`ನಾವು ವರ್ಷವಿಡೀ ಭೂಮಿತಾಯಿ ನಂಬಿ ದುಡಿಯುತ್ತೇವೆ. ಆದರೆ ತಕ್ಕ ಫಲ ದೊರೆಯುತ್ತಿಲ್ಲ. ನಮ್ಮಪ್ಪ, ತಾತನ ಕಾಲದಲ್ಲಿ ಕಾಲಕಾಲಕ್ಕೆ ಮಳೆ ಆಗುತ್ತಿತ್ತು, ಅದರಂತೆ ಬೆಳೆಯೂ ಬೆಳೆಯುತ್ತಿತ್ತು. ಆದರೆ ಇಂದು ಕಾಲ ಬದಲಾಗಿದೆ, ಅಭಿವೃದ್ಧಿ ಹೆಸರಿನಲ್ಲಿ ಕಾಡು ಕಡಿಯಲಾಗಿದೆ, ದೊಡ್ಡ ದೊಡ್ಡ ರಾಜಕಾರಣಿಗಳೇ ಸರ್ಕಾರದ ಭೂಮಿ ಗುಳುಂ ಮಾಡಿದ್ದಾರೆ, ಕೆರೆ-ಕಟ್ಟೆಗಳು ಕಾಣೆಯಾಗಿವೆ, ಗೋಮಾಳ ಹುಡುಕಿದರೂ ಸಿಗುತ್ತಿಲ್ಲ. ಇನ್ನು ಬಗರ್‌ಹುಕುಂ ಹೆಸರಿನಲ್ಲಿಯೂ ಅಪಾರ ಪ್ರಮಾಣದಲ್ಲಿ ಕಾಡು ನಾಶವಾಗಿದೆ. ಇದರಿಂದ ಪರಿಸರ ಅಸಮತೋಲನಗೊಂಡು, ಹವಾಮಾನದಲ್ಲಿನ ವೈಪರೀತ್ಯದಿಂದಾಗಿ ಮಳೆಗಾಲದಲ್ಲಿ ಸಮರ್ಪಕವಾಗಿ ಮಳೆ ಆಗುತ್ತಿಲ್ಲ. ಮುಂಗಾರು ಕೈಕೊಟ್ಟರೆ ನಮ್ಮ ಇಡೀ ಜೀವನ ಮೂರಾಬಟ್ಟೆ ಆಗುತ್ತದೆ. ಮಲೆನಾಡಿನಲ್ಲಿ ಧೋ.. ಎಂದು ಮಳೆ ಸುರಿದು ಭದ್ರಾ ಡ್ಯಾಂ ತುಂಬಿದರೆ ಮಾತ್ರ ಮಧ್ಯ ಕರ್ನಾಟಕದ ರೈತರು ಉಸಿರಾಡಲು ಸಾಧ್ಯವಾಗುತ್ತದೆ. ಭರ್ತಿಯಾದ ಜಲಾಶಯದಲ್ಲಿನ ನೀರನ್ನು ಕೂಡ ಪೋಲಾಗದಂತೆ, ಅಗತ್ಯತೆಗೆ ಅನುಗುಣವಾಗಿ ಲೆಕ್ಕಾಚಾರದಂತೆ ಬಳಸಿದರೆ ಮಾತ್ರ ಎರಡು ಭತ್ತದ ಬೆಳೆ ಬೆಳೆಯಲು ಸಾಧ್ಯವಾಗುತ್ತದೆ..’ ಹೀಗೆ ಭದ್ರಾ ಅಚ್ಚುಕಟ್ಟು ರೈತರೊಬ್ಬರು ನೀರು ಬಳಕೆ ಬಗ್ಗೆ ಲೆಕ್ಕವನ್ನು ನೀಡುತ್ತಾರೆ.
