ಗ್ಯಾಸ್ ಸ್ಫೋಟ: ಗರ್ಭಿಣಿ ಸೇರಿ 7 ಜನರಿಗೆ ಗಾಯ

ಸಿಲಿಂಡರ್‌
Advertisement

ಬೀಳಗಿ: ಪಟ್ಟಣದ ಕಾಟಕರ ಓಣಿಯ ಹುಚ್ಚಪ್ಪಯ್ಯನ ಕಟ್ಟಿ ಹತ್ತಿರ ಮನೆಯೊಂದರಲ್ಲಿ ರಾತ್ರಿ ೮ ಗಂಟೆ ವೇಳೆಗೆ ಅಡುಗೆ ಅನಿಲ ಸಿಲಿಂಡರ್ ಗ್ಯಾಸ್ ಸ್ಫೋಟಗೊಂಡು ಗರ್ಭಿಣಿ ಹಾಗೂ ೨ ವರ್ಷದ ಮಗು ಸೇರಿ ೭ ಜನರಿಗೆ ಗಾಯವಾದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ತಾಲೂಕಿನ ಕುಂದರಗಿ ಗ್ರಾಮದ ಸುರಗಿರಿ ಬೆಟ್ಟದ ಭುವನೇಶ್ವರಿ ದೇವಿಯ ದೇವಸ್ಥಾನಕ್ಕೆ ಲಕ್ಷ್ಮೀ ನರಸಿಂಹಪ್ಪ ಹೆಳವರ(೭೦) ಇವರು ಶುಕ್ರವಾರ ಸಂಜೆ ೪ಗಂಟೆಗೆ ಮನೆಯ ಬಾಗಿಲು ಹಾಕಿಕೊಂಡು ದೇವರ ದರ್ಶನ ಪಡೆಯಲು ತೆರಳಿದ್ದರು.
ರಾತ್ರಿ ೮ ಗಂಟೆಗೆ ಮನೆಗೆ ಆಗಮಿಸಿದಾಗ ಮೊಮ್ಮಗಳಾದ ಸವಿತಾ ಪ್ರವೀಣ ಹೆಳವರ(೨೪) ಬಾಗಿಲು ತೆರೆಯಲು ಮನೆಯೊಳಗೆ ಹೋಗಿ ವಿದ್ಯುತ್ ಬಟನ್ ಒತ್ತಿದಾಗ ಗ್ಯಾಸ್ ಸಿಲಿಂಡರ್ ಸೋರುವಿಕೆಯಿಂದ ಮನೆಯಲ್ಲಿ ತುಂಬಿಕೊಂಡಿದ್ದ ಗ್ಯಾಸ್ ತಕ್ಷಣವೇ ಸ್ಫೋಟಗೊಂಡಿದೆ.
ಎಂಟೂವರೆ ತಿಂಗಳ ತುಂಬು ಗರ್ಭಿಣಿ ಸವಿತಾಳಿಗೆ ಗಾಯವಾಗಿದ್ದಲ್ಲದೇ, ಪಕ್ಕದ ಮನೆಯ ಕಟ್ಟೆಯ ಮೇಲೆ ಕುಳಿತುಕೊಂಡಿದ್ದ ೬ ಜನರಿಗೆ ಏಕಾಏಕಿ ಬೆಂಕಿ ತಗುಲಿ ಗಾಯಗಳಾಗಿವೆ. ಒಬ್ಬ ಮಹಿಳೆ ಹಾಗೂ ೨ ವರ್ಷದ ಮಗುವಿಗೆ ಮೈತುಂಬ ಸುಟ್ಟ ಗಾಯಗಳಾಗಿವೆ.
ಬೀಳಗಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಬಾಗಲಕೋಟೆಯ ಕುಮಾರೇಶ್ವರ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸ್ಥಳೀಯ ಸರ್ಕಾರಿ ಆಸ್ಪತ್ರೆಯ ವೈದ್ಯರು, ಪೊಲೀಸ್ ಅಧಿಕಾರಿಗಳು ಹಾಗೂ ಸಿಲಿಂಡರ್ ಗ್ಯಾಸ್ ಇನ್ಸೂರೆನ್ಸ್ ಕಂಪನಿಯ ಮುಖ್ಯಸ್ಥರು ಭೇಟಿ ನೀಡಿದ್ದಾರೆ. ಗಾಯಾಳುಗಳ ಚಿಕಿತ್ಸೆಗೆ ನೆರವಿನ ಹಸ್ತ ಚಾಚಬೇಕಾಗಿದೆ.