ರಾಜ್ಯ ಕಾಂಗ್ರೆಸ್ ಸರ್ಕಾರ ಇದೀಗ ರಾಜ್ಯಾದ್ಯಂತ ಒಂದೇ ದಿನ ಜಿಲ್ಲಾ ಮಟ್ಟದಲ್ಲಿ ಜನತಾ ದರ್ಶನ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಜನತೆಗೆ ಇನ್ನಷ್ಟು ವಿವಿಧ ಯೋಜನೆಗಳ ಲಾಭ ದೊರೆಯುವಂತೆ ಮಾಡಿದೆ. ಹಿಂದೆ ಕಾಂಗ್ರೆಸ್ ಸರ್ಕಾರ ಆಡಳಿತದಲ್ಲಿದ್ದಾಗ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿ ಜಿಲ್ಲಾ ಸ್ಥಳಗಳಲ್ಲಿ ಜನ ಸಂಪರ್ಕ ಸಭೆಗಳನ್ನು ನಡೆಸಿ ಜನ ಸಮಸ್ಯೆಗೆ ಪರಿಹಾರ ಸೂಚಿಸುತ್ತಿದ್ದರು. ಈಗ ಮತ್ತೆ ಜನತಾ ದರ್ಶನ ಮೂಲಕ ಜನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಅನುಕೂಲ ಕಲ್ಪಿಸಿದ್ದಾರೆ. ಇದು ಪ್ರಥಮ ಜನತಾ ದರ್ಶನವಾಗಿದ್ದರೂ ಜನಸಂದಣಿ ಎಲ್ಲಡೆ ಹೆಚ್ಚಾಗಿ ಕಂಡು ಬಂದದ್ದು ವಿಶೇಷ.
ವಿಜಯಪುರದಲ್ಲಿ ನಡೆದ ಜನತಾ ದರ್ಶನ ಸಭೆಗೆ ಸಚಿವರು ಬರಲಿಲ್ಲ. ಮೀಸಲು ಮತಕ್ಷೇತ್ರ ನಾಗಠಾಣದ ಶಾಸಕ ವಿಠ್ಠಲ ಕಟಕದೊಂಡ ಮಾತ್ರ ಉಪಸ್ಥಿತರಿದ್ದು ಸರ್ಕಾರದ ಈ ಮಹತ್ವಾಕಾಂಕ್ಷಿ ಜನತಾ ದರ್ಶನದ ಮೂಲಕ ವಿವಿಧ ಯೋಜನೆಗಳ ಲಾಭ ಪಡೆಯಬೇಕೆಂದು ಹೇಳಿದರು.
ಅವರು ಹೇಳಿದಂತೆ ಸಹಸ್ರಾರು ಜನ ಕೊಟ್ಟ ಮನವಿಗಳಲ್ಲಿ ಸರ್ಕಾರಿ ಯೋಜನೆಗಳ ಅನುಷ್ಠಾನದಲ್ಲಿ ಅಧಿಕಾರಿಗಳ ನಿರ್ಲಕ್ಷ್ಯ ಭಾವನೆ ಎದ್ದು ಕಾಣುವಂತಾಯಿತು. ಅನೇಕರಿಗೆ ಮೂರು ತಿಂಗಳು ಕಳೆದರೂ ಗ್ಯಾರಂಟಿಗಳ ಲಾಭ ತಟ್ಟದೆ ಇರುವುದು ಅಧಿಕಾರಿಗಳ ನಿರಾಸಕ್ತಿ ಎಂಬುದನ್ನು ಬೇರೆ ಹೇಳಬೇಕಿಲ್ಲ.
