ಇಳಕಲ್ : ಇಲ್ಲಿನ ಗೌಳೇರಗುಡಿ ನವನಗರದದಲ್ಲಿ ಮೂಲಭೂತ ಸೌಕರ್ಯ ಮತ್ತು ಮಹಿಳೆಯರ ಬಹಿರ್ದೆಸೆಗೆ ತೊಂದರೆಯಾಗಿದ್ದು ಅದನ್ನು ಪರಿಹರಿಸಬೇಕು ಎಂದು ಅಲ್ಲಿನ ಮಹಿಳೆಯರು ಮಂಗಳವಾರದಂದು ಕೈಯಲ್ಲಿ ಚೆಂಬು ಹಿಡಿದು ಪ್ರತಿಭಟನೆ ಮಾಡಿದರು.
ನವನಗರದ ಪಕ್ಕದ ಬಯಲಿನಲ್ಲಿ ಮಹಿಳೆಯರು ಬಹಿರ್ದೆಸೆಗೆ ಹೋಗುತ್ತಿದ್ದರು ಆದರೆ ಆ ಸ್ಥಳದ ಮಾಲಿಕರು ಅಲ್ಲಿ ಪ್ಲಾಟುಗಳನ್ನು ಮಾಡಿ ಸುತ್ತಲೂ ಒಳಗೆ ಹೋಗದಂತೆ ಬೇಲಿ ಹಾಕಿದ್ದರಿಂದ ಮಹಿಳೆಯರು ತೊಂದರೆಗೆ ಸಿಲುಕಿದರು.
ಇದರಿಂದಾಗಿ ರೋಸಿ ಹೋದ ಮಹಿಳಾ ಮಣಿಗಳು ತಮ್ಮ ತಮ್ಮ ಕೈಯಲ್ಲಿ ಚೆಂಬು ಹಿಡಿದುಕೊಂಡು ಧರಣಿ ಕುಳಿತಿದ್ದರಿಂದ ನಗರಸಭೆಯ ಪೌರಾಯುಕ್ತರು ಸದಸ್ಯರಾದ ರೇಶ್ಮಾ ಮಾರನಬಸರಿ , ಸುರೇಶ್ ಜಂಗ್ಲಿ ಅಮೃತ ಬಿಜ್ಜಳ ಮೌಲಪ್ಪ ಬಂಡಿವಡ್ಡರ ಮತ್ತಿತರರು ಸೇರಿ ಸ್ಥಳಕ್ಕೆ ಧಾವಿಸಿ ಮಹಿಳೆಯರ ಜೊತೆಗೆ ಚರ್ಚೆ ಮಾಡಿ ಅವರನ್ನು ಸಮಾಧಾನಗೊಳಿಸಿದರು.
ಗೌಳೇರಗುಡಿ ಭಾಗದಲ್ಲಿ ಮಹಿಳೆಯರಿಗೆ ಸುಲಭ ಶೌಚಾಲಯ ಜೊತೆಗೆ ಒಳಚರಂಡಿ ವ್ಯವಸ್ಥೆ ಮಾಡಿ ಮನೆ ಮನೆಗಳಲ್ಲಿ ವೈಯುಕ್ತಿಕ ಶೌಚಾಲಯ ಕಟ್ಟಿಸಿಕೊಳ್ಳಲು ವ್ಯವಸ್ಥೆ ಮಾಡಿಕೊಡುವ ಭರವಸೆ ನೀಡಿದರು.
ಈಗಾಗಲೇ ಕಾಮಗಾರಿ ಟೆಂಡರ್ ಆಗಿದ್ದು ಚುನಾವಣೆ ನೀತಿ ಸಂಹಿತೆಯಿಂದಾಗಿ ಕೆಲಸ ಆರಂಭವಾಗಿಲ್ಲ ಕಾಮಗಾರಿಯನ್ನು ಶೀಘ್ರದಲ್ಲಿ ಆರಂಭಿಸಿ ೪೫ ದಿನಗಳಲ್ಲಿ ಸುಲಭ ಶೌಚಾಲಯ ನಿರ್ಮಿಸಲಾಗುವದು ಎಂಬ ಭರವಸೆ ನೀಡಿದ ಮೇಲೆ ಮಹಿಳೆಯರು ಧರಣಿ ಅಂತ್ಯಗೊಳಿಸಿದರು.