ಮಾಲತೇಶ ಹೂಲಿಹಳ್ಳಿ
ಹುಬ್ಬಳ್ಳಿ: ಚಿಗಳಿ’ ಈ ಹೆಸರು ಕೇಳಿದರೆ ಸಾಕು ಚಿಕ್ಕವರೆ ಇರಲಿ, ದೊಡ್ಡವರೇ ಇರಲಿ ಬಾಯಲ್ಲಿ ನೀರೂರಿಸುತ್ತದೆ. ಸವಿದಷ್ಟು ಸವಿ ಸವಿ… ಹ್ಹಾ ಹ್ಹಾ…. ಎಂದು ಬಾಯಿ ಚಪ್ಪರಿಸದವರೇ ಇಲ್ಲ.
ಇಂತಹ `ಚಿಗಳಿ’ ಆಧುನಿಕ ಜಗತ್ತಿನಲ್ಲಿ ಹಲವರು ಬಾಳಿಗೆ ಬೆಳಕಾಗಿದೆ. ಈ ಚಿಗಳಿ ಉದ್ಯಮ ಸ್ಥಾಪಿಸಿ ಯಶಸ್ಸು ಕಂಡು ೮೦ ಜನರ ಜೀವನಕ್ಕೆ ಆಸರೆಯಾದ ಮಹಿಳೆಯ ಯಶೋಗಾಥೆ ಬೆರಗಾಗಿಸಿದೆ.
ಅವರು ಬೇರಾರೂ ಅಲ್ಲ. ಧಾರವಾಡದ ಮುರುಘಾಮಠದ ನಿವಾಸಿ ಸುಮಿತ್ರಾ ನವಲಗುಂದ ಅವರು. ಇವರು ಕೇವಲ ೨೦೦೦ ಸಾವಿರ ರೂಗಳಲ್ಲಿ ಚಿಕ್ಕದಾಗಿ ಆರಂಭಿಸಿದ ಈ ಚಿಗಳಿ ಉದ್ಯಮದ ತಿಂಗಳ ವಹಿವಾಟು ೧೦ರಿಂದ ೧೨ ಲಕ್ಷ! ಸುಮಿತ್ರ ಅವರ ನಿರಂತರ ಪರಿಶ್ರಮದಿಂದ ಇದು ಸಾಧ್ಯವಾಗಿದೆ. ಈ ಮೂಲಕ ಅವರು ಮಾದರಿಯಾಗಿದ್ದಾರೆ.
ಹಲವಾರು ಪದವಿ ಪಡೆದವರು ಕೂಡ ಸರಕಾರಿ ನೌಕರಿ ಎಂದು ಅಲೆದಾಡುವುದು ಹಾಗೂ ವೃತ್ತಿ ಸಿಗಲಿಲ್ಲ ಎಂದು ಕೈ ಕಟ್ಟಿ ಕುಳಿತುಕೊಳ್ಳುವವರಿಗೆ ಸುಮಿತ್ರಾ ಅವರು ಮಾದರಿಯಾಗಿ ನಿಂತಿದ್ದಾರೆ.
ರೊಟ್ಟಿ ಮಾಡಿಕೊಡುವುದು, ಹೊಲಿಗೆ, ಪಾರ್ಲರ್ ಕೆಲಸ ಮಾಡಿಕೊಂಡಿದ್ದ ಸುಮಿತ್ರಾ ಅವರು ೨೦೧೮ ರಲ್ಲಿ ಛಲದಿಂದ ಚಿಗಳಿ ಉದ್ಯಮಕ್ಕೆ ಕೈ ಹಾಕಿದರು. ಆರಂಭಿಕವಾಗಿ ಹಲವಾರು ಕಷ್ಟಗಳನ್ನು ಅನುಭಿಸಿ, ಈಗ ೬೦ ಜನರಿಗೆ ಪೂರ್ಣ ಪ್ರಮಾಣದಲ್ಲಿ ಹಾಗೂ ೨೦ ಜನರಿಗೆ ಪಾರ್ಟ್ ಟೈಂ ಕೆಲಸ ನೀಡಿ ಉದ್ಯೋಗಧಾತೆಯಾಗಿದ್ದಾರೆ.
ಚಿಗಳಿ ಉದ್ಯಮಕ್ಕೆ ಸುಮಿತ್ರಾ ಪ್ರವೇಶ ಮಾಡಿದ್ದು ಹೇಗೆ?
ಸುಮಿತ್ರಾ ಅವರು ಒಂದು ದಿನ ದೇಶಪಾಂಡೆ ಫೌಂಡೇಶನ್‌ನಲ್ಲಿ ಕೇಳಿ ಬಂದಿದ್ದ ಚಿಗಳೆ ಉದ್ಯಮದ ಕನಸಿಗೆ ಕೈ ಹಾಕಿದರು. ಅವರು ಮನೆಯಲ್ಲಿಯೇ ಕುಟ್ಟಿ ತಯಾರಿಸಿದ ಚಿಗಳೆಯೊಂದಿಗೆ ೨೫ ಜನರೊಂದಿಗೆ ಸಂದರ್ಶನಕ್ಕೆ ಆಯ್ಕೆಯಾಗಿದ್ದರು. ಮಾರ್ಗದರ್ಶನದಲ್ಲಿ ಮುನ್ನಡೆದರು. ಶುರುವಾದ ಸವಾಲನ್ನು ಬೆನ್ನು ಹತ್ತಿದ್ದ ಅವರು ಮೊದಲು ೧೮೦೦(೧ ಬಾಕ್ಸ್) ಚಿಗಳೆಯಿಂದ ಆರಂಭಿಸಿ, ಇಂದು ದಿನಕ್ಕೆ ೨೦ ಬಾಕ್ಸ್ ಚಿಗಳೆ ಉತ್ಪಾದನೆ ಮಾಡುತ್ತಿದ್ದಾರೆ. ಸದ್ಯ ವಿನೂತ್ ಹೋಂ ಫುಡ್ ಪ್ರೊಡಕ್ಟ್ಗೆ ಚಿಗಳಿ ಪೂರೈಸುತ್ತಿದ್ದಾರೆ.
