ಹುಬ್ಬಳ್ಳಿ: ಮಲ್ಲಿಕಾರ್ಜುನ ಖರ್ಗೆಯವರು ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿರುವುದರಿಂದ, ಕರ್ನಾಟಕ ಕಾಂಗ್ರೆಸ್ನಲ್ಲಿ ಮೂರು ಶಕ್ತಿ ಕೇಂದ್ರಗಳು (ಪವರ್ ಸೆಂಟರ್) ನಿರ್ಮಾಣವಾದಂತಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಹೇಳಿದರು.
ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಈಗಾಗಲೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಹಾಗೂ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಬಣದ ಎರಡು ಶಕ್ತಿ ಕೇಂದ್ರಗಳಿವೆ. ಇವುಗಳಿಗೆ ಖರ್ಗೆ ಅಧ್ಯಕ್ಷತೆಯ ಮೂರನೇ ಕೇಂದ್ರವೂ ಸೇರ್ಪಡೆಯಾದಂತಾಗಿದೆ ಎಂದರು. ಇದರಿಂದ ಕಾಂಗ್ರೆಸ್ ಆಂತರಿಕ ಭಿನ್ನಮತ ಹೆಚ್ಚಿ, ಪಕ್ಷಕ್ಕೆ ಹಾನಿಯಾಗುತ್ತದೆಯೇ ವಿನಾ ಪ್ರಯೋಜನ ಎಳ್ಳಷ್ಟೂ ಇಲ್ಲ ಎಂದರು.ರಾಜಸ್ಥಾನದ ಕಾಂಗ್ರೆಸ್ ವಿದ್ಯಮಾನಗಳನ್ನು ಸರಿಪಡಿಸುವುದು ಮೊದಲ ಆದ್ಯತೆ ಎಂಬುದಾಗಿ ಖರ್ಗೆಯವರು ಹೇಳಿದ್ದಾರೆ. ಇದರರ್ಥ ಕಾಂಗ್ರೆಸ್ನಲ್ಲಿ ಎಲ್ಲವೂ ಸರಿ ಇಲ್ಲ ಎಂದಾಯಿತಲ್ಲ. ರಾಜ್ಯದ ಸ್ಥಿತಿಯಂತೂ ಎಲ್ಲರಿಗೂ ವಿಧಿತವೇ ಆಗಿದೆ. ಕರ್ನಾಟಕದಲ್ಲಿ ಅಧಿಕಾರಕ್ಕೆ ಬರಬೇಕು ಎಂಬ ಈ ಪಕ್ಷದ ಕನಸು ಕನಸಾಗಿಯೇ ಉಳಿಯಲಿದೆ' ಎಂದು ಭವಿಷ್ಯ ನುಡಿದರು. ರಾಹುಲ್ ಗಾಂಧಿ ಅವರ ಭಾರತ್ ಜೋಡೊ ಕುರಿತು ವ್ಯಂಗ್ಯವಾಡಿದ ಶೆಟ್ಟರ,
ಸುದೀರ್ಘ ವರ್ಷಗಳ ಕಾಲ ಭಾರತವನ್ನು ಆಳಿದ ಪಕ್ಷ ಅಧಿಕಾರ ನಡೆಸುವಾಗ ಭಾರತ್ ಜೋಡೊ ಆಗಿರಲಿಲ್ಲವೇ’ ಎಂದು ಲೇವಡಿಭರಿತ ಮಾತುಗಳಿಂದ ಪ್ರಶ್ನಿಸಿದರು.
ಎಲ್ಲಿಯವರೆಗೆ ರಾಹುಲ್ ಗಾಂಧಿ ನಾಯಕರಾಗಿರುತ್ತಾರೋ ಅಲ್ಲಿಯವರೆಗೂ ಕಾಂಗ್ರೆಸ್ ಪಕ್ಷ ಉದ್ಧಾರವಾಗುವುದಿಲ್ಲ. ರಾಹುಲ್ ನಾಯಕತ್ವದಿಂದ ಆ ಪಕ್ಷಕ್ಕೆ ಹಾನಿಯೇ ಹೊರತು ಪ್ರಯೋಜನವಿಲ್ಲ ಎಂದು ನುಡಿದರು.