ಬಿ.ಅರವಿಂದ
ಹುಬ್ಬಳ್ಳಿ: ತುಂಬ ಸದ್ದಿನೊಂದಿಗೆ ಅವಳಿನಗರದ ನಡುವೆ ಆರಂಭಗೊಂಡ ಬಿಆರ್‌ಟಿಎಸ್(ಬಸ್ ತ್ವರಿತ ಸಂಚಾರ ವ್ಯವಸ್ಥೆ) ಕೇವಲ ಐದೇ ವರ್ಷಗಳಲ್ಲಿ ತನ್ನ ಗ್ಲ್ಯಾಮರ್ ಕಳೆದುಕೊಂಡಿದೆ ಎಂದು ಜನತೆ ದೂರಲಾರಂಭಿಸಿದ್ದಾರೆ. ಅಷ್ಟೇ ಅಲ್ಲ, ಸೇವೆಯಲ್ಲಿ ಮೊದಲಿನ ಉತ್ಸುಕತೆ ಸ್ವಲ್ಪ ಕಣ್ಮರೆಯಾಗಿದೆ ಎಂಬುದಾಗಿ ಅನೇಕರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.
ಹುಬ್ಬಳ್ಳಿ-ಧಾರವಾಡ ನಡುವೆ ಸಂಚರಿಸುತ್ತಿರುವ ಬಿಆರ್‌ಟಿಎಸ್ ಬಹುತೇಕ ಚಿಗರಿ' ಬಸ್‌ಗಳಲ್ಲಿ ಕಳೆದ ಕೆಲವು ತಿಂಗಳುಗಳಿಂದ ಉದ್ಘೋಷ ಮಧುರ ಧ್ವನಿ (ಅನೌನ್ಸ್ಮೆಂಟ್) ಮತ್ತು ಡಿಜಿಟಲ್ ಡಿಸ್‌ಪ್ಲೇ (ಫಲಕ) ವ್ಯವಸ್ಥೆ ಸಂಪೂರ್ಣ ಹಾಳಾಗಿದೆ. ಇದು ಈ ಪ್ರತಿಷ್ಠಿತ ಸಾರಿಗೆ ವ್ಯವಸ್ಥೆಯಲ್ಲಿ ಎದುರಾಗಿರುವ ಬಹುದೊಡ್ಡ ಲೋಪ. ಇದರಿಂದ ನಮಗೆ ಇನ್ನಿಲ್ಲದ ತೊಂದರೆಯಾಗಿದೆ ಎಂಬುದು ಜನರ ಬೇಸರಕ್ಕೆ ಕಾರಣವಾಗಿರುವ ಪ್ರಮುಖ ಅಂಶ. ಇಪತ್ತೆರಡು ಕಿಲೋ ಮೀಟರ್ ಕಾರಿಡಾರ್‌ನಲ್ಲಿ ಸಂಚರಿಸುವ
ಚಿಗರಿ’ ವ್ಯಾಪ್ತಿಯಲ್ಲಿ ನಲವತ್ತೆರಡು ನಿಲ್ದಾಣಗಳಿವೆ. ಹುಬ್ಬಳ್ಳಿ ಹೊಸೂರಿನಿಂದ ಆರಂಭವಾಗುವ ಕಾರಿಡಾರ್, ಧಾರವಾಡದ ಜ್ಯೂಬಿಲಿ ಸರ್ಕಲ್‌ನಲ್ಲಿ ಅಂತ್ಯವಾತ್ತದೆ. ಆದರೆ ವಾಸ್ತವವಾಗಿ ಹುಬ್ಬಳ್ಳಿ ಸಿಬಿಟಿ ಮತ್ತು ಧಾರವಾಡ ಹೊಸ ಬಸ್‌ನಿಲ್ದಾಣದವರೆಗೆ ಚಿಗರಿ' ಜಾಲ ವ್ಯಾಪಿಸಿದೆ. ಪ್ರತಿನಿತ್ಯ ಎರಡೂ ನಗರಗಳ ನಡುವೆ ಒಟ್ಟು ನೂರು
ಚಿಗರಿ’ ಬಸ್‌ಗಳು ಸಂಚರಿಸುತ್ತಿದ್ದು, ಇವೆಲ್ಲ ವೋಲ್ವೊ ಕಂಪನಿಗೆ ಸೇರಿರುವ ಹವಾನಿಂತ್ರಿತ ಬಸ್‌ಗಳಾಗಿವೆ.
ಆರಂಭಿಕ ವರ್ಷದಲ್ಲಿ(೨೦೧೯ರಿಂದ ೨೦೨೦) ನಿತ್ಯ ಸುಮಾರು ಒಂದೂವರೆ ಲಕ್ಷ ಜನತೆ ಈ ಬಸ್‌ಗಳಲ್ಲಿ ಸಂಚರಿಸುತ್ತಿದ್ದರು. ಈಗ ಈ ಪ್ರಮಾಣ ಸರಾಸರಿ ನಿತ್ಯ ಒಂದು ಲಕ್ಷಕ್ಕೆ ಇಳಿದಿದೆ. ಕೋವಿಡ್ ಮತ್ತು ಶಕ್ತಿ ಯೋಜನೆಗಳ ಇಫೆಕ್ಟ್ ಇದೆಂಬುದನ್ನು ಬೇರೆ ಹೇಳಬೇಕಾಗಿಲ್ಲ. ಅಧಿಕೃತ ಮೂಲಗಳೂ ಈ ಮಾತನ್ನು ಪುಷ್ಟೀಕರಿಸುತ್ತವೆ.
ಸರಾಸರಿ ಪ್ರಯಾಣಿಕರ ಓಡಾಟದಲ್ಲಿ ಒಂದಿಷ್ಟು ಕಡಿಮೆಯಾಗಿರಬಹುದು. ವಿಷಯ ಇದಲ್ಲ. ಬಿಆರ್‌ಟಿಎಸ್‌ಅನ್ನು ಅನಿವಾರ್ಯ ಕಾರಣಗಳಿಗೆ ಬಳಸುತ್ತಿರುವ ಒಂದು ದೊಡ್ಡ ವರ್ಗವೇ ಅವಳಿನಗರದಲ್ಲಿದೆ. ಹೀಗಾಗಿ ಚಿಗರಿ' ಬಸ್‌ಗಳು ಉಳಿದ ಬಸ್‌ಗಳಂತೆ ಆಗಕೂಡದು ಎಂಬುದು ಜನರ ಅನಿಸಿಕೆಯಾಗಿದೆ. ಬಿಆರ್‌ಟಿಎಸ್ ಅವಲಂಬಿಸಿದವರಿಗಾದರೂ ಬಿಆರ್ಟಿಎಸ್ನ
ಚಿಗರಿ’ ಬಸ್‌ಗಳು ಸಮಾಧಾನ ನೀಡಬೇಕಲ್ಲವೇ? ಪ್ರೀಮಿಯರ್ ಸಾರಿಗೆಯ ಮಾನದಂಡಗಳನ್ನು ಹೊಂದಿರಬೇಕಲ್ಲವೇ ಎಂಬುದು ಜನರ ಸಹಜ ಪ್ರಶ್ನೆ. ರಾಜ್ಯ ಸರ್ಕಾರವೂ ಪ್ರೀಮಿಯರ್ ಮಾನದಂಡಗಳನ್ನು ಹೊಂದಿರುವ ವಿಶ್ವದರ್ಜೆಯ ಸಾರಿಗೆಯನ್ನು ನೀಡುತ್ತಿದ್ದೇವೆ ಎಂಬುದಾಗಿ ವಾಗ್ದಾನ ಮಾಡಿರಲಿಲ್ಲವೇ ಎಂಬುದಾಗಿಯೂ ಜನತೆ ಕೇಳುತ್ತಿದ್ದಾರೆ.ನಿಲುಗಡೆ- ನಿಲ್ದಾಣಗಳ ಕುರಿತು ಉದ್ಘೋಷ ಅತ್ಯಂತ ಅನಿವಾರ್ಯ. ಇಲ್ಲವಾದರೆ ಇಷ್ಟು ದೊಡ್ಡ ನಗರದಗುಂಟ ಸಂಚರಿಸುವಾಗ ಗೊಂದಲವಾಗುತ್ತದೆ' ಎಂದು ಪ್ರಯಾಣಿಕರು ಈಗ ವ್ಯಾಪಕವಾಗಿ ದೂರುತ್ತಿದ್ದಾರೆ. ಪ್ರೀಮಿಯರ್ ಸಾರಿಗೆ ಮಾನದಂಡದಲ್ಲಿ ಉದ್ಘೋಷ ಮತ್ತು ಡಿಜಿಟಲ್ ಡಿಸ್‌ಪ್ಲೇ ಅತ್ಯವಶ್ಯ. ಹೀಗಾಗಿ ಜನರ ದೂರಿನಲ್ಲಿ ಅರ್ಥವಿದೆ. ಬಿಆರ್‌ಟಿಎಸ್‌ನಲ್ಲಿ ಕೇವಲ ಹುಬ್ಬಳ್ಳಿ-ಧಾರವಾಡದ ಜನತೆ ಸಂಚರಿಸುವುದಿಲ್ಲ. ನಿತ್ಯ ಸುಮಾರು ೨೫ ಸಾವಿರ ಜನ ಹೊರಗಿನವರೂ ಈ ಬಸ್‌ಗಳ ಫಲಾನುಭವಿಗಳು ಎಂಬುದಾಗಿ ಸರ್ಕಾರಿ ಅಂಕಿಸಂಖ್ಯೆಗಳೇ ಅಂದಾಜಿಸಿವೆ. ಪರ ಊರುಗಳ ಜನತೆಗೆ ಉದ್ಘೋಷ ಇಲ್ಲದಿದ್ದರೆ ಯಾವ ನಿಲ್ದಾಣದಲ್ಲಿ ಇಳಿಯಬೇಕು ಎಂಬುದು ಹೇಗೆ ಗೊತ್ತಾಗಲು ಸಾಧ್ಯ? ಇಂಥವರು
ಚಿಗರಿ’ಯನ್ನು ಬಳಸುವುದಾದರೂ ಹೇಗೆ? ಪ್ರತಿಷ್ಠಿತ, ಪ್ರೀಮಿಯರ್, ವಿಶ್ವದರ್ಜೆ ಎಂಬ ಮಾತುಗಳಿಗೆ ಅರ್ಥವಿದೆಯೇ ಎಂದು ಜನತೆ ಕೇಳುತ್ತಿದ್ದಾರೆ. ಸರ್ಕಾರ ಈ ವಿಷಯವನ್ನು ಗಂಭೀರವಾಗಿ ತೆಗೆದುಕೊಳ್ಳಬೇಕಾಗಿದೆ.
ಎ.ಸಿ ಕುರಿತೂ ಹೆಚ್ಚಿದ ದೂರು
ವೋಲ್ವೊ ಕಂಪನಿ ನೀಡಿರುವ ಈ ನೂರು ಬಸ್‌ಗಳ ಹವಾನಿಯಂತ್ರಣ ವ್ಯವಸ್ಥೆಯ ಬಗ್ಗೆಯೂ ಇನ್ನಿಲ್ಲದಷ್ಟು ದೂರುಗಳು ಸಾರ್ವಜನಿಕರಿಂದ ಕೇಳಿ ಬರುತ್ತಿವೆ. ಅನೇಕ ಬಸ್‌ಗಳಲ್ಲಿ ಹವಾನಿಂತ್ರಣ ವ್ಯವಸ್ಥೆ ಸಮರ್ಪಕವಾಗಿ ಕೆಲಸ ಮಾಡುತ್ತಿಲ್ಲ. ಹೀಗಾಗಿ ಬಸ್ ಒಳಗೆ ಸೆಖೆಯಾಗುತ್ತಿದೆ ಎಂದು ಇತ್ತೀಚೆಗೆ ಕಾಲೇಜು ಯುವತಿಯರು ಜಗಳ ಮಾಡಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ದುಡ್ಡು ಕೊಟ್ಟೂ ಎ.ಸಿ. ಸರಿಯಿಲ್ಲದ ಬಸ್‌ನಲ್ಲಿ ಏಕೆ ಕರೆದೊಯ್ಯುತ್ತಿದ್ದೀರಿ ಎಂಬುದು ಅವರ ನ್ಯಾಯಯುತ ಪ್ರಶ್ನೆಯಾಗಿತ್ತು.
