ಪುತ್ತೂರು: ಪುತ್ತೂರು ನಗರದ ಪಡೀಲ್ ಎಂಬಲ್ಲಿರುವ ಕಚೇರಿಯೊಂದಕ್ಕೆ ದಾಳಿ ನಡೆಸಿರುವ ಪುತ್ತೂರು ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ ಅವರು ಕಡಬ-ಪುತ್ತೂರು ತಾಲೂಕುಗಳ ಗ್ರಾಪಂ ಹಾಗೂ ನಗರಸಭೆಯ ನಕಲಿ ದಾಖಲೆ, ಸೀಲು ಮಾಡುತ್ತಿರುವ ಜಾಲವೊಂದನ್ನು ಪತ್ತೆ ಹಚ್ಚಿದ್ದು, ಓರ್ವನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಪುತ್ತೂರು ನಗರದ ಹೊರವಲಯದ ಪುತ್ತೂರು ಉಪ್ಪಿನಂಗಡಿ ರಸ್ತೆಯ ಪಡೀಲ್ ಎಂಬಲ್ಲಿ ಎಂ.ಎಸ್ ಕಾಂಪ್ಲೆಕ್ಸ್‌ನಲ್ಲಿ ಕಾರ್ಯಾಚರಿಸುತ್ತಿದ್ದ ಬಿ.ಬಿ ಇಲೆಕ್ಟ್ರಿಕಲ್ ಮತ್ತು ಪ್ಲಂಬಿಂಗ್ ಸಂಸ್ಥೆಯಲ್ಲಿ ನಕಲಿ ದಾಖಲೆ ಸೃಷ್ಟಿಯಾಗುತ್ತಿದ್ದು, ಆರೋಪಿ ಕೊಡಿಪ್ಪಾಡಿ ನಿವಾಸಿ ವಿಶ್ವನಾಥ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಪುತ್ತೂರು, ಕಡಬ, ಬಂಟ್ವಾಳ, ಸುಳ್ಯ ಸೇರಿದಂತೆ ಜಿಲ್ಲೆಯ ಬಹುತೇಕ ಗ್ರಾಪಂಗಳ ನಿರಾಪೇಕ್ಷಣಾ ಪತ್ರ, ಸೀಲು, ತೆರಿಗೆ ಪಾವತಿ ರಸೀದಿಗಳನ್ನು ಇಲ್ಲಿ ನಕಲಿಯಾಗಿ ಸೃಷ್ಟಿಸಿ ವಂಚನೆ ನಡೆಸಲಾಗುತ್ತಿತ್ತು. ಜನತೆಗೆ ವಿದ್ಯುತ್ ಸಂಪರ್ಕ ಸೇರಿದಂತೆ ಮತ್ತಿತರ ವಿಚಾರಗಳಿಗೆ ಗ್ರಾಪಂಗಳಿಂದ ಬೇಕಾಗಿದ್ದ ಎನ್‌ಒಸಿಗಳನ್ನು ಇಲ್ಲಿ ನಕಲಿಯಾಗಿ ಸೃಷ್ಟಿಸಿ ನೀಡಲಾಗುತ್ತಿತ್ತು ಎಂದು ತಿಳಿದುಬಂದಿದೆ. ಪುತ್ತೂರು ತಾಲೂಕಿನ ಬಹುತೇಕ ಗ್ರಾಪಂಗಳ ನಕಲಿ ದಾಖಲೆಗಳು ಇಲ್ಲಿ ಪತ್ತೆಯಾಗಿವೆ. ಸುಳ್ಯ ತಾಲೂಕಿನ ಕೆಲ ಗ್ರಾಪಂಗಳು, ಕಡಬ ತಾಲೂಕಿನ ಹಲವು ಗ್ರಾಪಂಗಳು ಹಾಗೂ ಬಂಟ್ವಾಳ ತಾಲೂಕಿನ ಕೆಲವು ಗ್ರಾಪಂಗಳ ನಕಲಿ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ.
ನಗರಸಭೆಯ ನಕಲಿ ದಾಖಲೆಗಳು:
ಪುತ್ತೂರು ತಾಲೂಕಿನ ನಗರಸಭೆಯ ನಕಲಿ ದಾಖಲೆಗಳು ಇಲ್ಲಿ ಪತ್ತೆಯಾಗಿವೆ. ನಗರಸಭಾ ಕಚೇರಿಯ ಸೀಲು, ನಿರಾಪೇಕ್ಷಣಾ ಪತ್ರ ಸೇರಿದಂತೆ ಹಲವು ದಾಖಲೆಗಳನ್ನು ಇಲ್ಲಿ ನಕಲಿಯಾಗಿ ಸೃಷ್ಟಿ ಮಾಡಿರುವುದು ಕಂಡುಬಂದಿದೆ. ಸಾರ್ವಜನಿಕರ ಮಾಹಿತಿ ಮೇರೆಗೆ ಪುತ್ತೂರು ತಾಪಂ ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ ನೇತೃತ್ವದಲ್ಲಿ ಈ ದಾಳಿ ನಡೆದಿದ್ದು, ನಗರಠಾಣಾ ಪೊಲೀಸರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.