ವಿಜಯಪುರ: ಕರ್ನಾಟಕ ಮಹಾರಾಷ್ಟ್ರ ಗಡಿ ವಿವಾದ ಈಗ ಸಂಪೂರ್ಣ ಮುಗಿದ ಅಧ್ಯಾಯ. ಆದಾಗ್ಯೂ ಮಹಾರಾಷ್ಟ್ರ ಸರಕಾರ ಮೇಲಿಂದ ಮೇಲೆ ಗಡಿ ಕ್ಯಾತೆ ತೆಗೆದರೆ ಅದುವೇ ಮಹಾರಾಷ್ಟ್ರಕ್ಕೆ ತಿರುಗು ಬಾಣವಾಗುವುದಂತೂ ನಿಶ್ಚಿತ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್(ಕೆಪಿಸಿಸಿ) ಪ್ರಚಾರ ಸಮಿತಿ ಅಧ್ಯಕ್ಷ ಡಾ. ಎಂ.ಬಿ. ಪಾಟೀಲ ಎಚ್ಚರಿಕೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಾಸ್ತವದಲ್ಲಿ ಮಹಾರಾಷ್ಟ್ರದ ಸೊಲ್ಲಾಪುರ, ದಕ್ಷಿಣ ಸೊಲ್ಲಾಪುರ, ಅಕ್ಕಲಕೋಟ ತಾಲೂಕುಗಳಲ್ಲಿ ಅತ್ಯಧಿಕ ಕನ್ನಡಿಗರಿದ್ದಾರೆ. ಮೇಲಾಗಿ ಜತ್ತ ತಾಲೂಕಿನ 47 ಹಳ್ಳಿಗಳಲ್ಲಿ ಅತ್ಯಧಿಕ ಸಂಖ್ಯೆಯಲ್ಲಿ ಕನ್ನಡಿಗರಿದ್ದಾರೆ. ಆದರೆ ಇವೆಲ್ಲ ಕನ್ನಡದ ಹಳ್ಳಿಗಳೆಂದು ಮಹಾರಾಷ್ಟ್ರ ಸರಕಾರ ಈ ಹಳ್ಳಿಗಳನ್ನು ಸಂಪೂರ್ಣ ಅಲಕ್ಷಿಸಿದೆ ಎಂದರು. ಇದರಿಂದ ಬೇಸತ್ತ ಅವರೆಲ್ಲ ಕರ್ನಾಟಕ ಸೇರ್ಪಡೆಗೆ ಅತ್ಯುತ್ಸಾಹ ತೋರುತ್ತಿದ್ದಾರೆ. ಠರಾವು ಕೂಡಾ ಪಾಸು ಮಾಡಿದ್ದಾರೆ. ಅಲ್ಲೆಲ್ಲ ಕನ್ನಡದ ಧ್ವಜ ಹಾರಿಸಿದ್ದಾರೆ ಎಂದರು.