ಚಿತ್ರದುರ್ಗದಲ್ಲಿ ಲೋಕಾಯುಕ್ತ ಅಧಿಕಾರಿಗಳ ದಾಳಿ

Advertisement

ಚಿತ್ರದುರ್ಗ: ಅಕ್ರಮ ಆಸ್ತಿ ಗಳಿಕೆ ಆರೋಪದಡಿ ಚಿತ್ರದುರ್ಗದಲ್ಲಿ ಇಬ್ಬರು ಭ್ರಷ್ಟ ಅಧಿಕಾರಿಗಳ ಮನೆ ಮೇಲೆ ಲೋಕಾಯುಕ್ತ ಪೊಲೀಸ್ ಅಧಿಕಾರಿಗಳು ಸೋಮವಾರ ಬೆಳಂಬೆಳಗ್ಗೆ ದಾಳಿ ನಡೆಸಿದ್ದಾರೆ.
ಅರಣ್ಯ ಇಲಾಖೆ ಎಸಿಎಫ್ ನಾಗೇಂದ್ರ ನಾಯ್ಕ್ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಕೃಷ್ಣಮೂರ್ತಿ ಅವರ ಮನೆಗಳ ಮೇಲೆ ಲೋಕಾಯುಕ್ತ ಎಸ್ಪಿ ವಾಸುದೇವರಾಮ್ ನೇತೃತ್ವದಲ್ಲಿ ದಾಳಿ ಮಾಡಲಾಗಿದೆ.
ಅರಣ್ಯ ಇಲಾಖೆ ಎಸಿಎಫ್ ಆಗಿ ಕಾರ್ಯ ನಿರ್ವಹಿಸುತ್ತಿರುವ ನಾಗೇಂದ್ರ ನಾಯ್ಕ್ ಅವರು ತಮ್ಮ ವೇತನಕ್ಕೆ‌ ಮೀರಿದ ಆಸ್ತಿಯನ್ನು ಆಕ್ರಮವಾಗಿ ಮಾಡಿದ್ದಾರೆ. ಅದೇ ರೀತಿ ಸಮಾಜ ಕಲ್ಯಾಣ ಇಲಾಖೆಯಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡುತ್ತಿರುವ ಕೃಷ್ಣಮೂರ್ತಿ ಎಂಬುವವರು ಕೂಡ ಅಕ್ರಮವಾಗಿ ಆಸ್ತಿ ಹಾಗೂ ಚಿನ್ನಾಭರಣ ಮತ್ತು ಬೇನಾಮಿ ಆಸ್ತಿ ಮಾಡಿದ್ದಾರೆ ಎಂಬ ದೂರನ್ನು ಆಧಾರಿಸಿ ಲೋಕಾಯುಕ್ತ ಎಸ್ಪಿ ವಾಸುದೇವರಾಮ್ ನೇತೃತ್ವದಲ್ಲಿ ಎರಡು ಕಡೆ ಏಕಕಾಲಕ್ಕೆ ದಾಳಿ ನಡೆಸಲಾಗಿದೆ.
ಹಿರಿಯೂರು ಪಟ್ಟಣದ ಚಂದ್ರಾ ಲೇಔಟ್ ನಲ್ಲಿರುವ ನಾಗೇಂದ್ರ ನಾಯ್ಕ್ ಮನೆ ಹಾಗೂ ತವಂದಿ ಗ್ರಾಮದ ಬಳಿಯ ಫಾರ್ಮ್ ಹೌಸ್ ಮೇಲೆ ದಾಳಿ‌ ಮಾಡಿದ್ದು, ಸುಮಾರು 600 ಗ್ರಾಂ ಚಿನ್ನ, 4 ಕೆಜಿ ಬೆಳ್ಳಿ, ಒಂದೂವರೆ ಲಕ್ಷಕ್ಕೂ ಅಧಿಕ ನಗದು ಹಣವನ್ನು ವಶಪಡಿಸಿಕೊಳ್ಳಲಾಗಿದೆ.
ಹಿರಿಯೂರು ಪಟ್ಟಣದ ಕುವೆಂಪು ನಗರದಲ್ಲಿರುವ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಕೃಷ್ಣಮೂರ್ತಿ ಅವರ ಮನೆ ಮೇಲೆ ದಾಳಿ ನಡೆಸಿ, ಸುಮಾರು 600 ಗ್ರಾಂ ಚಿನ್ನ, 3 ಕೆಜಿ ಬೆಳ್ಳಿ ಮತ್ತು ನಗದನ್ನು ವಶಪಡಿಸಿಕೊಳ್ಳಲಾಗಿದ್ದು, ಶೋಧ ಕಾರ್ಯವನ್ನು ಲೋಕಾಯುಕ್ತ ಪೊಲೀಸರು ಇನ್ನೂ ಕೂಡ ಮುಂದುವರೆಸಿದ್ದಾರೆ.