ನಿಜ, ರೈತರ ಲೆಕ್ಕಾಚಾರದಂತೆ ನೀರಾವರಿ ಇಲಾಖೆ ಅಧಿಕಾರಿಗಳು ನೀರು ವಿತರಣೆಗೆ ಕ್ರಮ ಕೈಗೊಂಡರೆ ಯಾವುದೇ ಸಮಸ್ಯೆ ಉಂಟಾಗದು. ೧೮೬ ಅಡಿ ನೀರು ಸಂಗ್ರಹ ಸಾಮರ್ಥ್ಯ ಹೊಂದಿರುವ ಭದ್ರಾ ಜಲಾಶಯ ಭರ್ತಿ ಆಗಿ ಅತ್ಯಂತ ಲೆಕ್ಕಾಚಾರದಿಂದ ನೀರಿನ ಬಳಕೆ ಆದಲ್ಲಿ ಮಾತ್ರ ಅಚ್ಚುಕಟ್ಟು ಪ್ರದೇಶದ ಜಮೀನುಗಳಿಗೆ ವರ್ಷಕ್ಕೆ ಎರಡು ಬೆಳೆ ಬೆಳೆಯಲು ನೀರು ಪೂರೈಸಬಹುದು, ಜನರ ಕುಡಿಯುವ ನೀರಿನ ದಾಹ ಇಂಗಿಸಬಹುದು. ಆದರೆ ಲೆಕ್ಕಾಚಾರ ತಪ್ಪಿದರೆ ಎಲ್ಲವೂ ಅಲ್ಲೋಲ ಕಲ್ಲೋಲ, ರೈತರಿಗೆ ಆರ್ಥಿಕ ಸಂಕಷ್ಟ, ಕುಡಿಯುವ ನೀರಿಗೆ ತತ್ವಾರ ಗ್ಯಾರಂಟಿ. ಈ ಬಾರಿ ಮುಂಗಾರು ಕೊರತೆಯಿಂದಾಗಿ ಭದ್ರಾ ಜಲಾಶಯ ಭರ್ತಿಯಾಗಲಿಲ್ಲ. ಕಳೆದ ವರ್ಷಕ್ಕಿಂತ ೩೧ ಅಡಿ ನೀರು ಕಡಿಮೆ ಇರುವುದರಿಂದ ಡ್ಯಾಂ ನೀರಿಗಾಗಿ ಮೇಲ್ಭಾಗದ ಮತ್ತು ಕೆಳಭಾಗದ ಅಚ್ಚುಕಟ್ಟು ರೈತರ ನಡುವೆ ಮತ್ತೆ ವಾಗ್ವಾದ ಶುರುವಾಗಿದೆ. ಇರುವ ನೀರಿನ್ನೇ ಪೋಲು ಮಾಡದಂತೆ ಬಹಳ ಎಚ್ಚರಿಕೆಯಿಂದ ಬಳಸಬೇಕಿದೆ. ಮಧ್ಯ ಕರ್ನಾಟಕದ ಜೀವನಾಡಿ ಆಗಿರುವ ಭದ್ರಾ ಜಲಾಶಯದ ನೀರೇ ಐದಾರು ಜಿಲ್ಲೆಗಳ ಜನ-ಜಾನುವಾರುಗಳಿಗೆ ಕುಡಿಯುವ ನೀರಿನ ಸೆಲೆಯಾಗಿದೆ. ಜೊತೆಗೆ ಅನ್ನ ನೀಡುವ ರೈತರ ಜಮೀನುಗಳಿಗೂ ನೀರಿನ ಮೂಲವಾಗಿದೆ. ಆದ್ದರಿಂದ ರೈತರೇ ನೀಡುವ ಲೆಕ್ಕಾಚಾರದ ಪ್ರಕಾರ ಅಧಿಕಾರಿಗಳು ಅಚ್ಚುಕಟ್ಟು ಜಮೀನುಗಳಿಗೆ ಮತ್ತು ಕುಡಿಯುವ ನೀರಿಗಾಗಿ ಬಹಳ ಎಚ್ಚರಿಕೆಯಿಂದ ಬಳಸಿದಲ್ಲಿ ರೈತರ ನಡುವಿನ ವಾಗ್ವಾದವನ್ನು ಒಂದಿಷ್ಟು ಶಮನಗೊಳಿಸಬಹುದು. ಬೇಸಿಗೆಯಲ್ಲಿ ಉಂಟಾಗಬಹುದಾದ ನೀರಿನ ತತ್ವಾರ ಕಡಿಮೆಯಾಗಬಲ್ಲದು.
ಈ ಹಿಂದೆ ಹೊಸಪೇಟೆಯ ತುಂಗಭದ್ರಾ ಜಲಾಶಯಕ್ಕೆ ಭದ್ರಾ ಡ್ಯಾಂನಿಂದ ೭ ಟಿಎಂಸಿ ನೀರು ಹರಿಸಲು ರಾಜ್ಯ ಸರ್ಕಾರ ಸೂಚನೆ ನೀಡಿದ್ದಾಗ, ನೀರಾವರಿ ಇಲಾಖೆ ಅಧಿಕಾರಿಗಳು ಪ್ರಸ್ತುತ ಜಲಾಶಯದಲ್ಲಿನ ನೀರಿನ ಪ್ರಮಾಣದ ಹನಿಹನಿ ಬಳಕೆಯ ಲೆಕ್ಕಾಚಾರವನ್ನು ಸರ್ಕಾರದ ಮುಂದಿಟ್ಟು ಇಲ್ಲಿರುವ ಬೆಳೆಗಳ ರಕ್ಷಣೆಗೆ ಇನ್ನೂ ೨.೬ ಟಿಎಂಸಿ ನೀರಿನ ಕೊರತೆ ಉಂಟಾಗುತ್ತಿದೆ, ಹೀಗಿರುವಾಗ ತುಂಗಭದ್ರಾ ಡ್ಯಾಂಗೆ ನೀರು ಹರಿಸಲು ಸಾಧ್ಯವಿಲ್ಲ ಎಂದು ಖಡಕ್ ಉತ್ತರ ಬರೆದಿದ್ದರು. ಅಲ್ಲದೆ ಭಾರತೀಯ ರೈತ ಒಕ್ಕೂಟ, ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ನೇತೃತ್ವದಲ್ಲಿ ದಾವಣಗೆರೆ, ಶಿವಮೊಗ್ಗ ಜಿಲ್ಲೆಯಲ್ಲಿ ಪ್ರತಿಭಟನೆಗಳು ನಡೆದ ಕಾರಣ ಸರ್ಕಾರ ಅಂತಹದೊಂದು ತೀರ್ಮಾನವನ್ನು ಹಿಂದಕ್ಕೆ ಪಡೆಯಿತು. ಇಲ್ಲದಿದ್ದರೆ ಈಗಿರುವ ನೀರು ಖಾಲಿಯಾಗಿ ಮಧ್ಯ ಕರ್ನಾಟಕದ ಜನತೆ ತೀವ್ರ ಕುಡಿಯುವ ನೀರಿನ ಸಮಸ್ಯೆ ಎದುರಿಸಬೇಕಾಗಿತ್ತು.
ಗ್ಯಾರಂಟಿ ಹಣ ಖರ್ಚು ಮಾಡಿ
ಗ್ಯಾರಂಟಿ ಯೋಜನೆಗಳೀಗೆ ಹಣ ಒದಗಿಸುವುದರಿಂದ ಕೃಷಿ, ನೀರಾವರಿ, ಕೈಗಾರಿಕೆ ಮತ್ತಿತರ ಉದ್ಯೋಗ ಸೃಷ್ಟಿಸುವ, ಕೃಷಿ, ಕೈಗಾರಿಕೆ ಉತ್ಪಾದನೆ ಹೆಚ್ಚಿಸುವ ಯೋಜನೆಗಳಿಗೆ ಹಣದ ಕೊರತೆ ಉಂಟಾಗಿ ಜನರನ್ನು ಮತ್ತಷ್ಟು ಬಡತನದ ಕೂಪಕ್ಕೆ ತಳ್ಳಲಾಗುತ್ತದೆ. ಇದರಿಂದ ಭದ್ರಾ ಮೇಲ್ದಂಡೆ ಯೋಜನೆ ಸೇರಿದಂತೆ ರಾಜ್ಯದ ಹಲವು ನೀರಾವರಿ ಯೋಜನೆಗಳ ಕಾಮಗಾರಿ ಪೂರ್ಣಗೊಳಿಸಲು ಈವರೆಗೂ ಸರ್ಕಾರಕ್ಕೆ ಸಾಧ್ಯವಾಗಿಲ್ಲ. ಆದ್ದರಿಂದ ಗ್ಯಾರಂಟಿ ಯೋಜನೆಗಳ ಹಣವನ್ನು ಭದ್ರಾ ಮೇಲ್ದಂಡೆ ಯೋಜನೆ ಪೂರ್ಣಗೊಳಿಸಲು ಖರ್ಚು ಮಾಡಿ’ ಎಂದು ರೈತ ಮುಖಂಡರು ಒತ್ತಾಯ ಮಾಡಿದ್ದಾರೆ. ಚಿತ್ರದುರ್ಗ ಜಿಲ್ಲೆಗೆ ಭದ್ರಾ ಜಲಾಶಯದಿಂದ ಕುಡಿಯುವ ನೀರಿಗಾಗಿ ೯ ಟಿಎಂಸಿ ನೀರು