ಗದಗ ಯಲವಿಗಿ ರೈಲ್ವೆ ಯೋಜನೆಗೆ ರಾಜ್ಯ ಸರ್ಕಾರದಿಂದ 600 ಕೋಟಿ ರೂ. : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಬಸವರಾಜ
Advertisement

ಗದಗ : ಗದಗ ಯಲವಿಗಿ ರೈಲ್ವೆ ಯೋಜನೆ ಅನುಷ್ಠಾನಗೊಳಿಸಲು ತೀರ್ಮಾನಿಸಲಾಗಿದ್ದು, ಈ ಯೋಜನೆಗೆ ರಾಜ್ಯ ಸರ್ಕಾರದ ಪಾಲು 600 ಕೋಟಿ ರೂ. ನೀಡಲಾಗುವುದು. ಈ ರೈಲು ಶಿರಹಟ್ಟಿಯ ಮೂಲಕ ಸಾಗುವ ಬಗ್ಗೆ ಪೂರಕ ಪ್ರಯತ್ನಗಳನ್ನು ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಅವರು ಇಂದು ಗದಗ ಜಿಲ್ಲೆಯ ಶಿರಹಟ್ಟಿಯಲ್ಲಿ ಆಯೋಜಿಸಲಾಗಿದ್ದ ಭಾರತೀಯ ಜನತಾ ಪಕ್ಷ ಜನಸಂಕಲ್ಪ ಯಾತ್ರೆಯಲ್ಲಿ ಭಾಗವಹಿಸಿ ಮಾತನಾಡಿದರು. ಗದಗ ಜಿಲ್ಲೆಯಲ್ಲಿ ಜಾಲವಾಡಗಿ ನೀರಾವರಿ ಯೋಜನೆಗೆ ಚಾಲನೆ ಹಾಗೂ ತಮಗೊಂಡ ಯೊಜನೆಗಳಿಗೆ ಶೀಘ್ರದಲ್ಲಿ ಮಂಜೂರಾತಿ ನೀಡಲಾಗುವುದು. ಶಿರಹಟ್ಟಿ ಮುಂಡರಗಿ ಕ್ಷೇತ್ರವನ್ನು ಪ್ರವಾಸೋದ್ಯಮದ ಗಮ್ಯವಾಗಿಸಲು ಕ್ರಮ ತೆಗೆದುಕೊಳ್ಳಲಾಗುವುದು ಎಂದರು.
ಲಂಬಾಣಿ ತಾಂಡಾಗಳನ್ನು ಕಂದಾಯ ಗ್ರಾಮಗಳಾಗಿ ಒಂದು ತಿಂಗಳಲ್ಲಿ ಮಾಡಲಾಗುವುದು. ತಾಂಡಾದ ಪ್ರತಿಯೊಂದು ಮನೆಗೂ ಹಕ್ಕುಪತ್ರಗಳನ್ನು ಒಂದು ತಿಂಗಳಲ್ಲಿ ತಲುಪಿಸಲಾಗುವುದು ಅವರ ಬೇಡಿಕೆಯನ್ನು ಈಡೇರಿಸುವುದು ಸರ್ಕಾರ ಬದ್ಧತೆಯಾಗಿದೆ ಎಂದು ತಿಳಿಸಿದರು. ಶಿರಹಟ್ಟಿಯಲ್ಲಿ ಕನಕದಾಸರ ಸಭಾ ಭವನ ನಿರ್ಮಾಣಕ್ಕೆ ಬೇಡಿಕೆ ಇದ್ದು, ಇದಕ್ಕಾಗಿ 1. ಕೋಟಿ ರೂ.ಶೀಘ್ರವೇ ಬಿಡುಗಡೆ ಮಾಡಲಾಗುವುದು.ಗದಗ ಜಿಲ್ಲೆಗೆ 1.20 ಲಕ್ಷ ರೈತರಿಗೆ ಮಳೆಯಿಂದ ಹಾನಿಗೊಳಗಾದ ಬೆಳೆಗಳಿಗೆ 209 ಕೋಟಿ ರೂ. ಪರಿಹಾರ ಬಿಡುಗಡೆಯಾಗಿದೆ. ಗದಗ ಜಿಲ್ಲೆಗೆ 97 ಕೋಟಿ ರೂ. ಬೆಳೆ ವಿಮೆ ಬಂದಿದೆ. 9 ಕೋಟಿ ರೂ.ಗಳ ರೈತ ವಿದ್ಯಾನಿಧಿಯನ್ನು ಈ ಜಿಲ್ಲೆಯ ಮಕ್ಕಳಿಗೆ ನೀಡಲಾಗಿದೆ. ಪಿಎಂ ಕಿಸಾನ್ ಯೋಜನೆ, 159 ಕೋಟಿ ರೂ. ಗದಗ ಜಿಲ್ಲೆಗೆ ಬಂದಿದ್ದು, ರೈತಾಪಿ ವರ್ಗವನ್ನು ಬಲಿಷ್ಟಗೊಳಿಸಲು ಈ ಎಲ್ಲ ಕ್ರಮವನ್ನು ತೆಗೆದುಕೊಳ್ಳಲಾಗಿದೆ ಎಂದರು.