ಜಗತ್ತಿನಲ್ಲಿ ಜೈನ ಧರ್ಮವೇ ಇದ್ದರೆ ವಿಶ್ವಕ್ಕೇ ಶಾಂತಿ

Advertisement


ಹುಬ್ಬಳ್ಳಿ: ಇಲ್ಲಿನ ದಿಗಂಬರ ಜೈನ್ ಬೋರ್ಡಿಂಗ್‌ನ ನೂತನ ವಿದ್ಯಾರ್ಥಿ ನಿಲಯ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನೂತನ ವಿದ್ಯಾರ್ಥಿ ನಿಲಯಕ್ಕೆ ರಾಜ್ಯ ಸರ್ಕಾರದಿಂದ ೫೦ ಲಕ್ಷ ಅನುದಾನ ನೀಡುವುದಾಗಿ ಘೋಷಿಸಿದರು.
ದಿಗಂಬರ ಜೈನ್ ಬೋರ್ಡಿಂಗ್ ಸಂಸ್ಥೆ ಶತಮಾನ ಕಂಡಿರುವ ಸಂಸ್ಥೆ. ೧೯೦೯ರಲ್ಲಿ ಸ್ಥಾಪನೆಗೊಂಡಿದೆ. ಸಮಾಜದ ಮಹನೀಯರು ಪರಿಶ್ರಮದಿಂದ ನಡೆಸಿಕೊಂಡು ಬಂದಿದ್ದಾರೆ. ಕಾಲಕ್ಕೆ ತಕ್ಕಂತೆ ವಿದ್ಯಾರ್ಥಿನಿಲಯ ಪ್ರವೇಶಕ್ಕೆ ಸಮಾಜದ ವಿದ್ಯಾರ್ಥಿಗಳು ಬಯಸಿ ಬರುವುದು ಸಹಜ. ಅದಕ್ಕೆ ತಕ್ಕಂತೆ ಸಮಾಜ ಸ್ಪಂದಿಸಿ ಅನುಕೂ¯ತೆಗಳನ್ನು ಮಾಡಿಕೊಡಬೇಕಾಗುತ್ತದೆ. ನೂತನ ವಿದ್ಯಾರ್ಥಿ ನಿಲಯ ನಿರ್ಮಾಣ ಕಾರ್ಯ ಕೈಗೊಂಡಿದ್ದು, ಉತ್ತಮ ಕಾರ್ಯ. ಸರ್ಕಾರವೂ ಇದಕ್ಕೆ ಕೈ ಜೋಡಿಸಲಿದೆ ಎಂದು ನುಡಿದರು.
ಹುಬ್ಬಳ್ಳಿ ಜೈನ ಸಮಾಜ ಒಟ್ಟು ಸಮಾಜದ ಏಳಿಗೆಯಲ್ಲಿ ತನ್ನದೇ ಆದ ಕೊಡುಗೆಯನ್ನು ನೀಡಿದೆ. ವೃತ್ತಿಯ ಜೊತೆಗೆ ಸಮಾಜಮುಖಿ ಕಾರ್ಯಗಳಲ್ಲಿ ಜೈನ ಸಮಾಜ ಬಾಂಧವರು ನಿಸ್ವಾರ್ಥ ರೀತಿ ತೊಡಿಸಿಕೊಂಡು ಬಂದಿರುವುದನ್ನು ನಾನು ಹಲವು ದಶಕಗಳಿಂದ ಕಂಡಿದ್ದೇನೆ. ನಮ್ಮ ತಂದೆಯವರೂ ಜೈನ ಸಮಾಜದೊಂದಿಗೆ ಬಹು ಒಡನಾಟ ಹೊಂದಿದ್ದರು ಎಂದು ಮುಖ್ಯಮಂತ್ರಿ ನೆನಪಿಸಿಕೊಂಡರು.
