ಚುನಾವಣೆ ನಂತರ ಪ್ರಧಾನಿ ಮೋದಿ ಮಾತಿನ ಶೈಲಿಯಲ್ಲಿ ಬದಲಾವಣೆ

Advertisement

ಕಲಬುರಗಿ: ಮೊದಲ ಹಂತದ ಲೋಕಸಭೆ ಚುನಾವಣೆಯಲ್ಲಿ ನಿರೀಕ್ಷೆಗೆ ತಕ್ಕಂತೆ ಮತ ಬಂದಿಲ್ಲ ಎಂದು ಮನವರಿಕೆಯಾದ ನಂತರ ಪ್ರಧಾನಿ ನರೇಂದ್ರ ಮೋದಿ ಅವರ ಮಾತಿನ ಶೈಲಿಯೇ ಬದಲಾಗಿದೆ. ಆದರೂ ಕೂಡಾ‌ ಚುನಾವಣಾ ಆಯೋಗ ಯಾವುದೇ ಕ್ರಮ ಜರುಗಿಸುತ್ತಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಟೀಕಿಸಿದ್ದಾರೆ.
ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಮೂರು ದಿನಗಳ ಹಿಂದೆ ರಾಜಸ್ತಾನದಲ್ಲಿ ಚುನಾವಣೆ ಭಾಷಣ ಮಾಡಿದ ಮೋದಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮಹಿಳೆಯರ ಮಂಗಲಸೂತ್ರ ಕಿತ್ತು ಮುಸ್ಲಿಮರ ಕೈಗೆ ಕೊಡುತ್ತದೆ ಎಂದು ಹೇಳಿದ್ದಾರೆ. ಅವರ ಹೇಳಿಕೆಗಳು ಹತಾಶೆರಾಗಿರುವುದು ತೋರಿಸುವುದರ ಜೊತೆಗೆ ಪ್ರಧಾನಿ ಹುದ್ದೆಯ ಘನತೆಗೆ ಕುಂದು ಉಂಟಾಗುವಂತೆ ಇವೆ ಎಂದರು.

ಮೋದಿಯವರ ಹೇಳಿಕೆ ಬಂದು ಮೂರು ದಿನವಾಗಿ ಕನಿಷ್ಠ 20 ಸಾವಿರ ಜನರು ಸಹಿ ಹಾಕಿರುವ ದೂರನ್ನು ಸಲ್ಲಿಸಲಾಗಿದೆ. ಕಾಂಗ್ರೆಸ್ ನಾಯಕರ ಮೇಲೆ ತಕ್ಷಣವೇ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಳ್ಳುವ ಚುನಾವಣಾ ಆಯೋಗ ಈಗ ನಿದ್ದೆ ಮಾಡುತ್ತಿದೆಯಾ ? ಅಥವಾ ಸತ್ತಿದೆಯಾ? ಸಂವಿಧಾನ ಬದ್ಧ ಸ್ವಾಯತ್ತ ಸಂಸ್ಥೆಯಾದ ಆಯೋಗ ಈ ವಿಚಾರದಲ್ಲಿ ಸುಮ್ಮನಿದೆ. ಒಂದು ಕಣ್ಣಿಗೆ ಬೆಣ್ಣೆ ಮತ್ತೊಂದು ಕಣ್ಣಿಗೆ ಸುಣ್ಣ ಹಚ್ಚುವ ಧೋರಣೆ ಅನುಸರಿಸುತ್ತಿರುವುದು ನೋಡಿದರೆ ಆಯೋಗವೂ ಕೂಡಾ ಬಿಜೆಪಿ ಮುಂಚೂಣಿ ಘಟಕ ದಂತೆ ಕಾಣುತ್ತಿದೆ ಹಾಗಾಗಿ ಅದು ತನ್ನ ಬೋರ್ಡ್ ಬದಲಿಸಲಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ತ್ರಿವಳಿ ತಲಾಖ್, ಕಾಶ್ಮೀರದಲ್ಲಿ ಸಂವಿಧಾನದ 370 ನೇ ವಿಧಿ ರದ್ದು ಮಾಡಿದ ನಂತರದ ‌ಮುಸ್ಲಿಮರು ಸ್ವಾಭಿಮಾನಿಗಳಾಗಿ ಜೀವಿಸುವಂತೆ ಮಾಡಿರುವುದಾಗಿ ಹೇಳಿದ್ದರು. ಆದರೆ, ಮೊದಲ ಹಂತದ ಚುನಾವಣೆಯ ನಂತರ ಮುಸ್ಲಿಮರ ಕುರಿತಂತೆ ಹೇಳಿಕೆ ನೀಡುತ್ತಿದ್ದಾರೆ. ಎಸ್ ಸಿ‌ ಹಾಗೂ ಎಸ್ ಟಿಗಳ ಮೀಸಲಾತಿ ಕಿತ್ತುಕೊಂಡು ಮುಸ್ಲಿಮರಿಗೆ ಹಂಚುವ ಪ್ರಯತ್ನ ನಡೆದಿತ್ತು ಎಂದು ಹೇಳಿದ್ದಾರೆ. ಇದು ಮೋದಿ ಅವರು ಹತಾಶೆಯನ್ನು ತೋರಿಸುತ್ತದೆ ಎಂದು ಹರಿಹಾಯ್ದರು.

