ಗುರುವಿನಲ್ಲಿ ನಂಬಿಕೆ ಇರಲಿ… ನಿಮ್ಮಲ್ಲಿ ಆತ್ಮವಿಶ್ವಾಸವಿರಲಿ: ಡಾ. ಗುರುರಾಜ ಕರಜಗಿ

ಗುರುರಾಜ ಕರಜಗಿ
Advertisement

ಹುಬ್ಬಳ್ಳಿ: ಗುರುವಿನಲ್ಲಿ ನಂಬಿಕೆ, ಓದಿನಲ್ಲಿ ಶ್ರದ್ಧೆ, ನಿರಂತರ ಪರಿಶ್ರಮ, ಆತ್ಮವಿಶ್ವಾಸವಿದ್ದಲ್ಲಿ ಹೆಚ್ಚಿನ ಜ್ಞಾನ ಸಂಪಾದನೆ ಸಾಧ್ಯವಿದೆ. ಬರೀ ಕಾಲೇಜು ಪರೀಕ್ಷೆಯಲ್ಲ. ಜೀವನದ ಪರೀಕ್ಷೆಗಳನ್ನು ಯಶಸ್ವಿಯಾಗಿ ಎದುರಿಸಲು ಆತ್ಮವಿಶ್ವಾಸದ ಹೆಜ್ಜೆಗಳನ್ನು ಇಡಬೇಕು ಎಂದು ಶಿಕ್ಷಣ ತಜ್ಞರು ಹಾಗೂ ಲೋಕ ಶಿಕ್ಷಣ ಟ್ರಸ್ಟ್ ಧರ್ಮದರ್ಶಿ ಗುರುರಾಜ ಕರಜಗಿ ಹೇಳಿದರು.
ನಗರದ ಹೊರವಲಯದಲ್ಲಿರುವ ಉಡುಪಿ ಪೇಜಾವರ ಮಠದ ಕೆಎಸ್‌ಎಸ್ ಪದವಿಪೂರ್ವ ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಆಯೋಜಿಸಿದ್ಧ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಮೊದಲು ನಮ್ಮಲ್ಲಿ ನಮಗೆ ವಿಶ್ವಾಸ ಇರಬೇಕು. ಮಾಡುವ ಕೆಲಸದಲ್ಲಿ ಶ್ರದ್ಧೆ ಇರಬೇಕು. ಇವರೆಡೂ ಇಲ್ಲದೇ ಇದ್ದರೆ ಮಿಕ್ಕದ್ದು ಏನೇ ಇದ್ದರೂ ಪ್ರಯೋಜನಕ್ಕೆ ಬರುವುದಿಲ್ಲ. ಪರಿಶ್ರಮದ ಜೊತೆಗೆ ದೇವರ ಮೇಲೆ ನಂಬಿಕೆ ಇಟ್ಟು ಕೆಲಸ ಮಾಡಬೇಕು ಎಂದು ಕಿವಿಮಾತು ಹೇಳಿದರು.
ತಾಯ್‌ಪೋಂಡಾ ನೀತಿಕತೆ, ಮಾಜಿ ರಾಷ್ಟ್ರಪತಿ ಡಾ.ಎ.ಪಿ.ಜೆ ಅಬ್ದುಲ್ ಕಲಾಂ, ಶ್ರೇಷ್ಠ ಗಾಯಕಿ ಲತಾ ಮಂಗೇಶ್ಕರ್, ಡಾ. ಮೆಹ್ತಾ ಅವರ ಜೀವನ ಮತ್ತು ಸಾಧನೆಗಳನ್ನು ವಿವರಿಸಿದರು.
ಕಾಲೇಜಿನ ಗೌರವ ಕಾರ್ಯದರ್ಶಿ ಡಾ. ಸತ್ಯಮೂರ್ತಿ ಆಚಾರ್ಯ ಮಾತನಾಡಿ, ಡಾ. ಗುರುರಾಜ್ ಕರಜಗಿಯವರು ಹೆಸರಿಗೆ ತಕ್ಕಂತೆ ಗುರುಗಳ ರಾಜ ಹಾಗೂ ಅವರ ಪ್ರತಿ ಹೃದಯದ ಬಡಿತವು ಶಿಕ್ಷಣ ಶಿಕ್ಷಣ ಎಂದು ಹೇಳುತ್ತದೆ ಎಂದು ಹೇಳುವ ಮೂಲಕ ಗುರುರಾಜ ಕರಜಗಿ ಅವರ ಶಿಕ್ಷಣ ಪ್ರೇಮ, ಮಕ್ಕಳ, ಶಿಕ್ಷಕರ ಪರ ಕಾಳಜಿಯನ್ನು ಕೊಂಡಾಡಿದರು. ಕಾಲೇಜಿನ ವತಿಯಿಂದ ಡಾ.ಗುರುರಾಜ ಕರಜಗಿ ಅವರನ್ನು ಸನ್ಮಾನ ಮಾಡಲಾಯಿತು.
ಕಾಲೇಜಿನ ಕಾರ್ಯಕಾರಿ ಸಮಿತಿಯ ಕಾರ್ಯಾಧ್ಯಕ್ಷ ಶ್ರೀಕಾಂತ ಕೆಮ್ತೂರ ಹಾಗೂ ಸಮಿತಿಯ ಜಂಟಿ ಕಾರ್ಯದರ್ಶಿಗಳಾದ ಗೋಪಾಲ ಕುಲಕರ್ಣಿ, ಗೋವಿಂದ ಮೈಸೂರು, ಎ. ಪಿ. ಐತಾಳ ಹಾಗೂ ಪ್ರಾಚಾರ್ಯರಾದ ಮಹೇಂದ್ರ ಜಿ. ಎ. ಹಾಗೂ ಕನ್ನಡ ಉಪನ್ಯಾಸಕರಾದ ಏಕನಾಥ. ಜೋಶಿ. ನಿರೂಪಿಸಿ ವಂದಿಸಿದರು.