ಆದರೆ ವಿಚಿತ್ರವೆಂದರೆ ಕಳೆದ ಹತ್ತಾರು ವರ್ಷಗಳಿಂದ ಇದ್ದ ಸಮಸ್ಯೆಗಳೆ ಪುನಃ ಈ ಜನತಾ ದರ್ಶನದಲ್ಲಿ ಕಂಡು ಬಂದಿತು. ರೈತರಿಗೆ ವಿದ್ಯುತ್ ಸಮಸ್ಯೆ ಅನೇಕ ವರ್ಷಗಳಿಂದ ವಿಜಯಪುರದ ಮನೆ ಮಾತಾಗಿದೆ. ನಿತ್ಯ ಕನಿಷ್ಟ ಆರು ಗಂಟೆಯಾದರೂ ವಿದ್ಯುತ್ ಪೂರೈಸಿ ಎಂಬ ಅವರ ಬೇಡಿಕೆಗೆ ಮನ್ನಣೆಯೆ ಇಲ್ಲ. ಹೊಸ ಸರ್ಕಾರ ಆಡಳಿತಕ್ಕೆ ಬಂದ ನಂತರ ವಿದ್ಯುತ್ ಸಮಸ್ಯೆ ನಿವಾರಣೆ ಆಗಬಹುದೆಂದು ರೈತರು ನಿರೀಕ್ಷಿಸಿದ್ದರು. ಆದರೆ ಉಪಮುಖ್ಯಮಂತ್ರಿ ಮತ್ತು ಇಂಧನ ಸಚಿವರು ವಿದ್ಯುತ್ ಕೊರತೆ ನೀಗಿಸಲು ಕಲ್ಲಿದ್ದಲು ಬೇಕು. ಆದರೆ ಕೇಂದ್ರ ಗುಣಮಟ್ಟದ ಕಲ್ಲಿದ್ದಲು ನೀಡುತ್ತಿಲ್ಲ ಎಂಬ ಹೇಳಿಕೆ ನೀಡಿದ್ದರಿಂದ ಈಗ ವಿಜಯಪುರದಲ್ಲಿ ನಿತ್ಯ ವಿದ್ಯುತ್ ದೈತ್ಯ ಕುಣಿತ ಪ್ರಾರಂಭವಾಗಿದೆ.
ನೀರಾವರಿ ಪ್ರದೇಶಗಳಲ್ಲಿ ವಿದ್ಯುತ್ ಅಭಾವ ಬೆಳೆಗಳ ಮೇಲೆ ಗಂಭೀರ ಪರಿಣಾಮ ಬೀರಿದೆ. ನೀರಿದ್ದರೂ ವಿದ್ಯುತ್ ಅಭಾವದಿಂದ ಬೆಳೆ ಕಮರುತ್ತಿವೆ. ಸರ್ಕಾರಕ್ಕೆ ರೈತ ಸಂಘಟನೆಗಳು ಸಾಕಷ್ಟು ಮನವಿ ಮಾಡಿದರೂ ಯಾವುದೇ ಕ್ರಮಗಳಿಲ್ಲ. ಹೀಗಾಗಿ ರೈತರು ಹಿಡಿ ಶಾಪ ಹಾಕುತ್ತಿದ್ದಾರೆ. ಇದರ ಜೊತೆಗೆ ಚಿಕ್ಕ ಉದ್ದಿಮೆದಾರರು ವಿದ್ಯುತ್ ದರ ಹೆಚ್ಚಳದಿಂದ ಮಹಾರಾಷ್ಟ್ರ ಗಡಿ ಭಾಗಕ್ಕೆ ಸ್ಥಳಾಂತರಿಸಲು ಅಲ್ಲಿ ನಿವೇಶನ ಕೂಡ ಖರೀದಿ ಮಾಡಿದ್ದಾರೆ. ಅದು ಕೂಡ ರಾಜ್ಯಕ್ಕೆ ದೊಡ್ಡ ಪ್ರಹಾರವೇ ಸರಿ. ಮಹಾರಾಷ್ಟ್ರದಲ್ಲಿ ಉದ್ದಿಮೆದಾರರಿಗೆ ಸಕಲ ಸೌಲಭ್ಯ ಮತ್ತು ರಿಯಾಯತಿ ದೊರೆಯುತ್ತಿದೆ ಎಂದು ಅವರೆ ಹೇಳುತ್ತಿದ್ದಾರೆ.
