಿವೆ. ರಿಸರ್ವ್ ಬ್ಯಾಂಕ್ ಇದರ ಬಗ್ಗೆ ಎಚ್ಚರಿಕೆ ನೀಡಿರೂ ಪ್ರಯೋಜನಕಾರಿಯಾಗಿಲ್ಲ. ರಿಸರ್ವ್ ಬ್ಯಾಂಕ್‌ನಲ್ಲಿ ನೋಂದಾಯಿತ ಹಣಕಾಸು ಸಂಸ್ಥೆಗಳು ಮತ್ತು ಬ್ಯಾಂಕ್‌ಗಳು ಹೆಚ್ಚು ಜನರಿಗೆ ಸಾಲ ನೀಡುವ ವ್ಯವಸ್ಥೆ ಮಾಡಿದಲ್ಲಿ ಖಾಸಗಿ ಲೇವಾದೇವಿಯನ್ನು ನಿಯಂತ್ರಿಸಬಹುದು. ರಾಜ್ಯ ಸರ್ಕಾರ ಖಾಸಗಿ ಲೇವಾದೇವಿಗೆ ಸಂಬಂಧಿಸಿದಂತೆ ಪ್ರತ್ಯೇಕ ಕಾಯ್ದೆ ರಚಿಸಿದೆ. ಅವರು ನೋಂದಾಯಿತ ಸಂಸ್ಥೆಗಳ ಮೂಲಕ ವ್ಯವಹಾರ ನಡೆಸುತ್ತಾರೆ. ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳಲು ಅವಕಾಶವಿದೆ. ಆದರೆ ಡಿಜಿಟಲ್ ಸಾಲ ನೀಡುವ ಸಂಸ್ಥೆಗಳ ವಿಳಾಸವೇ ಇರುವುದಿಲ್ಲ. ಇವುಗಳನ್ನು ಪತ್ತೆ ಹಚ್ಚುವುದೂ ಕಷ್ಟ. ರಿಸರ್ವ್ ಬ್ಯಾಂಕ್ ಎಲ್ಲ ಬ್ಯಾಂಕ್‌ಗಳಿಗೆ ಸ್ಪಷ್ಟ ಸೂಚನೆ ನೀಡಿದೆ. ಅದರಂತೆ ಮಧ್ಯವರ್ತಿಗಳ ಮೂಲಕ ಸಾಲ ವಿತರಣೆ ಮಾಡುವ ಹಾಗಿಲ್ಲ. ನೇರವಾಗಿ ಸಾಲದ ಹಣವನ್ನು ಗ್ರಾಹಕರ ಖಾತೆಗೆ ಜಮಾ ಮಾಡಬೇಕು. ರಿಸರ್ವ್ ಬ್ಯಾಂಕ್ ಮಾನ್ಯತೆ ಇಲ್ಲದ ಹಣಕಾಸು ಸಂಸ್ಥೆ ಸಾಲ ನೀಡುವ ಕೆಲಸ ಕೈಗೊಳ್ಳುವಂತಿಲ್ಲ. ನಮ್ಮಲ್ಲಿ ಕೇಂದ್ರ ಸರ್ಕಾರವೂ ಸೇರಿದಂತೆ ಎಲ್ಲ ಹಣಕಾಸು ಸಂಸ್ಥೆಗಳು ಡಿಜಿಟಲ್ ಬ್ಯಾಂಕಿಂಗ್ ವ್ಯವಸ್ಥೆಯ ಬಗ್ಗೆ ಸಾಕಷ್ಟು ಪ್ರಚಾರ ನೀಡಿಲ್ಲದೆ ಹೆಚ್ಚು ಗ್ರಾಹಕರು ಅದನ್ನು ಬಳಸುವಂತೆ ಉತ್ತೇಜನ ನೀಡಿತು. ಈಗ ಜನಸಾಮಾನ್ಯರೂ ಪ್ರತಿದಿನ ಇಂಟರ್‌ನೆಟ್ ಬ್ಯಾಂಕಿಂಗ್ ವ್ಯವಸ್ಥೆಗೆ ಹೊಂದಿಕೊಳ್ಳುತ್ತಿದ್ದಾರೆ. ಆದರೆ ಈಗ ನಕಲಿ ಬ್ಯಾಂಕ್‌ಗಳು ತಲೆಎತ್ತಿರುವುದು ದೊಡ್ಡ ತಲೆನೋವಾಗಿದೆ. ಇದನ್ನು ರಿಸರ್ವ್ ಬ್ಯಾಂಕ್ ದಮನ ಮಾಡಬೇಕು. ಜನಸಾಮಾನ್ಯರು ವಂಚನೆಗೆ ಒಳಗಾಗುವವರೆಗೆ ಕಾಯುವುದು ಬೇಡ. ಹಿಂದೆ ಸಹಕಾರಿ ಬ್ಯಾಂಕ್‌ಗಳಲ್ಲಿ ವಂಚನೆ ಆರೋಪ ಕೇಳಿಬರುತ್ತಿತ್ತು. ಈಗ ಅದು ಕಡಿಮೆಯಾಗಿದ್ದು ಡಿಜಿಟಲ್ ಬ್ಯಾಂಕಿಂಗ್ ವಂಚನೆಗಳು ಅಧಿಕಗೊಳ್ಳುತ್ತಿದೆ. ಇದನ್ನು ದಮನ ಮಾಡುವುದು ಅಗತ್ಯ. ಡಿಜಿಟಲ್ ಮಾಧ್ಯಮ ಎಷ್ಟು ಅನುಕೂಲ ತಂದುಕೊಟ್ಟಿ ದೆಯೋ ಅಷ್ಟೇ ಕಷ್ಟಗಳನ್ನು ತಂದಿವೆ. ಚಿಲ್ಲರೆ ಸಮಸ್ಯೆ ನಿವಾರಣೆಯಾಗಿದೆ. ನಗದು ವ್ಯವಹಾರ ಕಡಿಮೆಯಾಗಿದೆ. ಎಲ್ಲ ಸರ್ಕಾರಗಳು ತಮ್ಮ ಫಲಾನುಭವಿಗಳಿಗೆ ಸಹಾಯಧನವನ್ನು ನೇರವಾಗಿ ಅವರ ಖಾತೆಗೆ ಜಮಾ ಮಾಡಲು ಸಾಧ್ಯವಾಗಿದೆ. ಇದರಿಂದ ಮಧ್ಯವರ್ತಿಗಳ ಹಾವಳಿ ನಿಂತಿದೆ. ಅಲ್ಲದೆ ಸರ್ಕಾರದ ವಹಿವಾಟಿನಲ್ಲಿ ಕಾಗದ ರಹಿತ ವ್ಯವಸ್ಥೆಯನ್ನು ಜಾರಿಗೆ ತರಲು ಸಾಧ್ಯವಾಗಿದೆ. ಭೂ ದಾಖಲೆ ಗಳಿಂದ ಹಿಡಿದು ಎಲ್ಲ ಕಾಗದಪತ್ರಗಳನ್ನು ಸುರಕ್ಷಿತವಾಗಿಡಲು ಸಾಧ್ಯವಾಗಿದೆ. ಅಲ್ಲದೆ ಸರ್ಕಾರ ಅಧಿಕಾರಿಗಳ ಉತ್ತರದಾಯಿತ್ವ ಅಧಿಕಗೊಂಡಿದೆ. ನಕಲಿ ಕಾಗದಪತ್ರಗಳನ್ನು ತಯಾರಿಸಲು ಸಾಧ್ಯವಾಗುತ್ತಿಲ್ಲ. ಪ್ರತಿಯೊಬ್ಬ ಪ್ರಜೆ ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ಬ್ಯಾಂಕ್ ಖಾತೆಯನ್ನು ಸುರಕ್ಷಿತವಾಗಿಟ್ಟು ಕೊಂಡಲ್ಲಿ ವಹಿವಾಟು ನಡೆಸುವುದು ಸುಲಭ. ಮುಂದಿನ ದಿನಗಳಲ್ಲಿ ಮತದಾನಕ್ಕೂ ಈ ವ್ಯವಸ್ಥೆ ಬರಲಿದೆ. ಇವುಗಳು ಡಿಜಿಟಲ್ ಮಾಧ್ಯಮ ನೀಡಿರುವ ಸವಲತ್ತು. ಇದಕ್ಕೆ ಪ್ರತಿಯಾಗಿ ಪ್ರತಿಯೊಬ್ಬರ ವಯುಕ್ತಿಕ ಮಾಹಿತಿ ರಹಸ್ಯವಾಗಿ ಉಳಿದಿಲ್ಲ. ಒಮ್ಮೆ ಸಾಲ ಪಡೆದರೆ ಸಾಕು ಸಾಲಗಾರನ ಎಲ್ಲ ಮಾಹಿತಿ ಎಲ್ಲ ಹಣಕಾಸು ಸಂಸ್ಥೆಗಳ ಕೈಯಲ್ಲಿರುತ್ತದೆ. ಹೀಗಾಗಿ ಗ್ರಾಹಕರು ಕಷ್ಟದಲ್ಲಿ ಸಿಲುಕುವುದು ಸುಲಭ. ಈಗ ಗ್ರಾಹಕರನ್ನು ಡಿಜಿಟಲ್ ವಂಚನೆಗಳಿಂದ ಕಾಪಾಡುವುದು ಸರ್ಕಾರದ ಕರ್ತವ್ಯ. ಡಿಜಿಟಲ್ ಮಾಧ್ಯಮದಲ್ಲಿ ವಂಚನೆ ಮಾಡುವ ಕಂಪನಿಗಳಿಂದ ದೂರವಿರಿ ಎಂದು ಹೇಳುವುದು ಸುಲಭ. ಆದರೆ ಪ್ರತಿಯೊಬ್ಬ ವ್ಯಕ್ತಿ ತನ್ನ ವೈಯಕ್ತಿಕ ವಿವರಗಳನ್ನು ಕಾಪಾಡಿಕೊಳ್ಳುವುದು ಬಹಳ ಕಷ್ಟ. ಪ್ರತಿಯೊಬ್ಬರಿಗೂ ಕಷ್ಟಗಳು ಬರುವುದು ಸಹಜ. ಅವರು ಸಕಾಲದಲ್ಲಿ ಸಾಲ ಸಿಗುತ್ತದೆ ಎಂದು ಖಾಸಗಿ ಕಂಪನಿಗಳ ಮೊರೆ ಹೋದಲ್ಲಿ ಸಾಲದ ಬಲೆಯಲ್ಲಿ ಸಿಲುಕುವುದು ನಿಶ್ಚಿತ. ಯಾವುದೇ ಹಣಕಾಸು ಕಂಪನಿಯ ಬಗ್ಗೆ ವಿವರ ಪಡೆಯುವುದು ಬಹಳ ಕಷ್ಟ. ಸೂಕ್ತ ಮಾರ್ಗದರ್ಶನ ನೀಡುವ ಯಾವ ವ್ಯವಸ್ಥೆಯೂ ಇರುವುದಿಲ್ಲ. ಇಂಥ ಬ್ಲೇಡ್ ಕಂಪನಿಗಳಲ್ಲಿ ಕೆಲಸ ಮಾಡುವವರನ್ನು ಸರ್ಕಾರ ಮೊದಲು ಬಂಧಿಸಿ ಶಿಕ್ಷೆ ವಿಧಿಸಬೇಕು. ಜನ ಮೋಸ ಹೋದ ಮೇಲೆ ಕಂಪನಿಯ ಮೇಲೆ ಕ್ರಮ ಕೈಗೊಳ್ಳುತ್ತೇವೆ ಎಂಬುದು ದರೋಡೆಯಾದ ಮೇಲೆ ದಿಡ್ಡಿ ಬಾಗಿಲು ಹಾಕಿದಂತೆ. ಅದರಿಂದ ಉಪಯೋಗವೇನೂ ಇಲ್ಲ. ರಿಸರ್ವ್ ಬ್ಯಾಂಕ್‌ನಿಂದ ಅಂಗೀಕೃತಗೊಂಡ ಹಣಕಾಸು ಸಂಸ್ಥೆಗಳಿಗಿಂತ ಈ ಬ್ಲೇಡ್ ಕಂಪನಿಗಳು ಜನರನ್ನು ಆಕರ್ಷಿಸಲು ಎಲ್ಲ ಕಸರತ್ತುಗಳನ್ನು ಮಾಡುತ್ತವೆ. ಆಗಲೇ ರಿಸರ್ವ್ ಬ್ಯಾಂಕ್ ಜನರನ್ನು ಎಚ್ಚರಿಸಿದರೆ ಅವರು ಮೋಸ ಹೋಗುವುದನ್ನು ತಪ್ಪಿಸಬಹುದು. ಮೋಸಕ್ಕೆ ಅಮಾಯಕ ಜನ ಬಲಿಯಾಗುವುದನ್ನು ಮೂಕ ಪ್ರೇಕ್ಷಕರಂತೆ ನಿಂತು ನೋಡುವುದು ಅನಾಗರಿಕ ವರ್ತನೆ. ಈ ವಿಷಯದಲ್ಲಿ ರಾಜಕೀಯ ತಲೆಹಾಕಬಾರದು. ಆರ್ಥಿಕ ಅಪರಾಧಗಳ ವಿಷಯದಲ್ಲಿ ನಿರ್ದಾಕ್ಷಿಣ್ಯ ಕ್ರಮ ಅನಿವಾರ್ಯ.