ಶಂಕಿತ ಭಯೋತ್ಪಾದಕ ರಿಷಾನ್ ತಾಜುದ್ದೀನ್ ಶೇಕ್ ತಂದೆಯ ಜೊತೆಗಿನ ಯು.ಟಿ.ಖಾದರ್ ಫೋಟೋಗಳು ವೈರಲ್ ಆಗಿವೆ. ಹೀಗಾಗಿ ಭಯೋತ್ಪಾದಕರನ್ನು ಪರೋಕ್ಷವಾಗಿ ಬೆಂಬಲಿಸುತ್ತಿರುವ ಯು.ಟಿ.ಖಾದರ್ ಬಗ್ಗೆ ಕೂಡ ನಮಗೆ ಸಂಶಯವಿದ್ದು ಕೂಡಲೇ ಉಳ್ಳಾಲದ ಶಾಸಕನ ವಿರುದ್ಧ NIA ತನಿಖೆ ನಡೆಸಬೇಕು ಎಂದು ಬಜರಂಗದಳದ ಭುಜಂಗ ಕುಲಾಲ್, ಪುನೀತ್ ಅತ್ತಾವರ ಆಗ್ರಹಿಸಿದ್ದಾರೆ.
ಈ ಕುರಿತು ಮಾತನಾಡಿರುವ ಅವರು, ವಿಶ್ವ ಹಿಂದೂ ಪರಿಷದ್, ಬಜರಂಗದಳ ದೇಶಪ್ರೇಮಿ, ಸಮಾಜಮುಖಿ ಸಂಘಟನೆಯಾಗಿದ್ದು, ನೂರಾರು ಸೇವಾಕಾರ್ಯಗಳನ್ನು ನಿರಂತರವಾಗಿ ಮಾಡಿಕೊಂಡು ಬರುತ್ತಿದೆ. ದೇಶದ, ಹಿಂದೂಗಳ ಸುರಕ್ಷತೆಗೆ ಅವಶ್ಯಕತೆ ಬಿದ್ದಾಗ ನೇರವಾಗಿ ಹೋರಾಟ ಮಾಡುವ ಸಂಘಟನೆಯಾಗಿದೆ. ಇಂತಹ ನಮ್ಮ ಸಂಘಟನೆಯ ನಾಯಕರನ್ನು ದೇಶದ್ರೋಹಿ, ಭಯೋತ್ಪಾದಕ ಎಂದು ಅವಮಾನಿಸಿರುವ ಶಾಸಕ ಯು.ಟಿ. ಖಾದರ್ ಹೇಳಿಕೆ ಖಂಡಿಸಿದ್ದಾರೆ. ಅಲ್ಲದೇ ಬ್ರಹ್ಮಾವರದ ಶಂಕಿತ ಭಯೋತ್ಪಾದಕ ರಿಷಾನ್ ತಾಜುದ್ದೀನ್ ಶೇಕ್ ತಂದೆ ತಾಜುದ್ದೀನ್ ಶೇಕ್ ಜೊತೆ ಯು.ಟಿ. ಖಾದರ್ ಅವರಿಗೆ ಸಂಪರ್ಕವಿದ್ದು ಅವರ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಇದರಿಂದ ಇಡೀ ಜಿಲ್ಲೆಯ ಜನತೆ ಆತಂಕಕ್ಕೆ ಒಳಗಾಗಿದ್ದು, ತಕ್ಷಣ ಕೇಂದ್ರ ಸರಕಾರ ಯು.ಟಿ. ಖಾದರ್‌ನನ್ನು NIA ತನಿಖೆಗೆ ಒಳಪಡಿಸಬೇಕೆಂದು ಆಗ್ರಹಿಸಿದ್ದಾರೆ.