ಎರಡು ಘಟಕ ಸ್ಥಾಪನೆ:
ಚಿಗಳಿ ಉದ್ಯಮಕ್ಕೆ ಕೈ ಹಾಕಿದಾಗ ಮೊದಲು ಹುಣೆಸೆಹಣ್ಣು ಕುಟ್ಟಲು ಯಾರು ಮುಂದೆ ಬಾರದೇ ಇದ್ದಾಗ ತಾಯಿ ಈರಮ್ಮ ಹಾಗೂ ಸುಮಿತ್ರಾ ಅವರೇ ಹಗಲು, ರಾತ್ರಿ ಎನ್ನದೇ ಪಾರ್ಲರ್ ಕೆಲಸದ ಜೊತೆ ಚಿಗಳಿ ತಯಾರಿ ಮಾಡಿದರು. ಹೆಚ್ಚಿನ ಬೇಡಿಕೆ ಕಂಡು ಬಂದಾಗ ಖಾರ ಕುಟ್ಟುವ ಮಷಿನ್‌ನಲ್ಲಿ ಸ್ವಲ್ಪ ಹುಣೆಸೆ ಹಣ್ಣು ಕುಟ್ಟಿಸಿ ರೆಡಿ ಮಾಡಿದ್ದಾರೆ. ಬಳಿಕ ಇದರಲ್ಲೇ ಪರಿಶ್ರಮದ ಹೆಜ್ಜೆಗಳನ್ನಿಟ್ಟು ಸಾಗಿದ್ದಾರೆ.
ಈಗ ತಮ್ಮದೇ ಸ್ವಂತ ೨ ಘಟಕ ಹೊಂದಿದ್ದು, ೬೦ ಜನರು ಕೆಲಸ ಮಾಡುತ್ತಿದ್ದಾರೆ. ಇನ್ನೂ ಹುಣಸೆಹಣ್ಣು ಸ್ವಚ್ಛ ಮಾಡಲು ೨೦ ಜನ ಪಾರ್ಟ್ ಟೈಂ ಕೆಲಸ ಮಾಡುತ್ತಿದ್ದಾರೆ. ಸದ್ಯ ಸುಮಿತ್ರಾ ಅವರು ತಯಾರಿಸಿದ ಚಿಗಳಿ ಬೆಂಗಳೂರು ಮತ್ತು ಮೈಸೂರು ಸೇರಿ ವಿವಿಧ ಭಾಗಗಳಿಗೆ ಕಳುಹಿಸಿ ಕೊಡಲಾಗುತ್ತಿದೆ. ಸದ್ಯ ಇವರ ಚಿಗಳಿ ಉದ್ಯಮವನ್ನು ಮಾರುಕಟ್ಟೆ ಕೈ ಹಿಡಿದಿದೆ.
ಸುಮಿತ್ರಾ ಅವರು ಚಿಗಳಿ ತಯಾರಿ ಉದ್ಯಮದ ಜೊತೆಗೆ ಅವಲಕ್ಕಿ, ಚಕ್ಕಲಿ ಸೇರಿದಂತೆ ವಿವಿಧ ಆಹಾರ ಉತ್ಪನ್ನಗಳನ್ನು ತಯಾರಿಸುತ್ತಿದ್ದಾರೆ.
ಸವಾಲಾಗಿ ಸ್ವೀಕರಿಸಿ ಉದ್ಯಮ ಸ್ಥಾಪನೆ
ನಾನು ಸವಾಲಾಗಿ ಸ್ವೀಕರಿಸಿ ೨೦ ಕೆಜಿ(ಒಂದು ಬಾಕ್ಸ್) ಹುಣಸೆ ಹಣ್ಣು ಕುಟ್ಟಿ ಈ ಚಿಗಳಿ ಉದ್ಯಮ ಆರಂಭಿಸಿದೆ. ಇಂದು ದಿನಕ್ಕೆ ೨೦ ಬಾಕ್ಸ್ ಚಿಗಳಿ ತಯಾರಿಸುತ್ತಿದ್ದೇವೆ. ಆರು ವರ್ಷದಿಂದ ಮುಂದುವರೆಸಿಕೊಂಡು ಬಂದಿದ್ದೇನೆ. ಹಲವರಿಗೆ ಕೆಲಸ ಕೊಟ್ಟ ತೃಪ್ತಿ ಇದೆ. ಜೊತೆಗೆ ಜೀವನ ಕಟ್ಟಿಕೊಳ್ಳಲು ಹುಣಸೆಹಣ್ಣು ನನಗೆ ಆಸರೆಯಾಗಿದೆ. ಚಿಗಳಿ ನಮ್ಮ ಬಾಳಿಗೆ ಬೆಳಕು ತಂದಿದೆ.
-ಸುಮಿತ್ರಾ ನವಲಗುಂದ, ಚಿಗಳಿ ಉದ್ಯಮಿ, ಧಾರವಾಡ.