ಜಗತ್ತಿನಲ್ಲಿ ಜೈನ ಧರ್ಮವೇ ಇದ್ದರೆ ವಿಶ್ವಕ್ಕೇ ಶಾಂತಿ
ಜಗತ್ತಿನಲ್ಲಿ ಜೈನ ಧರ್ಮವೇ ಇದ್ದರೆ ಈ ಯುದ್ಧ, ಬಾಂಬ್, ಭಯೋತ್ಪಾದನೆ, ವೈಷಮ್ಯ ಯಾವುದೂ ಇರುತ್ತಿರಲಿಲ್ಲ. ಸಾಕಷ್ಟು ಹಣ ಉಳಿಯುತ್ತಿತ್ತು. ಆ ಹಣದಲ್ಲಿ ಜನ ಕಲ್ಯಾಣ ಕಾರ್ಯಗಳನ್ನು ಕೈಗೊಳ್ಳಬಹುದಾಗಿತ್ತು. ಜನರೂ ಶಾಂತಿ ನೆಮ್ಮದಿಯಿಂದ ಇರುತ್ತಿದ್ದರು. ಅಂತಹ ಮಹೋನ್ನತವಾದ ಅಹಿಂಸಾ ತತ್ವ ಸಂದೇಶವನ್ನು ಹೊಂದಿರುವ ಜೈನ ಧರ್ಮ ಹೊಂದಿದೆ ಎಂದು ನುಡಿದರು.
ಎಲ್ಲ ಧರ್ಮದ ಉದ್ದೇಶ, ತಿರುಳು ಒಂದೇ. ಆದರೆ ಆಚರಣೆ ಮಾತ್ರ ಬೇರೆ ಬೇರೆಯಾಗಿರುತ್ತದೆ. ಮೂಲತತ್ವ ಉಳಿಸಿಕೊಂಡು ನಡೆಯುವ ಧರ್ಮ ಹಾಗೆಯೇ ಶತ ಶತಮಾನಕ್ಕೂ ಉಳಿದುಕೊಂಡು ಬರುತ್ತದೆ. ಮಾಡಬಾರದ್ದು ಮಾಡಿದರೆ ಧರ್ಮ ಉಳಿಯುವುದು ಕಷ್ಟ. ಜೈನ ಧರ್ಮ ಮೂಲತತ್ವ ಉಳಿಸಿಕೊಂಡು ಬಂದಿದೆ. ಧರ್ಮ ಆಚರಣೆ, ತತ್ವ ಪರಿಪಾಲನೆಯಲ್ಲಿ ಜೈನ ಧರ್ಮೀಯರು ಕಟಿಬದ್ಧರು. ಪರಿಶುದ್ಧರು. ಯಾವುದೇ ಕಾರಣಕ್ಕೂ ಅವರು ಧರ್ಮದ ಆಚರಣೆಯಲ್ಲಿ ಒಂಚೂರು ಬದಲಾವಣೆ ಮಾಡಿಕೊಳ್ಳುವುದಿಲ್ಲ ಎಂದು ಹೇಳಿದರು.
ಸಾನ್ನಿಧ್ಯವಹಿಸಿದ್ದ ಶ್ರೀ ಕ್ಷೇತ್ರ ಹೊಂಬುಜದ ಸ್ವಸ್ತಿಶ್ರೀ ಡಾ.ದೇವೇಂದ್ರಕೀರ್ತಿ ಭಟ್ಟಾರಕ ಮಹಾಸ್ವಾಮಿ ಮಾತನಾಡಿ, ಸರ್ವಧರ್ಮ ಸಮಪಾಲು ಎಂಬ ಧ್ಯೇಯದೊಂದಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನಾಡಿನ ಎಲ್ಲ ಸಮಾಜಗಳ ಹಿತ ರಕ್ಷಣೆಗೆ ಕೆಲಸ ಮಾಡುತ್ತಿದ್ದಾರೆ. ಜೈನ ಸಮಾಜಕ್ಕೂ ಅನುದಾನ ದೊರಕಿಸಿ ಸರ್ಕಾರದಿಂದ ಸಹಾಯ ಮಾಡಿದ್ದಾರೆ. ಜೈನ ಧರ್ಮ ನಿಗಮ ಸ್ಥಾಪನೆ, ಜೈನ ಬಸದಿ ಸಂರಕ್ಷಣೆಗೆ ವಿಶೇಷ ಒತ್ತು ನೀಡಿ ಸ್ಪಂದಿಸಿದ್ದಾರೆ ಎಂದು ನುಡಿದರು.
ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದ ಜೈನ್ ಬೋರ್ಡಿಂಗ್‌ನ ಚೇರಮನ್ ವಿದ್ಯಾಧರ ಪಿ.ಪಾಟೀಲ, ಜೈನ್ ಬೋರ್ಡಿಂಗ್‌ಗೆ ಪ್ರವೇಶ ಬಯಸಿ ಬರುವ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಪ್ರವೇಶ ಮಿತಿ ೬೦ ಇತ್ತು. ಈ ವರ್ಷ ೨೦೦ ಅರ್ಜಿಗಳು ಬಂದಿವೆ. ಹೀಗಾಗಿ ನೂತನ ವಿದ್ಯಾರ್ಥಿನಿಲಯ ಸ್ಥಾಪನೆ ತೀರ್ಮಾನವನ್ನು ಕಮಿಟಿ ಕೈಗೊಂಡಿದ್ದು, ಮುಖ್ಯಮಂತ್ರಿಗಳು ಭೂಮಿ ಪೂಜೆ ನೆರವೇರಿಸಿದ್ದಾರೆ. ಸಮುದಾಯದ ದಾನಿಗಳ ನೆರವಿನೊಂದಿಗೆ ನಿರ್ಮಾಣ ಮಾಡಲಾಗುತ್ತಿದೆ ಎಂದು ಹೇಳಿದರು.
ಶಾಸಕ ಪ್ರಸಾದ ಅಬ್ಬಯ್ಯ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದರು. ಜೈನ ಸಮಾಜದವತಿಯಿಂದ ಮುಖ್ಯಮಂತ್ರಿ ಹಾಗೂ ಶಾಸಕ ಪ್ರಸಾದ್ ಅಬ್ಬಯ್ಯ ಅವರನ್ನು ಸನ್ಮಾನಿಸಲಾಯಿತು. ಆಡಳಿತ ಮಂಡಳಿಯ ವೈಸ್ ಚೇರಮನ್ ರಾಘವೇಂದ್ರ ತವನಪ್ಪನವರ, ಸಹ ಕಾರ್ಯದರ್ಶಿ ದೇವೇಂದ್ರಪ್ಪ ಕಾಗೇನವರ, ದಕ್ಷಿಣ ಭಾರತ ಜೈನ ಸಭಾದ ಮಹಾಮಂತ್ರಿ ಬಾಬಹುಲಿ ಬಸ್ತಿ ಹಾಗೂ ಆಡಳಿತ ಮಂಡಳಿ ಪದಾಧಿಕಾರಿಗಳು, ಸದಸ್ಯರು ಇದ್ದರು. ದಕ್ಷಿಣ ಭಾರತ ಜೈನ ಸಭಾದ ಉಪಾಧ್ಯಕ್ಷ ಜಿ.ಜಿ. ಲೋಬೋಗೋಳ ವಂದಿಸಿದರು.
ಕಾರ್ಯಕ್ರಮಕ್ಕೂ ಮುನ್ನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಶ್ರೀ ೧೦೮ ಚಂದ್ರಪ್ರಭ ದಿಗಂಬರ ಜೈನ ಮಂದಿರಕ್ಕೆ ಭೇಟಿ ನೀಡಿ ದರ್ಶನ ಪಡೆದರು. ಹಾವೇರಿ ಜಿಲ್ಲೆ ಜೈನ ಸಮಾಜದವತಿಯಿಂದ ಮುಖ್ಯಮಂತ್ರಿಯವರನ್ನು ಸನ್ಮಾನಿಸಲಾಯಿತು.


ಅಸ್ತಿತ್ವ ಕಳೆದುಕೊಂಡರೆ ಶಾಶ್ವತ ಅಸ್ತಿತ್ವ
ದೇವರು ಮನುಷ್ಯನಿಗೆ ಮೆದುಳು, ಹೃದಯ ಕೊಟ್ಟ. ಮೆದುಳು ಒಂದು ಹೇಳಿದರೆ ಹೃದಯ ಒಂದು ಹೇಳುತ್ತದೆ. ಅಸ್ತಿತ್ವ ಕಳೆದುಕೊಳ್ಳುವುದರಲ್ಲಿ ಬದುಕಿನ ಸಾರ್ಥಕತೆ ಇದೆ ಎಂದು ಯೋಗಿಗಳು, ತ್ಯಾಗಿಗಳು ಹೇಳುತ್ತಾರೆ. ಆದರೆ, ಅದನ್ನು ಕಳೆದುಕೊಳ್ಳುವುದು ಕಷ್ಟ. ಅಸ್ತಿತ್ವ ಕಳೆದುಕೊಂಡವರೇ ಸಮಾಜದಲ್ಲಿ ಶಾಶ್ವತವಾಗಿ ಅಸ್ತಿತ್ವದಲ್ಲಿ ಉಳಿದುಕೊಂಡಿದ್ದಾರೆ. ಭಗವಾನ್ ಮಹಾವೀರರೇ ಇದಕ್ಕೆ ನಿದರ್ಶನ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನುಡಿದರು.