ಹುಬ್ಬಳ್ಳಿ: ಚನ್ನಗಿರಿ ಪ್ರಕರಣದಲ್ಲಿ ಡಿವೈಎಸ್ಪಿ, ಸಿಪಿಐ ಅಮಾನತ್ತು ಮಾಡಿ ಪೊಲೀಸರ ನೈತಿಕ ಬಲವನ್ನು ಸಿದ್ಧರಾಮಯ್ಯ ಸರ್ಕಾರ ಕುಸಿಯುವಂತೆ ಮಾಡಿದೆ ಎಂದು ಆರೋಪಿಸಿದ್ದಾರೆ.
ಈ ಕುರಿತು ಹೇಳಿಕೆ ನೀಡಿರುವ ಅವರು, ಸಿಎಂ ಈ ಧೋರಣೆ ನೋಡಿದರೆ ಪೊಲೀಸರು ಠಾಣೆ ಬಿಟ್ಟು ಓಡಿ ಹೋಗಬೇಕು ಎಂಬಂತಿದೆ ಎಂದು ಖಂಡಿಸಿದ್ದಾರೆ.
ಮುಸ್ಲಿಂರಷ್ಟೇ ಅಲ್ಲ, ಯಾರೇ ಆದರೂ ಸರಿ ಪೊಲೀಸ್ ಠಾಣೆ ಮೇಲೆ ಕಲ್ಲು ತೂರಿ, ವಾಹನ ಜಖಂಗೊಳಿಸಿ ಗಲಭೆ ಎಬ್ಬಿಸುವುದು ಖಂಡನೀಯ. ಆದರೆ, ಈ ಪ್ರಕರಣದಲ್ಲಿ ಸಿಎಂ ಪೊಲೀಸರ ಮೇಲೆ ಕ್ರಮ ಕೈಗೊಂಡಿದ್ದಾರೆ ಎಂದು ಜೋಶಿ ಆಕ್ಷೇಪಿಸಿದ್ದಾರೆ.
ಅಪರಾಧ ಹಿನ್ನೆಲೆಯಲ್ಲಿ ಪೊಲೀಸರು ವ್ಯಕ್ತಿಯನ್ನು ಕರೆತಂದು ವಿಚಾರಣೆ ನಡೆಸಿದ್ದಾರೆ. ಆ ವೇಳೆ ಆತನಿಗೆ ಆರೋಗ್ಯ ಸಮಸ್ಯೆಯಾಗಿದೆ. ತಕ್ಷಣ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ಸಿಎಂ ಆದೇಶದಂತೆ ಡಿಐಎಸ್ಪಿ ಮತ್ತು ಸಿಪಿಐ ಅಮಾನತ್ತು ಪಡಿಸುವುದು ಯಾವ ನ್ಯಾಯ ಎಂದಿದ್ದಾರೆ.
ನೇಹಾ, ಅಂಜಲಿ ಹತ್ಯೆ ಪ್ರಕರಣದಲ್ಲಿ ಇಲ್ಲದ ತ್ವರಿತ ಕ್ರಮ ಚನ್ನಗಿರಿಯಲ್ಲೇಕೆ? ಹುಬ್ಬಳ್ಳಿಯಲ್ಲಿ ನಡೆದ ನೇಹಾ ಹತ್ಯೆ, ಅಂಜಲಿ ಕೊಲೆ ಪ್ರಕರಣದಲ್ಲಿ ಕೈಗೊಳ್ಳದ ತ್ವರಿತ ಕ್ರಮವನ್ನು ಸಿಎಂ ಸಿದ್ದರಾಮಯ್ಯ ಚನ್ನಗಿರಿ ಪ್ರಕರಣದಲ್ಲಿ ಏಕೆ? ಕೈಗೊಂಡರು ಎಂದು ಜೋಶಿ ಪ್ರಶ್ನಿಸಿದ್ದಾರೆ
ಮುಖ್ಯಮಂತ್ರಿಯವರು ತುಷ್ಟೀಕರಣದ ರಾಜಕಾರಣ ಮಾಡುತ್ತಿದ್ದಾರೆ. ಇದರಿಂದ ಅರಾಜಕತೆ ನಿರ್ಮಾಣವಾಗುತ್ತಿದೆ ಎಚ್ಚರವಿರಲಿ ಎಂದು ಜೋಶಿ ಎಚ್ಚರಿಸಿದ್ದಾರೆ.
ರಾಮೇಶ್ವರ ಕೆಫೆ ಪ್ರಕರಣದಲ್ಲಿ ಇದನ್ನೇ ಮಾಡಿದರು. ನೇಹಾ, ಅಂಜಲಿ ಹತ್ಯೆ ಹೀಗೆ ಯಾವುದೇ ಘಟನೆಗಳಲ್ಲಿ ತ್ವರಿತ ಕ್ರಮ ಕೈಗೊಳ್ಳಲಿಲ್ಲ. ತನಿಖೆ ಆಗಬೇಕು ಎಂದರು. ಆದರೆ, ಚನ್ನಗಿರಿ ಪ್ರಕರಣದಲ್ಲಿ ಮಾತ್ರ ತನಿಖೆ ಆಗಬೇಕು ಅನಿಸಲಿಲ್ಲವೇ? ತಕ್ಷಣ ಪೊಲೀಸ್ ಅಧಿಕಾರಿಗಳ ಮೇಲೆ ಕ್ರಮ ಕೈಗೊಂಡಿದ್ದಾರೆ. ಇದು ಪೊಲೀಸರ ಬಲವನ್ನು ಕುಗ್ಗಿಸುವಂತಿದೆ ಎಂದು ಸಚಿವ ಪ್ರಲ್ಹಾದ ಜೋಶಿ ಆಕ್ಷೇಪಿಸಿದರು.