” ರಾಜಸ್ತಾನದಲ್ಲಿ ರಾಮನ ಹೆಸರಿನಲ್ಲಿ ಮತ ಕೇಳುತ್ತಾರೆ. ಹನುಮಾನ್ ಚಾಲೀಸ್ ಹೇಳಿದರೆ ಹಲ್ಲೆ ಮಾಡಲಾಗುತ್ತದೆ ಎಂದು ಪ್ರಚಾರ ಭಾಷಣದಲ್ಲಿ ಹೇಳುತ್ತಾರೆ. ಸ್ವತಃ ಬಿಜೆಪಿಯ ಶಾಸಕ ಗರುಡಾಚಾರ್ ಈ ಹಲ್ಲೆ ನಡೆದಿಲ್ಲ ಎಂದು ಹೇಳಿದ್ದಾರೆ. ಜೊತೆಗೆ ಎಫ್ ಐ ಆರ್ ನಲ್ಲಿಯೂ ಉಲ್ಲೇಖಿಸಿಲ್ಲ. ಆದರೂ ಕೂಡಾ ರಾಜ್ಯದ ಮರ್ಯಾದೆ ಹಾಳು ಮಾಡುವ ಹೇಳಿಕೆಯನ್ನು ಮೋದಿ ನೀಡಿದ್ದಾರೆ. ಇತ್ತೀಚಿಗೆ ನಾಗಪುರಕ್ಕೆ ಭೇಟಿ ನೀಡಿದ ನಂತರ ಮೋದಿ ವರಸೆ ಬದಲಾಗಿದೆ” ಎಂದು ಟೀಕಿಸಿದರು.

ಮೀಸಲಾತಿ ಕುರಿತಂತೆ ಕಾಂಗ್ರೆಸ್ ಜನವಿರೋಧಿ ನಿಲುವು ತಾಳಿಲ್ಲ ಬದಲಿಗೆ ಮೀಸಲಾತಿ‌ ವಿಚಾರದಲ್ಲಿ ಬಿಜೆಪಿಯವರು‌ ಚೆಲ್ಲಾಟ ನಡೆಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ ಪ್ರಿಯಾಂಕ್ ಖರ್ಗೆ, ಮೀಸಲಾತಿ ರದ್ದುಗೊಳಿಸುವಂತೆ ಅಂದಿನ ಬಿಜೆಪಿ ರಾಜ್ಯ ಸಭಾ ಸದಸ್ಯ ರಾಮಾಜೋಯಿಷ್ ಸುಪ್ರಿಂ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದರು. ಸದಾಶಿವ ಆಯೋಗದ ವರದಿ ವಿಚಾರದಲ್ಲಿ ಚೆಲ್ಲಾಟವಾಡಿದ್ದಾರೆ. ಮೀಸಲಾತಿಗೆ ಸಂಬಂಧಿಸಿದಂತೆ ಬಿಎಸ್ ಯಡಿಯೂರಪ್ಪನವರ ಮನೆಯ ಮೇಲೆ ಕಲ್ಲು ತೂರಾಟ ಕೂಡಾ ನಡೆದಿತ್ತು. ಈ ಬಗ್ಗೆ ಬಿಜೆಪಿಗರು ಮಾತನಾಡಲಿ ಎಂದು ಸವಾಲಾಕಿದರು.

