ಖಾದಿ ರಾಷ್ಟ್ರಧ್ವಜ ದಾಖಲೆ ಮಾರಾಟ, ೩.೫ ಕೋಟಿ ರೂ. ವಹಿವಾಟು..!

ರಾಷ್ಟ್ರಧ್ವಜ
Advertisement

ಮಾಲತೇಶ ಹೂಲಿಹಳ್ಳಿ
ಹುಬ್ಬಳ್ಳಿ: ಸ್ವಾತಂತ್ರ‍್ಯದ ಅಮೃತ ಮಹೋತ್ಸವದ ಹರ್ ಘರ್ ತಿರಂಗಾ ಅಭಿಯಾನ ಹಮ್ಮಿಕೊಂಡಿರುವ ಈ ಸಂದರ್ಭದಲ್ಲಿ ಇಡೀ ದೇಶಕ್ಕೆ ರಾಷ್ಟ್ರ ಧ್ವಜವನ್ನು ಪೂರೈಸುವ ಏಕೈಕ ಕೇಂದ್ರವಾದ ನಗರದ ಬೆಂಗೇರಿಯಲ್ಲಿರುವ ಖಾದಿ ಗ್ರಾಮೋದ್ಯೋಗ ಸಂಯುಕ್ತ ಸಂಘದ ಖಾದಿ ಕೇಂದ್ರ ಈ ವರ್ಷ ದಾಖಲೆಯ ವಹಿವಾಟು ಮಾಡಿದ್ದು, ೧ ಲಕ್ಷಕ್ಕೂ ಹೆಚ್ಚು ರಾಷ್ಟ್ರಧ್ವಜ ಮಾರಾಟ ಮಾಡಿದೆ! ಇದು ಬರೀ ಆಗಸ್ಟ್ ೧೧ರವರೆಗಿನ ಅಂಕಿ ಅಂಶ. ಇನ್ನು ಹೆಚ್ಚಿನ ಪ್ರಮಾಣ ಪ್ರಕ್ರಿಯೆ ಮುಂದುವರಿದಿದೆ.
ಪ್ರತಿ ವರ್ಷ ಎಲ್ಲ ಅಳತೆಯ ರಾಷ್ಟ್ರಧ್ವಜ ಸೇರಿ ಒಟ್ಟು ೭೦ ರಿಂದ ೭೫ ಸಾವಿರ ರಾಷ್ಟ್ರಧ್ವಜ ಮಾರಾಟವಾಗುತ್ತಿದ್ದವು. ಆದರೆ, ಈ ವರ್ಷ ಆಗಸ್ಟ್ ೧೧ರ ವಹಿವಾಟಿನ ಪ್ರಕಾರ ೧ ಲಕ್ಷಕ್ಕೂ ಹೆಚ್ಚು ರಾಷ್ಟ್ರಧ್ವಜ ಮಾರಾಟವಾಗಿವೆ. ಹೀಗಾಗಿ ಈ ವರ್ಷ ಪ್ರತಿ ವರ್ಷಕ್ಕಿಂತ ಹೆಚ್ಚಿನ ಆದಾಯ ಲಭಿಸಿದೆ. ಸುಮಾರು ೩.೫ ಕೋಟಿ ರೂ. ದಾಖಲೆಯ ವಹಿವಾಟು ಆಗಿದೆ.

ರಾಷ್ಟ್ರಧ್ವಜ
ಹುಬ್ಬಳ್ಳಿಯ ಬೆಂಗೇರಿ ಖಾದಿ ಗ್ರಾಮೋದ್ಯೋಗ ಕೇಂದ್ರದಲ್ಲಿ ಧ್ವಜ ತಯಾರಿಸುತ್ತಿರುವುದು.

ಪ್ರತಿ ವರ್ಷವು ಬೆಂಗೇರಿ ಖಾದಿ ಗ್ರಾಮೋದ್ಯೋಗ ಕೇಂದ್ರದಿಂದ ಏಪ್ರಿಲ್‌ನಿಂದ ಮಾರ್ಚ್ ತಿಂಗಳ ಅವಧಿಯಲ್ಲಿ ಒಟ್ಟು ೨.೫೦ ಕೋಟಿ ರೂ.ಗಳಿಂದ ೩ ಕೋಟಿ ರೂಪಾಯಿವರೆಗೆ ವಹಿವಾಟು ನಡೆಯುತ್ತಿತ್ತು. ಸುಮಾರು ೭೦ ಸಾವಿರಕ್ಕೂ ಹೆಚ್ಚು ಧ್ವಜಗಳ ಮಾರಾಟವಾಗುತ್ತಿತ್ತು. ಈ ವರ್ಷ ಸ್ವಾತಂತ್ರೋತ್ಸವಕ್ಕೆ ನಾಲ್ಕು ದಿನ ಬಾಕಿ ಇರುವಾಗಲೇ ೧ ಲಕ್ಷ ಧ್ವಜ ಮಾರಾಟವಾಗಿವೆ. ಇದರಿಂದ ಆದಾಯ ಕೂಡ ೩ ಕೋಟಿ ದಾಟಿದೆ.
ಕೇಂದ್ರ ಸರ್ಕಾರ ಧ್ವಜ ಸಂಹಿತೆ ತಿದ್ದುಪಡಿ ಜಾರಿಗೆ ತಂದಿದ್ದರಿಂದ ಖಾದಿ ಧ್ವಜ ತಯಾರಿಕಾ ಘಟಕ ಸಂಕಷ್ಟಕ್ಕೆ ತುತ್ತಾಗಲಿದೆ ಎನ್ನುವ ಆರೋಪದ ಮಧ್ಯೆ ಈ ವರ್ಷ ಬೆಂಗೇರಿ ಖಾದಿ ಕೇಂದ್ರ ದಾಖಲೆಯ ವಹಿವಾಟು ಮಾಡಿದೆ.
ಧ್ವಜಕ್ಕೆ ಹೆಚ್ಚು ಬೇಡಿಕೆ:
ಪಾಲಿಯಸ್ಟರ್‌ನಿಂದಾಗಿ ಖಾದಿಗೆ ಹೊಡೆತ ಬೀಳುತ್ತದೆ ಎಂದುಕೊಳ್ಳಲಾಗಿತ್ತು. ಆದರೆ ಅಮೃತ ಮಹೋತ್ಸವ ಅಂಗವಾಗಿ ಹರ್ ಘರ್ ತಿರಂಗಾ ಅಭಿಯಾನ ಮಾಡುತ್ತಿರುವುದರಿಂದ ದೇಶಪ್ರೇಮಿಗಳು, ಖಾದಿ ಪ್ರೇಮಿಗಳು ಹೆಚ್ಚು ಖಾದಿ ಧ್ವಜಗಳನ್ನೇ ಖರೀದಿಸುತ್ತಿರುವುದರಿಂದ ಸಹಜವಾಗಿ ಬೇಡಿಕೆ ಹೆಚ್ಚಾಗಿದೆ. ಕಳೆದ ಒಂದು ವಾರದಿಂದ ಬೇಡಿಕೆಗೆ ತಕ್ಕಂತೆ ರಾಷ್ಟ್ರಧ್ವಜ ಪೂರೈಕೆ ಮಾಡಲು ಆಗದಷ್ಟು ಒತ್ತಡ ನಿರ್ಮಾಣವಾಗಿದೆ ಎನ್ನುತ್ತವೆ ಖಾದಿ ಗ್ರಾಮೋದ್ಯೋಗ ಸಂಘದ ಮೂಲಗಳು.

