ಸೂರ್ಯನಾರಾಯಣ ನರಗುಂದಕರ
ಗದಗ: ಗದಗ-ಬೆಟಗೇರಿ ಅವಳಿ ನಗರದ ಜನತೆಯನ್ನು ಬೆಚ್ಚಿ ಬೀಳಿಸಿರುವ ಗದಗ ದಾಸರಗಲ್ಲಿಯಲ್ಲಿ ನಗರಸಭೆ ಉಪಾಧ್ಯಕ್ಷೆ ಪುತ್ರ ಸೇರಿದಂತೆ ಒಂದೇ ಕುಟುಂಬದ ನಾಲ್ವರನ್ನು ಮಾರಕಾಸ್ತçಗಳಿಂದ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಿ ಪರಾರಿಯಾಗಿರುವ ಕೊಲೆಗಾರರ ಸುಳಿವು ಪೊಲೀಸರಿಗೆ ಲಭ್ಯವಾಗಿದ್ದು ತನಿಖೆ ಚುರುಕುಗೊಂಡಿದೆ.
ಈ ಕೃತ್ಯದಲ್ಲಿ ಐದು ಜನರು ಪಾಲ್ಗೊಂಡಿದ್ದಾರೆ. ದುಷ್ಕರ್ಮಿಗಳು ೨೮ರಿಂದ ೩೫ ವರ್ಷದೊಳಗಿನವರಾಗಿದ್ದಾರೆಂದು ಪೊಲೀಸರ ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಗದಗ ನಗರಸಭೆ ಉಪಾಧ್ಯಕ್ಷೆ ಸುನಂದಾ ಪ್ರಕಾಶ ಬಾಕಳೆ ಪುತ್ರ ಕಾರ್ತಿಕ್, ಕೊಪ್ಪಳ ಭಾಗ್ಯನಗರ ನಿವಾಸಿ, ಹೋಟೆಲ್ ಉದ್ಯಮಿ ಪರಶುರಾಮ ಹಾದಿಮನಿ, ಪತ್ನಿ ಲಕ್ಷ್ಮೀ ಹಾದಿಮನಿ, ಪುತ್ರಿ ಆಕಾಂಕ್ಷಾ ಹಾದಿಮನಿ ಅವರನ್ನು ದಿ.೧೮ರ ಮಧ್ಯರಾತ್ರಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಂದು ಕೊಲೆಗಾರರು ಪರಾರಿಯಾಗಿದ್ದರು.
ಮಧ್ಯರಾತ್ರಿ ೧ ಗಂಟೆ ಸುಮಾರಿಗೆ ಇಬ್ಬರು ವ್ಯಕ್ತಿಗಳು ಮನೆಯ ಹಿಂದಿನ ಪ್ರದೇಶದಿಂದ ಒಳಗೆ ಪ್ರವೇಶಿಸಿದ್ದಾರೆ. ಹದಿನೈದು ನಿಮಿಷಗಳ ನಂತರ ಇತರ ಮೂವರು ಹಿಂದಿನಿಂದ ಮನೆಯನ್ನು ಪ್ರವೇಶಿಸಿದ್ದಾರೆ. ಇದರಲ್ಲಿ ಓರ್ವ ತಲೆಗೆ ಕ್ಯಾಪ್ ಧರಿಸಿದ್ದು, ಆತನ ಬೆನ್ನಿಗೆ ಬ್ಯಾಗ್ ಹಾಕಿಕೊಂಡಿದ್ದಾನೆ. ಸುಮಾರು ಎರಡು ಗಂಟೆ ಐದು ನಿಮಿಷಕ್ಕೆ ಎಲ್ಲ ಐವರೂ ಮನೆಯ ಹಿಂದಿನ ಪ್ರದೇಶದಿಂದ ಹೊರಗೆ ಹೋಗಿರುವ ದೃಶ್ಯಗಳು ಕೊಲೆಗೀಡಾದ ಕಾರ್ತಿಕ ಮನೆಯಿಂದ ಪೊಲೀಸರು ವಶಪಡಿಸಿಕೊಂಡಿರುವ ಸಿಸಿ ಟಿವಿ ಹಾರ್ಡ್ಡಿಸ್ಕ್‌ನಲ್ಲಿ ದಾಖಲಾಗಿವೆಯೆಂದು ತಿಳಿದು ಬಂದಿದೆ.
ಕೊಲೆ ಪ್ರಕರಣವನ್ನು ಬೇಧಿಸಲು ಘಟನಾ ಸ್ಥಳಕ್ಕೆ ಕರೆಸಲಾಗಿದ್ದ ಶ್ವಾನದಳ ಗಡ್ಡಿ ಪೆಟ್ರೋಲ್ ಪಂಪ, ಮಂಜುನಾಥ ರೆಸಿಡೆನ್ಸಿ, ಹುಯಿಲಗೋಳ ಆಸ್ಪತ್ರೆಯ ಹತ್ತಿರದ ಮಸೀದಿಯ ಸುತ್ತಮುತ್ತಲಿನ ಪ್ರದೇಶದಲ್ಲಿಯೆ ತಿರುಗಾಡಿವೆ. ಶ್ವಾನ ದಳ ಸಂಚರಿಸಿದ ಸ್ಥಳದಲ್ಲಿ ಪೊಲೀಸರು ಇಂಚಿಂಚು ತನಿಖೆ ನಡೆಸುತ್ತಿದ್ದಾರೆ.
