ಅಭಯ ಮನಗೂಳಿ
ಬಾಗಲಕೋಟೆ: ಬಿಜೆಪಿ ಹಿರಿಯ ನಾಯಕ, ಮಾದಿಗ ಸಮುದಾಯದ ಪ್ರಭಾವಿ ಮುಖಂಡ, ಮಾಜಿ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರಿಗೆ ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಒಲಿದಿರುವುದು ಅಚ್ಚರಿಗೆ ಕಾರಣವಾಗಿದೆ. ಬಿಜೆಪಿಯಲ್ಲಿ ಅವರು ಹೊಂದಿರುವ ಪ್ರಭಾವ ಈ ಮೂಲಕ ಮತ್ತೊಮ್ಮೆ ಸಾಬೀತಾಗಿದೆ.
ಸ್ಟೋರ್ ಕೀಪರ್ ಆಗಿ ಸರ್ಕಾರಿ ಹುದ್ದೆಯಲ್ಲಿದ್ದ ಅವರು ತಮ್ಮ ಹತ್ತಿರದ ಸಂಬಂಧಿ ವಿಜಯಪುರ ಸಂಸದ ರಮೇಶ ಜಿಗಜಿಣಗಿ ಅವರ ಪ್ರಭಾವದಿಂದ ರಾಜಕೀಯ ಪ್ರವೇಶಿಸಿದ್ದರು. ರಾಮಕೃಷ್ಣ ಹೆಗಡೆ ಅವರ ಪಕ್ಕಾ ಅನುಯಾಯಿ ಆಗಿರುವ ಕಾರಜೋಳ ಅವರು ವಿಜಯಪುರ ಜಿಲ್ಲೆಯ ಕಾರಜೋಳದವರಾದರೂ ಅವರನ್ನು ಕೈ ಹಿಡಿದಿದ್ದು ಮುಧೋಳ ಮೀಸಲು ಕ್ಷೇತ್ರದ ಜನ.
೧೯೯೪ರಲ್ಲಿ ಮುಧೋಳ ಶಾಸಕರಾಗಿ ಆಯ್ಕೆಯಾದ ಅವರು ೧೯೯೯ರಲ್ಲಿ ಪರಾಭವಗೊಂಡಿದ್ದರು. ಮುಂದೆ ೨೦೦೪, ೨೦೦೯, ೨೦೧೩ ಹಾಗೂ ೨೦೧೮ರಲ್ಲಿ ನಿರಂತರ ಗೆಲುವು ತಮ್ಮದಾಗಿಸಿಕೊಂಡರು. ೨೦೨೩ರಲ್ಲಿ ತಮ್ಮ ಸಾಂಪ್ರದಾಯಿಕ ಎದುರಾಳಿ, ಹಾಲಿ ಮಂತ್ರಿ ಆರ್.ಬಿ. ತಿಮ್ಮಾಪುರ ವಿರುದ್ಧ ಪರಾಭವಗೊಂಡಿದ್ದರು.
ರಾಜದಲ್ಲಿ ಒಂದು ಬಾರಿಗೆ ಉಪಮುಖ್ಯಮಂತ್ರಿ ಆಗಿ, ಜಲಸಂಪನ್ಮೂಲ ಖಾತೆ, ಸಮಾಜ ಕಲ್ಯಾಣ, ಕನ್ನಡ ಮತ್ತು ಸಂಸ್ಕೃತಿ ಸಚಿವರಾಗಿ ಕೆಲಸ ಮಾಡಿರುವ ಅವರು ವಿಧಾನಸಭೆ ವಿರೋಧ ಪಕ್ಷದ ಉಪನಾಯಕರಾಗಿಯೂ ಕೆಲಸ ಮಾಡಿದ್ದಾರೆ. ತಾವು ಪ್ರತಿನಿಧಿಸುವ ಮಾದಿಗ ಸಮುದಾಯವೂ ಸೇರಿದಂತೆ ದಲಿತ ಸಮುದಾಯಗಳ ಮತಗಳೇ ಹೆಚ್ಚಾಗಿರುವ ಚಿತ್ರದುರ್ಗ ಕ್ಷೇತ್ರದಿಂದ ಟಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ನ್ಯಾ.ಸದಾಶಿವ ಆಯೋಗದ ಒಳಮೀಸಲಾತಿ ವರದಿಯನ್ನು ರಾಜ್ಯ ಸರ್ಕಾರ ಕೇಂದ್ರಕ್ಕೆ ಶಿಫಾರಸು ಮಾಡುವಲ್ಲಿ ಪ್ರಮುಖ ಪಾತ್ರವಹಿಸಿದ್ದ ಅವರು ರಾಷ್ಟ್ರೀಯ ಸ್ವಯಂಸೇವಕ ಸಂಘ ಹಾಗೂ ಬಿ.ಎಸ್.ಯಡಿಯೂರಪ್ಪ ಅವರೊಂದಿಗೆ ಆಪ್ತ ಒಡನಾಟ ಹೊಂದಿದ್ದಾರೆ. ೭೪ ವರ್ಷದ ಅವರಿಗೆ ಟಿಕೆಟ್ ಒಲಿದು ಬಂದಿರುವುದು ಅವರ ವಿರೋಧಿಗಳ ಹುಬ್ಬೇರುವಂತೆ ಮಾಡಿದೆ.
ಟಿಕೆಟ್ ಸಿಕ್ಕ ಖುಷಿಯನ್ನು ಸಂಯುಕ್ತ ಕರ್ನಾಟಕದೊಂದಿಗೆ ಹಂಚಿಕೊಂಡ ಅವರು, ಬಿಜೆಪಿ ಹಾಗೂ ಜೆಡಿಎಸ್ ಶಾಸಕರು, ಮಾಜಿ ಶಾಸಕರು ನನಗೆ ಟಿಕೆಟ್ ನೀಡುವಂತೆ ಅಭಿಪ್ರಾಯಪಟ್ಟಿದ್ದರು. ಅವರ ವಿಶ್ವಾಸ ಉಳಿಸಿಕೊಳ್ಳುವ ಕೆಲಸ ಮಾಡುವೆ ಎಂದರು.
ಪ್ರಧಾನಿ ನರೇಂದ್ರ ಮೋದಿ ಅವರ ೧೦ ವರ್ಷದ ಸಾಧನೆ ಹಾಗೂ ರಾಜ್ಯದ ಬಿ.ಎಸ್.ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಅವರ ಸರ್ಕಾರ ಸಾಧನೆ ಜನರ ಮುಂದೆ ಇಟ್ಟು ಮತ ಕೇಳುವೆ. ಜಿಲ್ಲೆಯ ಕಾರ್ಯಕರ್ತರು ಒಗ್ಗಟಿನಿಂದ ಪಕ್ಷದ ಗೆಲುವಿಗೆ ಕೆಲಸ ಮಾಡಬೇಕೆಂದು ಮನವಿ ಮಾಡಿಕೊಂಡರು.