ಹರಿಸಬೇಕು. ವಾಣಿವಿಲಾಸ ಸಾಗರ ಜಲಾಶಯಕ್ಕೂ ನೀರು ಹರಿಸಬೇಕು. ಕೆರೆ-ಕಟ್ಟೆಗಳನ್ನು ತುಂಬಿಸಬೇಕು, ತುಮಕೂರು ಜಿಲ್ಲೆಯ ಕುಡಿಯುವ ನೀರಿನ ದಾಹ ತೀರಿಸಬೇಕು. ಇದೆಲ್ಲ ಸಾಕಾರಗೊಳ್ಳಬೇಕಾದರೆ ಭದ್ರಾ ಮೇಲ್ದಂಡೆ ಯೋಜನೆ ಪ್ರಕಾರ ತುಂಗಾ ಜಲಾಶಯದಿಂದ ಭದ್ರಾ ಜಲಾಶಯಕ್ಕೆ ನೀರು ಹರಿಸಲು ೧೨ ಕಿ.ಮೀ ಕಾಲುವೆ, ಪಂಪ್‌ಹೌಸ್, ಸುರಂಗ ಮಾರ್ಗ ನಿರ್ಮಾಣವಾಗಬೇಕು. ತುಂಗಾ ಜಲಾಶಯದಿಂದ ಭದ್ರಾ ಜಲಾಶಯಕ್ಕೆ ೧೯.೫ ಟಿಎಂಸಿ ನೀರು ಪಂಪ್ ಮಾಡಬೇಕು. ಆದರೆ ಕಳೆದ ೧೩ ವರ್ಷಗಳಿಂದ ಈ ಕಾಮಗಾರಿ ಕುಂಟುತ್ತಲೇ ಸಾಗಿದೆ. ಹೀಗಾಗಿ ಯೋಜನಾ ವೆಚ್ಚ ನಾಲ್ಕುಪಟ್ಟು ಹೆಚ್ಚಾಗಿದೆ. ಮೇಲ್ದಂಡೆ ಯೋಜನೆ ಪೂರ್ಣಗೊಳ್ಳದೆ ಭದ್ರಾ ಜಲಾಶಯದ ನೀರನ್ನೇ ಮೇಲ್ದಂಡೆ ಫಲಾನುಭವಿ ಜಿಲ್ಲೆಗಳಿಗೆ ಹರಿಸಲಾಗುತ್ತಿದೆ.
ಇದರಿಂದಲೂ ಭದ್ರಾ ಜಲಾಶಯ ನೀರಿನ ಕೊರತೆ ಅನುಭವಿಸುತ್ತಿದೆ. ರೈತರ ಹಿತದೃಷ್ಟಿಯಿಂದ ಮಧ್ಯ ಕರ್ನಾಟಕ ಜಿಲ್ಲೆಗಳ ಶಾಸಕರು, ಲೋಕಾಸಭಾ ಸದಸ್ಯರು ಪಕ್ಷಭೇದ ಮರೆತು ಸರ್ಕಾರಕ್ಕೆ ಒತ್ತಾಯಿಸಿ ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿ ಚುರುಕುಗೊಳಿಸಬೇಕು. ಜನವರಿಯಿಂದ ಏಪ್ರಿಲ್‌ವರೆಗೆ ಮಾತ್ರ ತುಂಗಾ ಜಲಾಶಯದಿಂದ ಭದ್ರಾ ಜಲಾಶಯಕ್ಕೆ ನೀರು ಹರಿಸುವ ಕಾಲುವೆ ಕಾಮಗಾರಿ ನಡೆಸಲು ಸಾಧ್ಯವಿರುವುದರಿಂದ ತಕ್ಷಣ ಕಾಮಗಾರಿ ಕೈಗೊಳ್ಳಲು ಕ್ರಮ ಜರುಗಿಸಬೇಕು. ಕೇಂದ್ರ ಸರ್ಕಾರ ಕೂಡ ಭದ್ರಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆ ಎಂದು ಘೋಷಣೆ ಮಾಡಿ, ಈಗಾಗಲೇ ಬಜೆಟ್‌ನಲ್ಲಿ ಘೋಷಣೆ ಮಾಡಿದಂತೆ ೫೩೦೦ ಕೋಟಿ ರೂ.ಗಳನ್ನು ಬಿಡುಗಡೆ ಮಾಡಬೇಕು. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಮತ್ತು ರಾಜ್ಯದ ಎಲ್ಲ ಸಂಸದರು ರಾಜಕೀಯ ಇಚ್ಛಾಶಕ್ತಿ ಪ್ರದರ್ಶಿಸಬೇಕಿದೆ.
