ದಾವಣಗೆರೆ: ಶಾಸಕ ಎಂ. ಪಿ. ರೇಣುಕಾಚಾರ್ಯರ ಸಹೋದರನ ಪುತ್ರ ಚಂದ್ರಶೇಖರ್ ಈ ರೀತಿ ಸಾವನ್ನಪ್ಪಿರುವುದು ನೋವು ತಂದಿದ್ದು, ಸಮಗ್ರ ತನಿಖೆಯಾದರೆ ವಾಸ್ತವ ಸತ್ಯ ಹೊರಬರುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಹೇಳಿದರು.
ಹೊನ್ನಾಳಿ ಪಟ್ಟಣದ ರೇಣುಕಾಚಾರ್ಯರ ನಿವಾಸಕ್ಕೆ ಆಗಮಿಸಿ ಚಂದ್ರಶೇಖರ್ ಪಾರ್ಥೀವ ಶರೀರದ ಅಂತಿಮ ದರ್ಶನ ಪಡೆದ ಬಳಿಕ ಮಾಧ್ಯಮದವರ ಜೊತೆ ಮಾತನಾಡಿದ ಅವರು, ರೇಣುಕಾಚಾರ್ಯ ಎಲ್ಲರಿಗೂ ಚಿರಪರಿಚಿತರು. ರೇಣುಕಾಸ್ವಾಮಿಯರ ಬಲಗೈ ಬಂಟನಂತೆ ಚಂದ್ರಶೇಖರ್ ಕೆಲಸ ಮಾಡುತ್ತಿದ್ದ. ಚುನಾವಣೆಗಳಲ್ಲಿ ಗೆಲುವಿಗೆ ಕಾರಣಕರ್ತರಾಗಿದ್ದಾರೆ. ಇಂಥ ಸಾವು ಬರುತ್ತೆ ಅಂತಾ ಯಾರೂ ನಿರೀಕ್ಷೆ ಮಾಡಿರಲಿಲ್ಲ. ಈ ರೀತಿ ಸಾವು ಬರಬಾರದಿತ್ತು ಎಂದರು.
ಪ್ರಕರಣದ ಬಗ್ಗೆ ಸಮಗ್ರ ತನಿಖೆಯಾದರೆ ವಾಸ್ತವಿಕ ಸತ್ಯಾಂಶ ಹೊರ ಬಂದೇ ಬರುತ್ತೆ. ಸರಿಯಾದ ತನಿಖೆ ಮಾಡುತ್ತೇವೆ. ಅಪರಾಧಿಗಳನ್ನು ಬಂಧಿಸಿ ಸೂಕ್ತ ಕ್ರಮ ತೆಗೆದುಕೊಳ್ಳುತ್ತೇವೆಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಹೇಳಿದ್ದಾರೆ. ನಾನು ಸಹ ಈ ಬಗ್ಗೆ ಸಿಎಂ ಜೊತೆ ಮಾತನಾಡುತ್ತೇನೆ. ಇವತ್ತಲ್ಲಾ ನಾಳೆ ಅಪರಾಧಿಗಳು ಸಿಗುತ್ತಾರೆ ಎಂದು ಹೇಳಿದರು.