ಮಂಗಳೂರು: ವಿಶ್ವಕಪ್ ಕ್ರಿಕೆಟ್ ಗೆಲ್ಲುವ ಕೋಟ್ಯಂತರ ಭಾರತೀಯರ ಆಸೆಯನ್ನು ಭಗ್ನಗೊಳಿಸಿ ವಿಶ್ವಕಪ್ ಕಿರೀಟವನ್ನು ಮುಡಿಗೇರಿಸಿದ ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಮ್ಯಾನೆಜರ್ ಕನ್ನಡತಿ.
ದಕ್ಷಿಣ ಕನ್ನಡ ಜಿಲ್ಲೆಯ ಕಿನ್ನಿಗೋಳಿ ಮೂಲದ ಊರ್ಮಿಳಾ ರೊಸಾರಿಯೊ ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಮ್ಯಾನೇಜರ್. ೩೪ ವರ್ಷದ ಊರ್ಮಿಳಾ ಮಂಗಳೂರು ಸಮೀಪದ ಕಿನ್ನಿಗೋಳಿ ಮೂಲದ ಐವಿ ಮತ್ತು ವ್ಯಾಲೆಂಟೈನ್ ರೊಸಾರಿಯೋ ದಂಪತಿಯ ಪುತ್ರಿ. ಸದ್ಯ ಆಕೆಯ ತಂದೆ ತಾಯಿ ಏಳು ವರ್ಷಗಳ ಹಿಂದೆ ಭಾರತಕ್ಕೆ ಮರಳಿದ್ದು ಸಕಲೇಶಪುರದಲ್ಲಿ ನೆಲೆಸಿದ್ದಾರೆ.
ಊರ್ಮಿಳಾ ರೊಸಾರಿಯೋ ಕಾರ್ನೆಗೀ ಮೆಲನ್ ವಿಶ್ವವಿದ್ಯಾನಿಲಯದಿಂದ ಬಿಬಿಎ ಪದವೀಧರರು. ತನ್ನ ಬಾಲ್ಯದಿಂದಲೂ ಕ್ರೀಡಾಪಟುವಾಗಿದ್ದ ಊರ್ಮಿಳಾ ಕತಾರ್ ಟೆನಿಸ್ ಫೆಡರೇಶನ್ನೊಂದಿಗೆ ಮೂರು ವರ್ಷಗಳ ಕಾಲ ಕೆಲಸ ಮಾಡಿದ್ದರು. ಬಳಿಕ ಆಸ್ಟ್ರೇಲಿಯಾದಲ್ಲಿ, ಅವರು ಮೊದಲು ಅಡಿಲೇಡ್ ಕ್ರಿಕೆಟ್ ತಂಡದೊಂದಿಗೆ ಸುಮಾರು ಮೂರು ವರ್ಷಗಳ ಕಾಲ ಕೆಲಸ ಮಾಡಿದರು. ನಂತರ, ಅವರು ಆಸ್ಟ್ರೇಲಿಯಾದ ಮಹಿಳಾ ಕ್ರಿಕೆಟ್ ತಂಡದ ಮ್ಯಾನೇಜರ್ ಆಗಿ ಬಡ್ತಿ ಪಡೆದರು. ಕಳೆದ ಫುಟ್ಬಾಲ್ ವಿಶ್ವಕಪ್ ಸಮಯದಲ್ಲಿ ನಾಲ್ಕು ತಿಂಗಳ ಕಾಲ ಕತಾರ್‌ನಲ್ಲಿ ಫುಟ್ಬಾಲ್ ಕ್ರೀಡಾಂಗಣವನ್ನು ನಿರ್ವಹಣೆ ಜವಾಬ್ದಾರಿ ಹೊತ್ತಿದ್ದರು. ಬಳಿಕ ಈ ವರ್ಷದ ಸೆಪ್ಟೆಂಬರ್‌ನಲ್ಲಿ ಕತಾರ್‌ನಿಂದ ಆಸ್ಟ್ರೇಲಿಯಾಕ್ಕೆ ಹಿಂದಿರುಗಿ ವಿಶ್ವಕಪ್‌ಗಾಗಿ ಆಸ್ಟ್ರೇಲಿಯಾದ ಪುರುಷರ ಕ್ರಿಕೆಟ್ ತಂಡದ ಹೊಣೆ ಹೊತ್ತರು.