” ಬಿಜೆಪಿ 400 ಸೀಟು ಎಂದು ಕನವರಿಸುತ್ತಿದೆ. ಸಧ್ಯ ಮೇಲ್ಮನೆಯಲ್ಲಿ ಅವರಿಗೆ ಬಹುಮತ ಇಲ್ಲ. ಒಂದು ವೇಳೆ 400 ಸೀಟು ಗೆದ್ದರೆ ಅವರಿಗೆ ಮೇಲ್ಮನೆಯಲ್ಲೂ ಬಹುಮತ ಸಿಗಲಿದೆ. ಆಗ ಸಂವಿಧಾನ ಬದಲಾಯಿಸಬಹುದು ಎಂದು ಹುನ್ನಾರ ನಡೆಸಿದೆ. ಇದಕ್ಕೆ‌ ಪುಷ್ಠಿ ನೀಡುವಂತೆ ಸಂಸದ ಅನಂತಕುಮಾರ್ ಹೆಗಡೆ ಹೇಳಿಕೆ ನೀಡಿದ್ದಾರೆ. ಮೋದಿಯಾಗಲಿ ಅಥವಾ ಬಿಜೆಪಿಯ ಯಾವ ನಾಯಕರಾಗಲೀ ಅಧಿಕೃತವಾಗಿ ವಿರೋಧ ವ್ಯಕ್ತಪಡಿಸಿಲ್ಲ. ಆದರೆ ಈ ಸಲ ಅಬ್ ಕೀ ಬಾರ್ ಚಾರ್ ಸೌ ಪಾರ್ ಆಗಲ್ಲ ” ಎಂದರು.

ಕಾಂಗ್ರೆಸ್‌ ಅಧಿಕಾರಕ್ಕೆ ಬಂದಾಗ ಎಲ್ಲರ ಆಸ್ತಿಯನ್ನು ಆತಂಕವಾದಿಗಳಿಗೆ ಹಾಗೂ ಹೆಚ್ಚು ಮಕ್ಕಳು ಇದ್ದವರಿಗೆ ಹಂಚುತ್ತಾರೆ ಎಂದು ಹೇಳುತ್ತಾರೆ. ಬಿಜೆಪಿಯವರಿಗೆ ಅರಿವಿದೆಯಾ? ಸಂವಿಧಾನದಲ್ಲಿ‌ ಇದು ಸಾಧ್ಯವೇ? ಎಂದು ಪ್ರಶ್ನಿಸಿದ ಸಚಿವರು ಬಿಜೆಪಿಯವರಿಗೆ ಭಾಷಣ ಮಾಡಲು ವಿಷಯಗಳೇ ಇಲ್ಲ. ಭಯೋತ್ಪಾದನೆ, ಮೊಘಲ್, ರಾಮಮಂದಿರ, ಹನುಮಾನ ಚಾಲೀಸ್, ರಾಹುಲ್ ಗಾಂಧಿ ಹಾಗೂ ಖರ್ಗೆ ಬಿಟ್ಟರೇ ಬೇರೆ ವಿಚಾರಗಳೇ ಇಲ್ಲ ಎಂದು ಕಿಡಿಕಾರಿದರು.

ಮಂಗಲ ಸೂತ್ರ ಅಥವಾ ಒಡವೆ ಎನ್ನುವುದು ಭಾವನಾತ್ಮಕ ವಿಚಾರ, ಸೋನಿಯಾಗಾಂಧಿ ಈ ದೇಶಕ್ಕಾಗಿ ಮಾಂಗಲ್ಯ ಸೂತ್ರ ಕಳೆದುಕೊಂಡಿದ್ದಾರೆ.
ರಾಜ್ಯದ ಜನರು ಉದ್ಯೋಗವಿಲ್ಲದಿರುವಾಗ, ಕೊರೋನಾ ಸಂದರ್ಭದಲ್ಲಿ ಅವೈಜ್ಞಾನಿಕ ಲಾಕ್ ಡೌನ್ ಜಾರಿಯಾದಾಗ, ಚಿಕಿತ್ಸೆಗೆ ಹಣವಿಲ್ಲದಿರುವಾಗ, ಪಿ ಎಸ್ ಐ ಹಗರಣದಲ್ಲಿ ನೌಕರಿ ಪಡೆದುಕೊಳ್ಳಲು ಹಣ ಹೊಂದಿಸಲು ರಾಜ್ಯದ ಜನರು ಒಡವೆ ಮಾರಿಕೊಂಡಿದ್ದಾರೆ‌.ಆಗ ರಾಜ್ಯದಲ್ಲಿ ಅಧಿಕಾರಲ್ಲಿದ್ದ ಬಿಜೆಪಿ, ಅಂತಹ ಸ್ಥಿತಿ‌ ನಿರ್ಮಿಸಿತ್ತು ಎಂದರು.

ಹುಬ್ಬಳ್ಳಿಯಲ್ಲಿ ಇತ್ತೀಚಿಗೆ ಕೊಲೆಯಾದ ನೇಹಾ ಹಿರೇಮಠ ಅವರ ಮನೆಗೆ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ ಭೇಟಿ ನೀಡಿರಿವ ವಿಚಾರಕ್ಕೆ ಸಂಬಂಧಿಸಿದಂತೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಪ್ರಿಯಾಂಕ್ ಖರ್ಗೆ, ಪೂಜ್ಯ ಅಪ್ಪಾಜಿಯವರ ಮೇಲೆಯೂ ಕೂಡಾ ಒಂದು ಕೇಸ್ ದಾಖಲಾಗಿದೆ ಅಲ್ಲಿಗೆ ಯಾಕೆ ಭೇಟಿ ನೀಡಿಲ್ಲ ಎಂದು ಮಾರುತ್ತರ ನೀಡಿದರು.

ಲೋಕಸಭೆ ಚುನಾವಣೆಯ ನಂತರ ಆರ್. ಅಶೋಕ್ ಹಾಗೂ ವಿಜಯೇಂದ್ರ ಸ್ಥಾನ ಕಳೆದುಕೊಳ್ಳುತ್ತಾರೆ ಎಂದ ಸಚಿವರು, ಜೆಡಿಎಸ್ ಪಕ್ಷವೂ ಕೂಡಾ ಅಸ್ಥಿತ್ವದಲ್ಲಿ ಉಳಿಯಲ್ಲ ಎಂದರು. ಪ್ರಶ್ನೆಯೊಂದಕ್ಕೆ ಉತ್ತರಿಸಿದ ಖರ್ಗೆ, ಯತ್ನಾಳ ಅವರ ಮಾತಿಗೆ ಯಾಕೆ ಕಿಮ್ಮತ್ತು ಕೊಡಬೇಕು? ಅವರು ತಮ್ಮ ಪಕ್ಷದ ಹಾಗೂ ವೀರ ಸಾವರ್ಕರ್ ಇತಿಹಾಸ ತಿಳಿದುಕೊಳ್ಳಲಿ ಎಂದು ಸಲಹೆ ನೀಡಿದರು.