ಕಾಡಾ ಸಮಿತಿ ಸಭೆ ದಾವಣಗೆರೆಯಲ್ಲಾಗಬೇಕು
ಭದ್ರಾ ಅಚ್ಚುಕಟ್ಟುದಾರರ ನಡುವೆ ನೀರಿನ ಹಂಚಿಕೆ ಬಗ್ಗೆ ಮೊದಲಿನಿಂದಲೂ ದಾಯಾದಿ ಕಲಹ ಇದ್ದೇ ಇದೆ. ಶನಿವಾರ ಶಿವಮೊಗ್ಗದಲ್ಲಿ ಭದ್ರಾ ಕಾಡಾ ಅಧ್ಯಕ್ಷ ಹಾಗೂ ಸಚಿವ ಮಧು ಬಂಗಾರಪ್ಪ ಅವರ ಅಧ್ಯಕ್ಷತೆಯಲ್ಲಿ ಜರುಗಿದ ಭದ್ರಾ ಕಾಡಾ ಸಮಿತಿ ಸಭೆ ಜಲಾಶಯದ ಎಡದಂಡೆ ಕಾಲುವೆಗೆ ಜ.೧೦ರಿಂದ ಮತ್ತು ಬಲದಂಡೆ ಕಾಲುವೆಗೆ ಜ.೨೦ರಿಂದ ಆನ್ ಮತ್ತು ಆಫ್ ಪದ್ಧತಿ ಮೂಲಕ ನೀರು ಹರಿಸಲು ನಿರ್ಣಯ ಕೈಗೊಂಡಿದೆ. ಇದಕ್ಕೆ ದಾವಣಗೆರೆ ಜಿಲ್ಲೆ ರೈತರು ಅಸಮಾಧಾನ ವ್ಯಕ್ತಪಡಿಸಿದ್ದು, ಇದೊಂದು ಅವೈಜ್ಞಾನಿಕ ನಿರ್ಣಯ, ಇದರಿಂದ ಕೊನೆ ಭಾಗದ ಜಮೀನುಗಳಿಗೆ ಒಂದು ದಿನವೂ ನೀರು ಹರಿಯುವುದಿಲ್ಲ ಎಂದಿದ್ದಾರೆ. ದಾವಣಗೆರೆ ಜಿಲ್ಲೆಯ ರೈತರ ಹಿತಾಸಕ್ತಿ ಕಾಪಾಡಬೇಕಾಗಿದ್ದ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಕಾಡಾ ಸಮಿತಿ ಸಭೆಗೆ ಗೈರು ಹಾಜರಾಗಿರುವುದು ಕೂಡ ರೈತ ಮುಖಂಡರನ್ನು ಕೆರಳಿಸಿದೆ. ಪ್ರಸ್ತುತ ೧೫೧ ಅಡಿ ನೀರು ಜಲಾಶಯದಲ್ಲಿದ್ದು, ಜ.೨೦ಕ್ಕೆ ಬದಲಾಗಿ ಫೆ.೧ರಿಂದ ನೀರನ್ನು ಕಾಲುವೆಗೆ ಪ್ರತಿದಿನ ೨೬೫೦ ಕ್ಯೂಸೆಕ್‌ನಂತೆ ಆನ್ ಆಂಡ್ ಆಫ್ ಪದ್ಧತಿ ಮೂಲಕ ೬೦-೭೨ ದಿನಗಳವರೆಗೆ ಹರಿಸಬಹುದಾಗಿದೆ. ೨.೪೦ ಟಿಎಂಸಿ ನೀರು ಆವಿಯಾಗುತ್ತದೆ, ಮೈಲಾರ ಜಾತ್ರೆಗೆ ನೀರು ಬಿಡಬೇಕು ಎಂಬುದು ತಲೆಬುಡವಿಲ್ಲದ್ದು ಎಂದು ಅಧಿಕಾರಿಗಳ ಲೆಕ್ಕಾಚಾರಕ್ಕೆ ವಿರೋಧ ವ್ಯಕ್ತಪಡಿಸಿದ್ದು, ಅಧಿಕಾರಿಗಳೊಂದಿಗಿನ ಜಟಾಪಟಿ ಮುಂದುವರಿದಿದೆ. ಈ ಹಿಂದೆ ಬಂಗಾರಪ್ಪ ಮುಖ್ಯಮಂತ್ರಿ ಆಗಿದ್ದಾಗ ಜಲಾಶಯದಲ್ಲಿ ೧೪೮ ಅಡಿ ನೀರಿದ್ದಾಗಲೇ ಭತ್ತ ಬೆಳೆಯಲು ನೀರು ಬಿಟ್ಟಿದ್ದರು, ಆದರೆ ಅವರ ಮಗ ಮಧು ಬಂಗಾರಪ್ಪ ಅವರೆ ಭದ್ರಾ ಕಾಡಾ ಅಧ್ಯಕ್ಷರಾಗಿದ್ದು, ಫೆ.೧ರಿಂದ ೭೨ ದಿನ ನೀರು ಹರಿಸಲು ಯಾಕೆ ಆಗುವುದಿಲ್ಲ ಎಂದು ಪ್ರಶ್ನಿಸಿದ್ದಾರೆ.