ಈ ಪ್ರಶ್ನೆ ಕೂಡ ಜನತಾ ದರ್ಶನದಲ್ಲಿ ಬಂದಿತಾದರೂ ಜಿಲ್ಲಾಧಿಕಾರಿಗಳು ಮತ್ತು ವಿದ್ಯುತ್ ಅಧಿಕಾರಿಗಳು ಉತ್ತರ ಕೊಡುವ ಸ್ಥಿತಿಯಲ್ಲಿ ಇರಲಿಲ್ಲ. ಇನ್ನೂ ಮಹತ್ವದ ವಿಷಯವೆಂದರೆ ಉಚಿತ ವಿದ್ಯುತ್ ಯೋಜನೆಯಿಂದ ಆ ಇಲಾಖೆಗೆ ನೀಡಬೇಕಾದ ಅನುದಾನ ಸರ್ಕಾರ ಸಾಕಷ್ಟು ಬಾಕಿ ಉಳಿಸಿಕೊಂಡಿದೆ. ಆದರೆ ಮುಂದಿನ ತಿಂಗಳು ವಿದ್ಯುತ್ ಇಲಾಖೆಯ ಸಿಬ್ಬಂದಿಗೆ ವೇತನ ನೀಡಲು ಸಾಧ್ಯವಾಗದು ಎಂದು ಹೇಳಲಾಗುತ್ತಿದೆ. ಇದರಿಂದ ಇನ್ನಷ್ಟು ಸಮಸ್ಯೆ ಆಗಲೂ ಬಹುದು ಎಲ್ಲವೂ ಸರ್ಕಾರದ ಗಟ್ಟಿ ನಿರ್ಧಾರದ ಮೇಲೆ ಅವಲಂಬಿತವಾಗಿದೆ.
ಜನತಾ ದರ್ಶನ ಹಾಗೆ ಪ್ರಾರಂಭವಾದದ್ದು ೧೯೮೩ ರಲ್ಲಿ ರಾಮಕೃಷ್ಣ ಹೆಗಡೆ ಸರ್ಕಾರವಿದ್ದಾಗ. ಅವರು ತಮ್ಮ ಮನೆಯಲ್ಲಿಯೆ ನಿತ್ಯ ಜನತೆಯ ಮನವಿ ಸ್ವೀಕರಿಸುತ್ತಿದ್ದರು. ನಂತರ ಪ್ರತಿ ಜಿಲ್ಲೆಯಲ್ಲಿ ಜನ ಸಂಪರ್ಕ ಸಭೆ ಪ್ರಾರಂಭಿಸಿದರು. ತಾವು ಭೇಟಿ ನೀಡುವ ಪ್ರದೇಶಗಳಲ್ಲಿ ಅವರು ಬೆಳಗ್ಗೆ ಜನರಿಂದ ಮನವಿ ಸ್ವೀಕರಿಸಿ ಅವುಗಳಿಗೆ ಪರಿಹಾರ ಕೊಡುತ್ತಿದ್ದರು. ಜನತಾ ದರ್ಶನದ ಉದ್ದೇಶವೇ ಜನರ ಸಮಸ್ಯೆ ಪರಿಹಾರ. ವಿಜಯಪುರದ ಜನತಾ ದರ್ಶನದಲ್ಲಿ ಸರ್ಕಾರಿ ಯೋಜನೆಗಳ ಲಾಭ ತಟ್ಟದೆ ಇರುವ ಬಗ್ಗೆ ಬಹಳಷ್ಟು ದೂರುಗಳು ಬಂದಿದ್ದವು. ಹಿಂದೊಮ್ಮೆ ಇದೇ ವಿಷಯದ ಮೇಲೆ ಜಿಲ್ಲಾಧಿಕಾರಿಗಳು ಖುದ್ದು ಫಲಾನುಭವಿ ಮನೆಗೆ ಹೋಗಿ ಅವರಿಗೆ ಪಿಂಚಣಿ ಮತ್ತು ಮನೆಯ ಸೌಲಭ್ಯ ಕೂಡ ಕೊಟ್ಟು ಬಂದ ಉದಾಹರಣೆ ಇದೆ.