ಒಂದು ಅಧಿಕೃತ ಮೂಲದ ಪ್ರಕಾರ ವೋಲ್ವೊ ಕಂಪನಿಯ ಈ ಬಸ್‌ಗಳ ಕೆಲ ಆಂತರಿಕ ವ್ಯವಸ್ಥೆಗಳ ನಿರ್ವಹಣಾ ವಾರಂಟಿ ಮುಗಿದಿದೆ. ಹೀಗಾಗಿ ಬಾಗಿಲುಗಳ ಸೆನ್ಸರ್, ಎ.ಸಿ. ಉದ್ಘೋಷ, ಡಿಸ್‌ಪ್ಲೇ ಮೊದಲಾದ ದೂರುಗಳು ಬರಲಾರಂಭಿಸಿವೆ. ಉತ್ತರ ಕರ್ನಾಟಕಕ್ಕೆ ಈ ವಿಷಯದಲ್ಲೂ ಸರ್ಕಾರ ತನ್ನ `ಕೃಪೆ’ ಬೀರಿತೆ ಎಂದು ಜನತೆ ವ್ಯಂಗ್ಯಭರಿತ ಆಕ್ರೋಶದಿಂದ ಕೇಳುತ್ತಿದ್ದಾರೆ.
ಅವೈಜ್ಞಾನಿಕ ಯೋಜನೆ'ಗೆ ಕಿಡಿ ಸಣ್ಣ ರಸ್ತೆಗಳು ಮತ್ತು ನೂರಕ್ಕೂ ಹೆಚ್ಚು ದಟ್ಟ ಜನವಸತಿ ಪ್ರದೇಶಗಳಿರುವ ಈ ದೊಡ್ಡ ಅವಳಿನಗರದ ನಡುವೆ ಕಾರಿಡಾರ್ ನಿರ್ಮಾಣಕ್ಕೆ ಸರ್ಕಾರ ಮುಂದಾದಾಗ ಜನ ಮನಸ್ಸಿಲ್ಲದೇ ಸಮ್ಮತಿಸಿದ್ದರು. ವೈಜ್ಞಾನಿಕವಾಗಿ ಯೋಜನೆ ರೂಪುಗೊಳ್ಳಬಹುದು ಎಂದುಕೊಂಡು ಮನದಲ್ಲೇ ಗೊಣಗಿ ಸುಮ್ಮನಾಗಿದ್ದರು. ಆದರೆ ಅಂತಿಮ ಫಲವಾಗಿ ಜನರ ಕಣ್ಣೆದುರು ತೆರೆದುಕೊಂಡಿದ್ದು ಮಾತ್ರ ಅವೈಜ್ಞಾನಿಕ ಕಾರಿಡಾರ್ ಎಂಬುದಾಗಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಮತ್ತು ಶಾಸಕ ಅರವಿಂದ ಬೆಲ್ಲದ ಸಂದರ್ಭ ಸಿಕ್ಕಾಗಲೆಲ್ಲ ಆಕ್ರೋಶ ವ್ಯಕ್ತಪಡಿಸುತ್ತಲೇ ಇರುತ್ತಾರೆ. ಅವೈಜ್ಞಾನಿಕ ಕಾರಿಡಾರ್‌ನ ಬಿಸಿಯನ್ನು ಪ್ರತಿಕ್ಷಣ ಜನತೆ ಅನುಭವಿಸುವಂತಾಗಿದೆ ಎಂದು ಸಿಡಿಮಿಡಿ ತೋಡಿಕೊಳ್ಳುತ್ತಿದ್ದಾರೆ. ಈ ಇಪ್ಪತ್ತು ಕಿಲೋ ಮೀಟರ್ ಕಾರಿಡಾರ್ ಅವಳಿನಗರಗಳ ಬಾಹ್ಯ ವಹಿವಾಟು, ಸಂಚಾರ ಮತ್ತು ಓಡಾಟಕ್ಕೆ ತುಂಬ ಕಿರಿಕಿರಿಯಾಗಿರುವುದಂತೂ ಅನೇಕರ ಅನುಭವ. ಇದರಿಂದಾಗಿ ಸರ್ಕಾರದ ವಿರುದ್ಧ ಜನತೆ ಶಪಿಸುತ್ತಲೇ ಇರುವುದನ್ನು ಕಾಣಬಹುದು. ಇದು ಒಂದು ಭಾಗ. ಆದಾಗ್ಯೂ
ಚಿಗರಿ’ಗಳನ್ನು ಅವಲಂಬಿಸಿರುವ ಜನತೆಗೆ ಮಾತ್ರ ಇದೊಂದು `ಬ್ಯೂಟಿಫುಲ್’ ವ್ಯವಸ್ಥೆ. ಅಷ್ಟರ ಮಟ್ಟಿಗೆ ಬಿಆರ್‌ಟಿಎಸ್‌ಅನ್ನು ಮೆಚ್ಚಿಕೊಂಡು ಮತ್ತು ಅನಿವಾರ್ಯವಾಗಿ ಒಪ್ಪಿಕೊಂಡು ನಡೆಯಬೇಕಾಗಿದೆ.
ಇಂದು ಎಚ್‌ಪಿಸಿ ಸಭೆಚಿಗರಿ' ಬಸ್‌ಗಳಲ್ಲಿ ಮೊದಲೇ ಅಳವಡಿಕೆಯಾಗಿದ್ದ
ಇನ್ಬಿಲ್ಟ್’ ಉದ್ಘೋಷ ವ್ಯವಸ್ಥೆ ಇತ್ತು. ಈಗ ಅದು ಕಾರ್ಯನಿರ್ವಹಿಸುತ್ತಿಲ್ಲ. ವಾರಂಟಿ ಮುಗಿದಿದೆ. ಹೀಗಾಗಿ ಟೆಂಡರ್ ಕರೆಯಬೇಕಾಗಿದೆ. ರಾಜ್ಯದ ಮುಖ್ಯ ಕಾರ್ಯದರ್ಶಿಗಳ ನೇತೃತ್ವದ ಉನ್ನತಾಧಿಕಾರ ಸಮಿತಿ (ಎಚ್‌ಪಿಸಿ) ಸಭೆ ಮಂಗಳವಾರ ನಡೆಯಲಿದ್ದು, ಈ ವಿಷಯ ಬಗೆಹರಿಯುವ ವಿಶ್ವಾಸ ಇದೆ.
– ರಾಜಕುಮಾರ, ಪ್ರಧಾನ ವ್ಯವಸ್ಥಾಪಕ, ಎಚ್‌ಡಿಬಿಆರ್‌ಟಿಎಸ್.
ತೊಂದರೆ ನಿವಾರಣೆ
ಬಿಆರ್‌ಟಿಎಸ್ ಬಸ್‌ಗಳಲ್ಲಿ ಸಾರ್ವಜನಿಕರಿಗೆ ಬೇಕಾದ ಅವಶ್ಯಕ ಸೌಲಭ್ಯಗಳನ್ನು ಒದಗಿಸಲು ಎಚ್‌ಡಿಬಿಆರ್‌ಟಿಎಸ್ ಸಂಸ್ಥೆ ಬದ್ಧವಾಗಿದೆ. ಎದುರಾಗಿರುವ ತಾಂತ್ರಿಕ ಸಮಸ್ಯೆಗಳನ್ನು ಶೀಘ್ರ ಬಗೆಹರಿಸಲಾಗುತ್ತದೆ.
– ಎಸ್.ಎಸ್.ಮಾಲತಿ, ವಿಭಾಗೀಯ ನಿಯಂತ್ರಣಾಧಿಕಾರಿ(ಹೆಚ್ಚುವರಿ ಹೊಣೆ)