ಭದ್ರಾ ಜಲಾಶಯ ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಯ ಗಡಿ ಭಾಗದಲ್ಲಿದ್ದರೂ, ಸುಮಾರು ಶೇ.೭೦ರಷ್ಟು ಅಚ್ಚುಕಟ್ಟು ಪ್ರದೇಶ ದಾವಣಗೆರೆ ಜಿಲ್ಲೆಯಲ್ಲೇ ಇದೆ. ಆದ್ದರಿಂದ ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ದಿ ಸಮಿತಿ (ಕಾಡಾ) ಸಭೆಯನ್ನು ಕಡ್ಡಾಯವಾಗಿ ದಾವಣಗೆರೆಯಲ್ಲೇ ನಡೆಸಬೇಕು. ಅಚ್ಚುಕಟ್ಟು ಪ್ರದೇಶದ ಕೊನೆ ಭಾಗದ ಜಮೀನುಗಳಿಗೂ ಸರಾಗವಾಗಿ ನೀರು ಹರಿಸುವಂತೆ ಕ್ರಮ ಕೈಗೊಳ್ಳಬೇಕು. ತುಂಗಾ ಜಲಾಶಯದಿಂದ ಭದ್ರಾ ಜಲಾಶಯಕ್ಕೆ ನೀರು ಲಿಫ್ಟ್ ಮಾಡಿದ ನಂತರವೇ ಮೇಲ್ದಂಡೆ ಯೋಜನೆ ಜಿಲ್ಲೆಗಳಿಗೆ ನೀರು ಹರಿಸಬೇಕು, ಭದ್ರಾ ಕಾಡಾ ಕಚೇರಿಯನ್ನು ದಾವಣಗೆರೆಯಲ್ಲೇ ಸ್ಥಾಪಿಸಬೇಕು, ಅಚ್ಚುಕಟ್ಟು ಪ್ರದೇಶದ ಮೇಲ್ಭಾಗದಲ್ಲಿ ಮುಖ್ಯ ಕಾಲುವೆಗಳಿಗೆ ಅಕ್ರಮವಾಗಿ ಅಳವಡಿಸಿಕೊಂಡಿರುವ ಪಂಪ್‌ಸೆಟ್‌ಗಳನ್ನು ತೆರವುಗೊಳಿಸಬೇಕು, ಮುಖ್ಯ ಕಾಲುವೆ ಮತ್ತು ಉಪಕಾಲುವೆಗಳನ್ನು ದುರಸ್ತಿಗೊಳಿಸಬೇಕು ಎಂಬುದು ರೈತ ಮುಖಂಡರ ಆಗ್ರಹ. ಈ ಬೇಡಿಕೆಗಳನ್ನು ಬಹಳ ವರ್ಷಗಳಿಂದ ಸರ್ಕಾರದ ಮುಂದಿಡುತ್ತ ಬಂದಿದ್ದರೂ ಯಾವೊಂದು ಸರ್ಕಾರವೂ ಗಮನ ಹರಿಸುತ್ತಿಲ್ಲ ಎಂಬುದು ಬೇಸರದ ಸಂಗತಿ.