ಖಾದಿ ಗ್ರಾಮೋದ್ಯೋಗ
ಸಿದ್ಧಗೊಂಡ ರಾಷ್ಟ್ರಧ್ವಜವನ್ನು ಇಸ್ತ್ರಿ ಮಾಡುತ್ತಿರುವ ಸಿಬ್ಬಂದಿ

ಇಲಾಖೆಗಳ ಮೇಲೆ ಖಾದಿ ಧ್ವಜ:
ಹರ್ ಘರ್ ತಿರಂಗಾ ಅಭಿಯಾನದ ಭಾಗವಾಗಿ ಸರ್ಕಾರದ ಎಲ್ಲ ಇಲಾಖೆ ಹಾಗೂ ಕಚೇರಿಗಳ ಮೇಲೆ ಖಾದಿ ಧ್ವಜಗಳನ್ನೇ ಹಾರಿಸಲಾಗುತ್ತಿದೆ. ಹೀಗಾಗಿ, ಸರಕಾರಿ ಇಲಾಖೆಗಳು ಖಾದಿ ಧ್ವಜಗಳನ್ನೇ ಖರೀದಿಸಿದ್ದಾರೆ. ಬೆಂಗೇರಿ ಖಾದಿ ಕೇಂದ್ರದಲ್ಲಿ ೮ ವಿವಿಧ ಅಳತೆಯ ಧ್ವಜಗಳ ತಯಾರಿಸಲಾಗುತ್ತದೆ. ಕಳೆದ ಎರಡು ವರ್ಷ ಕೊರೊನಾದಿಂದ ಧ್ವಜದ ವಹಿವಾಟು ಬಹಳ ಕಡಿಮೆಯಾಗಿತ್ತು. ಈ ಹಿನ್ನೆಲೆಯಲ್ಲಿ ಕಳೆದ ಬಾರಿ ಮಾರಾಟವಾಗದೇ ಬಾಕಿ ಉಳಿದಿದ್ದ ಅಂದಾಜು ೯೦ ಲಕ್ಷ ರೂ. ಮೌಲ್ಯದ ಧ್ವಜಗಳೂ ಸಹ ಈ ವರ್ಷ ಮಾರಾಟವಾಗಿವೆ.
ಇದರ ಜೊತೆಗೆ ಬಹುತೇಕ ಸಾರ್ವಜನಿಕರು, ಸಂಘ-ಸಂಸ್ಥೆ, ಎನ್‌ಜಿಓ ಹಾಗೂ ಫೌಂಡೇಶನ್‌ಗಳು ಕೂಡ ಖಾದಿ ಬಟ್ಟೆಯ ಧ್ವಜಗಳನ್ನು ಖರೀದಿಸುತ್ತಿದ್ದಾರೆ. ಒಬ್ಬ ಸಿಬ್ಬಂದಿ ದಿನಕ್ಕೆ ೨೦ ಧ್ವಜಗಳನ್ನು ತಯಾರಿಸುತ್ತಾರೆ. ಒಟ್ಟು ೧೪ ನೌಕರರು ಧ್ವಜ ತಯಾರಿಸುವ ಕಾರ್ಯದಲ್ಲಿ ತೊಡಗುತ್ತಿದ್ದು, ದಿನಕ್ಕೆ ೨೫೦ಕ್ಕೂ ಅಧಿಕ ಧ್ವಜ ತಯಾರಿಸುತ್ತಾರೆ. ಈಗ ಬೇಡಿಕೆ ಬಹಳ ಹೆಚ್ಚಾಗಿದ್ದರಿಂದ ಧ್ವಜ ತಯಾರಿಸುತ್ತಿದಂತೆ ಮಾರಾಟ ಮಾಡಲಾಗುತ್ತಿದೆ.