ಗೃಹಜ್ಯೋತಿ: ಒಂದು ಕೋಟಿ ಗ್ರಾಹಕರಿಂದ ನೋಂದಣಿ

Advertisement

ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಗೃಹಜ್ಯೋತಿ ಯೋಜನೆಗೆ ರಾಜ್ಯದ 1 ಕೋಟಿಗೂ ಅಧಿಕ ಕುಟುಂಬಗಳು ಯಶಸ್ವಿಯಾಗಿ ಅರ್ಜಿ ಸಲ್ಲಿಸಿವೆ ಎಂದು ಬೆಸ್ಕಾಂ ತಿಳಿಸಿದೆ, ಬುಧವಾರದ ಅಂತ್ಯಕ್ಕೆ ಬರೋಬ್ಬರಿ 1,00,20,163 ಅರ್ಜಿ ಸಲ್ಲಿಕೆಯಾಗಿವೆ. ನೋಂದಣಿ ಕಾರ್ಯ ಜೂನ್‌ 18 ರಿಂದ ಆರಂಭಿಸಲಾಗಿತ್ತು. ನೋಂದಣಿ ಆರಂಭವಾದ 17 ದಿನಗಳಲ್ಲಿಯೇ ಬರೋಬ್ಬರಿ ಒಂದು ಕೋಟಿ ಅರ್ಜಿ ಸಲ್ಲಿಕೆಯಾಗಿದೆ. ಉಚಿತ ವಿದ್ಯುತ್‌ ಸೌಲಭ್ಯವು ಜುಲೈ 1 ರಿಂದಲೇ ಆರಂಭವಾಗಿದೆ. ಜುಲೈ 25ರೊಳಗೆ ಅರ್ಜಿ ಸಲ್ಲಿಸುವವರಿಗೆ ಆಗಸ್ಟ್‌ ಬಿಲ್‌ನಲ್ಲಿ ಉಚಿತ ವಿದ್ಯುತ್‌ ಶುಲ್ಕ ಮನ್ನಾವಾಗಲಿದೆ. ಆ ಬಳಿಕ ಅರ್ಜಿ ಸಲ್ಲಿಸುವವರು ಮುಂದಿನ ತಿಂಗಳು (ಸೆಪ್ಟೆಂಬರ್) ಉಚಿತ ವಿದ್ಯುತ್‌ ಸೌಲಭ್ಯ ಪಡೆದುಕೊಳ್ಳಲಿದ್ದಾರೆ ಎಂದಿದ್ದಾರೆ.


ಯೋಜನೆಯ ವ್ಯಾಪ್ತಿಗೆ ಒಳಪಡುವವರು ತಪ್ಪದೇ ಅರ್ಜಿ ಸಲ್ಲಿಸಿ, ಇತರರಿಗೂ ಅರ್ಜಿ ಸಲ್ಲಿಸಲು ನೆರವಾಗಿ. ಯೋಜನೆಯ ನೋಂದಣಿ ಪ್ರಕ್ರಿಯೆಯು ತುಂಬಾ ಸರಳವಾಗಿದೆ ಮತ್ತು ಗ್ರಾಹಕರು ಯಾವುದೇ ದಾಖಲೆಗಳನ್ನು ಒದಗಿಸುವ ಅಗತ್ಯವಿಲ್ಲ. ನೋಂದಣಿ ಮಾಡಲು ವಿದ್ಯುತ್ ಬಿಲ್‌ನಲ್ಲಿ ಖಾತೆ ಸಂಖ್ಯೆ, ಗ್ರಾಹಕರ ಆಧಾರ್ ಸಂಖ್ಯೆ ಮತ್ತು ಮೊಬೈಲ್ ಸಂಖ್ಯೆಯನ್ನು ನಮೂದಿಸಿದರೆ ಸಾಕು. ನೋಂದಣಿ ಪ್ರಕ್ರಿಯೆ ರಾಜ್ಯದ ಎಲ್ಲ ಕರ್ನಾಟಕ ಒನ್, ಗ್ರಾಮ ಒನ್ ಹಾಗು ಬೆಂಗಳೂರು ಒನ್ ಕೇಂದ್ರಗಳಲ್ಲಿ ನಡೆಯುತ್ತಿದೆ. ಸೇವಾ ಸಿಂಧು ಪೋರ್ಟಲ್ https://sevasindhugs.karnataka.gov.in ಮೂಲಕ ನೋಂದಣಿ ಮಾಡಲಾಗುತ್ತಿದೆ. ನೋಂದಣಿ ಪ್ರಕ್ರಿಯೆಗೆ ಯಾವುದೇ ಗಡುವು ಇಲ್ಲ. ಹಾಗಾಗಿ ಗ್ರಾಹಕರು ಆತಂಕ ಪಡುವ ಅಗತ್ಯವಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.