ಕೊಲೆ ಪ್ರಕರಣದ ತನಿಖೆಗಾಗಿ ಬೆಳಗಾವಿ ಐಜಿಪಿ ವಿಕಾಸಕುಮಾರ ಈಗಾಗಲೇ ಗದಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಾಬಾಸಾಹೇಬ ನೇಮಗೌಡ ನೇತೃತ್ವದಲ್ಲಿ ಐದು ಜನ ಹಿರಿಯ ಅಧಿಕಾರಿಗಳ ತಂಡ ರಚಿಸಿದ್ದಾರೆ. ಈ ತಂಡ ನಗರಸಭಾ ಉಪಾಧ್ಯಕ್ಷೆ ಸುನಂದಾ ಬಾಕಳೆ ಪತಿ, ನಗರಸಭೆಯ ಮಾಜಿ ಉಪಾಧ್ಯಕ್ಷ ರಿಯಲ್ ಎಸ್ಟೇಟ್ ಉದ್ದಿಮೆದಾರ ಪ್ರಕಾಶ ಬಾಕಳೆ, ಕೊಲೆಗೀಡಾಗಿರುವ ಕಾರ್ತಿಕ ಪ್ರಕಾಶ ಬಾಕಳೆ ಅವರ ವ್ಯವಹಾರಗಳನ್ನು ಪರಿಶೀಲಿಸುತ್ತಿದ್ದಾರೆಂದು ತಿಳಿದು ಬಂದಿದೆ.
ಚಿನ್ನದ ಬಳೆ ಪತ್ತೆ :
ನಾಲ್ವರು ಕಗ್ಗೊಲೆಯಾಗಿರುವ ನಗರಸಭಾ ಉಪಾಧ್ಯಕ್ಷೆ ಸುನಂದಾ ಪ್ರಕಾಶ ಬಾಕಳೆ ಮನೆಯ ಆವರಣದಲ್ಲಿ ಎರಡು ಚಿನ್ನದ ಬಳೆಗಳು ಪತ್ತೆಯಾಗಿವೆ. ಕೊಲೆ ನಡೆದ ದಿನವೇ ಮನೆಯ ಹಿಂಭಾಗದಲ್ಲಿ ಎರಡು ಜೊತೆ ಶೂಗಳು ದೊರೆತಿವೆ. ಪೊಲೀಸರು ಬಳೆ ಹಾಗೂ ಶೂಗಳನ್ನು ವಶಪಡಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಎಸ್ಟೇಟ್ ವ್ಯವಹಾರ?
ನಗರಸಭಾ ಉಪಾಧ್ಯಕ್ಷೆ ಸುನಂದಾ ಬಾಕಳೆ ಪುತ್ರ ಸೇರಿದಂತೆ ಇತರ ನಾಲ್ಕು ಜನರ ಕಗ್ಗೊಲೆಗೆ ರಿಯಲ್ ಎಸ್ಟೇಟ್‌ದಲ್ಲಿನ ವ್ಯವಹಾರ ಗಲಾಟೆಯೇ ಕಾರಣ ಎನ್ನಲಾಗುತ್ತಿದೆ. ಇನ್ನೊಂದೆಡೆ ಹಳೆಯ ವೈಷಮ್ಯವೂ ಕೊಲೆಗೆ ಕಾರಣವೆಂದೂ ಹೇಳಲಾಗುತ್ತಿದೆ. ಆದರೆ ಕಾರಣಗಳನ್ನು ಪೊಲೀಸ ಮೂಲಗಳು ಬಿಚ್ಚಿಟ್ಟಿಲ್ಲ. ಪ್ರಕರಣದ ತನಿಖೆ ನಡೆದಿದೆ. ಶೀಘ್ರದಲ್ಲಿಯೇ ಕೊಲೆಗಾರರನ್ನು ಬಂಧಿಸಲಾಗುವದು. ತನಿಖೆ ಸಂದರ್ಭದಲ್ಲಿ ಮಾಧ್ಯಮಗಳಿಗೆ ಹೆಚ್ಚಿನ ವಿವರ ನೀಡಲು ಸಾಧ್ಯವಿಲ್ಲ ಎಂದು ಗದಗ ಜಿಲ್ಲಾ ಪೊಲೀಸ್ ವರೀಷ್ಠಾಧಿಕಾರಿ ಬಾಬಾಸಾಹೇಬ ನೇಮಗೌಡ ತಿಳಿಸಿದ್ದಾರೆ.