ಬೆಳಗಾವಿ: ಗಡಿನಾಡ ಬೆಳಗಾವಿಗೆ ಹತ್ತಿರದ ಮಹಾರಾಷ್ಟ್ರದ ಅಂಬೋಲಿಯಲ್ಲಿ ಇಬ್ಬರು ಶಂಕಿತ ಭಯೋತ್ಪಾದಕರನ್ನು ಪುಣೆಯ ಎಟಿಎಸ್ ಬಂಧಿಸಿದೆ ಎಂದು ಗೊತ್ತಾಗಿದೆ.
ಮೊಹಮ್ಮದ್ ಇಮ್ರಾನ್ ಮೊಹಮ್ಮದ್ ಯೂಸುಫ್ ಖಾನ್ ಅಲಿಯಾಸ್ ಅಮೀರ್ ಅಬ್ದುಲ್ ಹಮೀದ್ ಖಾನ್, ಮೊಹಮ್ಮದ್ ಯೂನಸ್ ಮೊಹಮ್ಮದ್ ಯಾಕೂಬ್ ಸಾಕಿ ಎಂಬುವವರೇ ಬಂಧಿತರು ಎಂದು ಮೂಲಗಳು ತಿಳಿಸಿವೆ.
ಈ ಇಬ್ಬರೂ ಅಂಬೋಲಿ ಅರಣ್ಯದಲ್ಲಿ ಸ್ಫೋಟಕ ಪರೀಕ್ಷೆ ನಡೆಸಿದ್ದರು ಎಂದು ವರದಿಯಾಗಿದೆ. ಪುಣೆ ಎಟಿಎಸ್‌ನ ಐವರು ಸದಸ್ಯರ ತಂಡ ಗುರುವಾರ ಅಂಬೋಲಿ ಅರಣ್ಯದಲ್ಲಿ ಶೋಧ ನಡೆಸಿತು. ಈ ಆರೋಪಿಗಳಿಗೆ ಅರಣ್ಯ ಪ್ರದೇಶದಲ್ಲಿ ಉಳಿಯಲು ಸಹಾಯ ಮಾಡಿದ ಸ್ಥಳೀಯರ ಬಗ್ಗೆ ಎಟಿಎಸ್ ತನಿಖೆ ನಡೆಸುತ್ತಿದೆ. ಈ ಇಬ್ಬರನ್ನು ಪುಣೆ ಪೊಲೀಸರು ದ್ವಿಚಕ್ರ ವಾಹನ ಕಳ್ಳತನದ ಅಪರಾಧದಲ್ಲಿ ಬಂಧಿಸಿದ್ದರು. ಇವರಿಬ್ಬರು ಭಯೋತ್ಪಾದಕ ಕೃತ್ಯಗಳನ್ನು ಎಸಗಲು ಯತ್ನಿಸುತ್ತಿದ್ದರು ಎಂದು ಹೆಚ್ಚಿನ ತನಿಖೆಯಿಂದ ತಿಳಿದುಬಂದಿದೆ. ಹೀಗಾಗಿ ಕೂಲಂಕುಷವಾಗಿ ತನಿಖೆ ನಡೆಸಿದಾಗ ಈ ಇಬ್ಬರು ಬೆಳಗಾವಿ ಜಿಲ್ಲೆಯ ನಿಪಾಣಿ, ಸಂಕೇಶ್ವರದಲ್ಲಿ ಕೆಲಕಾಲ ತಂಗಿದ್ದರು ಎಂದು ಹೇಳಲಾಗಿದೆ. ಅಷ್ಟೇ ಅಲ್ಲ ಈ ಇಬ್ಬರಿಗೂ ಬೆಳಗಾವಿ ಜಿಲ್ಲೆಯ ನಂಟಿದೆಯೇ ಹೇಗೆ ಎನ್ನುವುದರ ಬಗ್ಗೆ ವಿಚಾರಣೆ ನಡೆದಿದೆ.