ಹುಬ್ಬಳ್ಳಿ: ಕಾಂಗ್ರೆಸ್‌ನ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುತ್ತಿರುವುದು ಒಳ್ಳೆಯದು. ಆದರೆ ಕಾಂಗ್ರೆಸ್ ಪಕ್ಷ ಕುಟುಂಬದವರು ನಡೆಸುವ ಪಕ್ಷ. ಹೀಗಾಗಿ ಮಲ್ಲಿಕಾರ್ಜುನ ಖರ್ಗೆ ಅವರು ಗಾಂಧಿ ಕುಟುಂಬದ ರಿಮೋಟ್ ಕಂಟ್ರೋಲ್ ಅಧ್ಯಕ್ಷರಾಗಬಾರದು ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.
ಶನಿವಾರ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ಯಾರೇ ಅಧ್ಯಕ್ಷರಾದರೂ ಬಿಜೆಪಿಗೆ ಯಾವುದೇ ಸಮಸ್ಯೆಯಿಲ್ಲ. ಯಾರು ಒಳ್ಳೆಯದು ಮಾಡಿದ್ದಾರೆ ಎಂಬುದನ್ನು ಜನ ತಿಳಿದುಕೊಂಡಿದ್ದಾರೆ̤ ಮೊದಲ ಬಾರಿಗೆ ಕಾಂಗ್ರೆಸ್ ನಾಯಕರು ದೆಹಲಿ ಕಚೇರಿ ತೊರೆದು ಒಂದಿಷ್ಟು ಚಟುವಟಿಕೆ ಮಾಡುತ್ತಿರುವುದು ಒಳ್ಳೆಯ ವಿಚಾರ. ಭಾರತ ಜೋಡೋ ಅಭಿಯಾನದಲ್ಲಿ ಭಾಗವಹಿಸಿ ಒಳ್ಳೆಯ ಕಾರ್ಯ ಮಾಡುತ್ತಿದೆ. ಅವರಿಗೆ ಹೇಳೋದಿಷ್ಟೇ ಭಾರತ್ ಜೋಡೋ ಅಭಿಯಾನ, ಭಾರತ್ ಥೋಡೊ ಅಭಿಯಾನ ಆಗದಿರಲಿ ಎಂದರು.