ಸಂಸದ ಉಮೇಶ ಜಾಧವ್ ತಮನ್ನು ಸ್ಪೆಷಲ್ ಬೇಬಿ ಎಂದು ಕರೆಯುತ್ತಿರುವುದಕ್ಕೆ ಪ್ರತಿಕ್ರಿಯಿಸಿದ ಪ್ರಿಯಾಂಕ್ ಖರ್ಗೆ, ಹೌದು ನಾನು ಸ್ಪೆಷಲ್ ಬೇಬಿನೆ. ಏನೀಗ? ಅವರಿಗೆ ಏನು ಸಮಸ್ಯೆ. ನಾನು‌ ಎನ್ ಎಸ್ ಐ‌ಯು‌ ನಲ್ಲಿದ್ದಾಗ ಹೋರಾಟ ಮಾಡಿಕೊಂಡೇ ರಾಜಕೀಯಕ್ಕೆ ಬಂದವನು. ಕಲಬುರಗಿಯಲ್ಲಿ ಉದ್ಯೋಗ ಖಾತ್ರಿ ಯೋಜನೆ ಕೈಬಿಟ್ಟಾಗ ನಾನು ಹೋರಾಟ ಮಾಡಿದ್ದೇನೆ. ಜಾಧವ್ ಅಂತಹ ಯಾವುದಾದರೂ ಹೋರಾಟ ಮಾಡಿ ರಾಜಕೀಯಕ್ಕೆ ಬಂದಿದ್ದಾರ? ನೇರವಾಗಿ ಟಿಕೇಟ್ ತೆಗೆದುಕೊಂಡು‌ ಚುನಾವಣೆ ಎದುರಿಸಿದ್ದಾರೆ ಎಂದು‌ ಕಿಚಾಯಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಎರಡು ಚೆಂಬುಗಳನ್ನು ಪ್ರದರ್ಶಿಸಿ ಉಮೇಶ್ ಜಾಧವ ಇವುಗಳನ್ನೇ ಕಲಬುರಗಿಗೆ ಕೊಟ್ಟಿದ್ದಾರೆ ಎಂದು ವ್ಯಂಗ್ಯವಾಡಿದರು.

ಬರ ಪರಿಹಾರ ಬೇಡಿಕೆ ಪ್ರಸ್ತಾವನೆ ತಡವಾಗಿ ಸಲ್ಲಿಸಲಾಗಿದೆ ಎಂದು ಗೃಹ ಸಚಿವ ಅಮಿತ್ ಶಾ ಹಾಗೂ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸುಳ್ಳು ಹೇಳಿದ್ದರು. ಆದರೆ ಸುಪ್ರಿಂ ಕೋರ್ಟ್ ನಲ್ಲಿ ರಾಜ್ಯ ಸರ್ಕಾರ ಸಲ್ಲಿಸಿದ ಅರ್ಜಿ ವಿಚಾರಣೆಗೆ ಬಂದಾಗ ಅಟಾರ್ನಿ ಜನರಲ್ ಈ ಬಗ್ಗೆ ಸುಪ್ರಿಂ ಕೋರ್ಟ್ ನಲ್ಲಿ ಹೇಳಿಲ್ಲವಲ್ಲ? ರಾಜ್ಯ ಸರ್ಕಾರ ಪ್ರಸ್ತಾವನೆ ಸಲ್ಲಿಸಿದ ನಂತರ ಅಮಿತ್ ಶಾ ಉನ್ನತ ಮಟ್ಟದ ಸಮಿತಿ ಸಭೆ ಯಾಕೆ ಮಾಡಿಲ್ಲ.? ಇದು ಕೇಂದ್ರದಿಂದ ಒಕ್ಕೂಟ ವ್ಯವಸ್ಥೆಯನ್ನು‌ ದುರ್ಬಲಗೊಳಿಸುವ ಪ್ರಯತ್ನವಾಗಿದೆ ಎಂದು ಆರೋಪಿಸಿದರು.

ಡಿಸಿಸಿ ಅಧ್ಯಕ್ಷರಾದ ಜಗದೇವ ಗುತ್ತೇದಾರ, ಶಾಸಕ ಅಲ್ಲಮಪ್ರಭು ಪಾಟೀಲ, ರಾಜಗೋಪಾಲ ರೆಡ್ಡಿ, ಡಾ ಕಿರಣ್ ದೇಶಮುಖ್, ಪ್ರವೀಣ್ ಹರವಾಳ, ಶಿವಾನಂದ ಹೊನಗುಂಟಿ, ಈರಣ್ಣ ಝಳಕಿ ಸೇರಿದಂತೆ ಹಲವರಿದ್ದರು.