ಚಾಮರಾಜಪೇಟೆ ಮೈದಾನ-ಮಾತುಕತೆಯೇ ಪರಿಹಾರ

ಸಂಪಾದಕೀಯ
Advertisement

ಬೆಂಗಳೂರಿನ ಚಾಮರಾಜಪೇಟೆ ಈದ್ಗಾ ಮೈದಾನ ಹುಬ್ಬಳ್ಳಿಯ ಈದ್ಗಾ ಮೈದಾನದ ರೀತಿ ಕಹಿ ಮನೋಭಾವಕ್ಕೆ ಕಾರಣವಾಗುತ್ತಿದೆ. ಅಲ್ಲಿ ಸ್ಥಳೀಯರೇ ಅದನ್ನು ಬಗೆಹರಿಸಿಕೊಂಡರು. ಅದೇರೀತಿ ಇಲ್ಲಿಯೂ ಸ್ಥಳೀಯರೇ ಪರಿಹಾರ ಕಂಡು ಕೊಳ್ಳಬೇಕು. ಹೊರಗಿನವರ ಹಸ್ತಕೇಪಕ್ಕೆ ಅವಕಾಶ ನೀಡಬಾರದು. ಹೊರಗಿನವರಿಗೆ ಇದು ಸಂಬಂಧಪಡದ ವಿಷಯ. ಚಾಮರಾಜಪೇಟೆ ವಿಷಯದಲ್ಲೂ ಬೇರೆ ಬಡಾವಣೆಯವರು ತಲೆಹಾಕಲು ಹೋಗಿಲ್ಲ. ಅದೇರೀತಿ ಮುಂದುವರಿದರೆ ಸಮಸ್ಯೆ ತಂತಾನೇ ತಣ್ಣಗಾಗುತ್ತದೆ. ಸಾಮಾನ್ಯವಾಗಿ ಇಂಥ ಸಮಸ್ಯೆಗಳು ತಲೆ ದೋರಿದಾಗ ಸ್ಥಳೀಯರೇ ಪರಿಹಾರ ಕಂಡುಕೊಳ್ಳಲು ಸಮರ್ಥರಿರುತ್ತಾರೆ. ಸ್ಥಳೀಯ ಸಮಸ್ಯೆಗಳಿಗೆ ಸ್ಥಳೀಯವಾಗಿ ಪರಿಹಾರ ಕಂಡುಕೊಳ್ಳುವುದಕ್ಕಾಗಿಯೇ ಸ್ಥಳೀಯ ಸಂಸ್ಥೆಗಳ ರಚನೆಯಾಗಿವೆ. ಎಲ್ಲ ವಿಷಯದಲ್ಲೂ ರಾಜಕೀಯ ಬೆರೆಸುವುದು ಸರಿಯಲ್ಲ. ಹಲವು ಸಮಸ್ಯೆಗಳಿಗೆ ರಾಜಕೀಯದಲ್ಲಿ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗುವುದಿಲ್ಲ. ಇತ್ತೀಚೆಗೆ ಎಲ್ಲ ಸಮಸ್ಯೆ ಗಳಿಗೆ ರಾಜಕಾರಣಿಗಳು ಪರಿಹಾರ ಸೂಚಿಸುವ ಪರಿಪಾಠ ಬೆಳೆದಿದೆ. ಇದರಿಂದ ಹಲವು ಸಣ್ಣ ಸಮಸ್ಯೆಗಳು ಬೃಹದಾಕಾರವಾಗಿ ಬೆಳೆಯಲು ಕಾರಣವಾಗುತ್ತದೆ. ದಿನಬೆಳಕಾದರೆ ಒಬ್ಬರ ಮುಖ ಮತ್ತೊಬ್ಬರು ನೋಡಬೇಕೆಂಬ ಪರಿಸ್ಥಿತಿ ಇರೆ ಮಾತ್ರ ಅವರು ಪರಿಹಾರವನ್ನು ಕಂಡುಕೊಳ್ಳುತ್ತಾರೆ. ಅಲ್ಲದೆ ಹೊಂದಾಣಿಕೆ ಜೀವನ ಅವರಿಗೆ ಅನಿವಾರ್ಯವಾಗುತ್ತದೆ. ಇಲ್ಲದಿಲ್ಲಿ ಹೊರಗಿನವರು ಸಮಸ್ಯೆ ತೀವ್ರಗೊಳ್ಳುವಂತೆ ಮಾಡಿ ನಂತರ ಅಲ್ಲಿಂದ ಕಾಲ್ತೆಗೆಯುವುದು ರೂಢಿ. ಇದಕ್ಕೆ ಸ್ಥಳೀಯರು ಮತ್ತು ಅಧಿಕಾರಿಗಳು ಅವಕಾಶ ನೀಡಬಾರದು. ಸಮಸ್ಯೆ ಬಗೆಹರಿಸಲು ಕೆಲವು ಕಾಲ ಬೇಕಾಗಬಹುದು. ಅಲ್ಲಿಯವರೆಗೆ ಎಲ್ಲರೂ ಶಾಂತಿ ಕಾಯ್ದುಕೊಂಡು ಹೋಗುವುದು ಅಗತ್ಯ. ಏನೇ ಆದರೂ ಮುಂದಿನ ಪೀಳಿಗೆ ಅಲ್ಲೇ ಬದುಕಬೇಕಾಗುವುದರಿಂದ ಸಹಬಾಳ್ವೆ ಅನಿವಾರ್ಯ. ಇದನ್ನು ನಮಗೆ ಇತಿಹಾಸ ಕಲಿಸಿ ಕೊಟ್ಟಿದೆ. ಚಾಮರಾಜಪೇಟೆ ಮೈದಾನ ಇಂದು ತಲೆಎತ್ತಿರುವುದಲ್ಲ. ನೂರಾರು ವರ್ಷಗಳಿಂದ ಹಾಗೇ ಇದೆ. ಹಿಂದೆ ಎಂದೂ ಇದು ಸಮಸ್ಯೆಯಾಗಿರಲಿಲ್ಲ ಎಂದ ಮೇಲೆ ಈಗಲೂ ಆಗುವುದಿಲ್ಲ. ಇವೆಲ್ಲವೂ ಸಹಬಾಳ್ವೆಯ ಸಂಕೇತವಾಗಿ ಇನ್ನೂ ಹಲವು ವರ್ಷಗಳು ಉಳಿಯಲಿವೆ. ಸಾರ್ವಜನಿಕ ಬಳಕೆಗೆ ಅದು ಮೀಸಲು ಎಂದಾದ ಮೇಲೆ ಮುಕ್ತವಾಗಿರುವುದು ಅಗತ್ಯ. ಅಲ್ಲಿ ಎಲ್ಲ ರೀತಿಯ ಸಾರ್ವಜನಿಕ ಚಟುವಟಿಕೆಗಳು ನಡೆದು ಎಲ್ಲರೂ ಒಗ್ಗೂಡಿ ಭಾಗವಹಿಸಿದರೆ ಮೈದಾನವನ್ನು ಮುಕ್ತವಾಗಿಟ್ಟುರು ವುದಕ್ಕೆ ಸಾರ್ಥಕವಾಗುತ್ತದೆ. ಈ ರೀತಿ ಮೈದಾನಗಳು ಎಲ್ಲ ಕಡೆ ಸಾಮಾನ್ಯವಾಗಿ ಇರುತ್ತದೆ. ಅಲ್ಲಿ ಸಾರ್ವಜನಿಕ ಚಟುವಟಿಕೆಗಳು ನಡೆಯುತ್ತಿರುತ್ತವೆ. ಇದೊಂದು ರೀತಿ ಪರಿಸರ ಸಮತೋಲನ ಕಾಯ್ದುಕೊಳ್ಳಲು ಇರುವ ಮುಕ್ತ ಪ್ರದೇಶ. ಹಿಂದೆ ಬಹುತೇಕ ಹಳ್ಳಿಗಳಲ್ಲಿ ಈ ರೀತಿ ಮೈದಾನಗಳನ್ನು ಬಿಡಲಾಗುತ್ತಿತ್ತು. ಜನಸಂಖ್ಯೆ ಅಧಿಕಗೊಂಡಂತೆ ಭೂಮಿಯ ಬೆಲೆ ಅಧಿಕಗೊಂಡಿತು. ಸರ್ಕಾರಿ ಭೂಮಿಯನ್ನು ಒತ್ತುವರಿ ಮಾಡಿಕೊಳ್ಳುವ ಪ್ರವೃತ್ತಿ ಅಧಿಕಗೊಂಡಿತು. ಅದೃಷ್ಟವೋ ಏನೋ ಈ ಮೈದಾನ ಯಾರ ಒತ್ತುವರಿಗೂ ಒಳಪಟ್ಟಿಲ್ಲ ಎಂಬುದು ಸಮಾಧಾನದ ಸಂಗತಿ. ಇದೇ ಪರಿಪಾಠವನ್ನು ಎಲ್ಲ ಕಡೆ ಮುಂದುವರಿಸಿದರೆ ಸಮಾಜದ ಪರಿಸರ ಸ್ವಚ್ಛವಾಗಿಡಲು ಸಾಧ್ಯವಾಗಲಿದೆ. ಮಕ್ಕಳು ಸಂಜೆಯ ವೇಳೆಗೆ ಆಟವಾಡಲು ಈಗ ಮೈದಾನ ಇಲ್ಲವೇ ಇಲ್ಲ ಎನ್ನುವ ಪರಿಸ್ಥಿತಿ ತಲೆದೋರಿದೆ. ಹಲವು ಕಾರಣಗಳಿಂದ ಇವುಗಳ ಒತ್ತುವರಿಯನ್ನು ತಡೆಯಲು ಇನ್ನೂ ಸಾಧ್ಯವಾಗಿಲ್ಲ. ಸಮಸ್ಯೆಗಳು ಏನೇ ಇರಲಿ. ಅದನ್ನು ಬಗೆಹರಿಸಿಕೊಳ್ಳಬಹುದು. ಮೈದಾನವನ್ನು ಹೀಗೆ ಮುಕ್ತವಾಗಿಡಲು ಅಲ್ಲಿಯ ಜನ ಮೊದಲು ತೀರ್ಮಾನ ಮಾಡಬೇಕು. ಇದಕ್ಕೆ ಮುಕ್ತ ಮನಸ್ಸು ಬೇಕು. ಸ್ವಚ್ಛಗಾಳಿ ಪಡೆಯುವುದೂ ಈಗಿನ ಕಾಲದಲ್ಲಿ ಕಷ್ಟವಾಗುತ್ತಿದೆ. ವಾಯು ಮಾಲಿನ್ಯ ಅಧಿಕಗೊಳ್ಳುತ್ತಿರುವ ಇಂದಿನ ಕಾಲದಲ್ಲಿ ಇಂಥ ಮೈದಾನ ಎಲ್ಲೆಲ್ಲಿ ಇದೆಯೋ ಅವುಗಳನ್ನು ಕಾಪಾಡುವ ಕೆಲಸ ನಡೆಯಬೇಕು. ಇವುಗಳೇ ಮುಂದಿನ ಜನಾಂಗಕ್ಕೆ ದೊಡ್ಡ ಆಸ್ತಿಯಾಗಲಿದೆ. ಕಟ್ಟಡಗಳನ್ನು ಯಾವಾಗಬೇಕಾದರೂ ನಿರ್ಮಿಸಬಹುದು. ಆದರೆ ಮೈದಾನವನ್ನು ಕಾಣುವುದು ಕಷ್ಟ. ಒಮ್ಮೆ ಭೂಕಬಳಿಕೆ ಆರಂಭಗೊಂಡರೆ ಕಾಡುಗಳೇ ಉಳಿಯುವುದಿಲ್ಲ ಎಂದ ಮೇಲೆ ಮೈದಾನ ಯಾವ ಲೆಕ್ಕ. ಅದರಿಂದ ಅಲ್ಲಿಯ ಜನ ಮೈದಾನವನ್ನು ಮುಕ್ತವಾಗಿ ರಕ್ಷಿಸಲು ತೀರ್ಮಾನಿಸಿದರೆ ಅದೇ ದೊಡ್ಡ ಕೊಡುಗೆ.

editorial