ಖಂಡ್ರೆ ವಿರುದ್ಧ ಕಾಗೇರಿ ಕೆಂಡಾಮಂಡಲ

Advertisement

ಬೆಂಗಳೂರು: ಸಿದ್ದರಾಮಯ್ಯ ವಿರುದ್ಧ ಅಶ್ವಥ್ ನಾರಾಯಣ ಹೇಳಿಕೆ ಖಂಡಿಸಿ ಕಾಂಗ್ರೆಸ್ ಸದಸ್ಯರು ಸದನದಲ್ಲಿಂದು ಗದ್ದಲ ಶುರು ಮಾಡಿದ್ದರು. `ಟಿಪ್ಪುವಿನಂತೆ ಸಿದ್ದರಾಮಯ್ಯ ಅವರನ್ನು ಹೊಡೆದು ಹಾಕಬೇಕು’ ಎನ್ನುವ ಅಶ್ವಥ್ ನಾರಾಯಣ ಹೇಳಿಕೆಗೆ ಕಾಂಗ್ರೆಸ್ ಸದಸ್ಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಸ್ವಯಂ ಪ್ರೇರಿತವಾಗಿ ಕೇಸ್ ದಾಖಲಿಸಿ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು. ‌ಈ ವೇಳೆ ಖಂಡ್ರೆಗೆ ಕುಳಿತುಕೊಳ್ಳಲು‌ಸೂಚಿಸಿದ ಸ್ಪೀಕರ್, ಇದು ನಿಮಗೆ ಶೋಭೆ ತರಲ್ಲ. ಈ‌ರೀತಿ ಮಾತನಾಡುವುದು ಗೌರವ ತರಲ್ಲ. ನಿಮ್ಮನ್ನು ‌ಯಾರು ಆಯ್ಕೆ ಮಾಡೋರು, ಆಯ್ಕೆ ಮಾಡಿದರೆ ವ್ಯವಸ್ಥೆಗೆ ಅಗೌರವ ಎಂದು ತೀಕ್ಷ್ಣವಾಗಿ ಆಕ್ಷೇಪ ವ್ಯಕ್ತಪಡಿಸಿದರು. ಖಂಡ್ರೆಗೆ ಖಡಕ್ ಎಚ್ಚರಿಕೆ ಕೊಟ್ಟ ಸ್ಪೀಕರ್ , ಹಿರಿಯರು ನಡೆದುಕೊಳ್ಳುವ ರೀತಿ ಏನು? ಇನ್ನೊಂದು ಹೆಜ್ಜೆ ಮುಂದಾದರೆ ಹೊರಗಡೆ ಹಾಕಬೇಕಾಗುತ್ತೆ ಎಂದು ಎಚ್ಚರಿಕೆ ನೀಡಿ, ನಿಮಗೆ ಮಾತ್ರ ಬಿಪಿ‌ಎರೋದಾ ನನಗೆ ಏರಲ್ವಾ? ಎಂದು ಪ್ರಶ್ನಿಸಿದರು. ನಾನು ಅತಿಯಾಗಿ ಮಾಡಿಲ್ಲ, ನೀವು ನನಗೆ ಅವಕಾಶ ಕೊಟ್ಟಿಲ್ಲ ಎಂದು‌ಈಶ್ವರ್ ಖಂಡ್ರೆ ತಮ್ಮನ್ನು ಸಮರ್ಥಿಸಿಕೊಂಡರು. ಸ್ಪೀಕರ್ ಮಾತಿನಿಂದ ಆಕ್ರೋಶಗೊಂಡ ಕಾಂಗ್ರೆಸ್ ಸದಸ್ಯರು ಸದನದ ಬಾವಿಗೆ ಇಳಿದು ಧರಣಿ ನಡೆಸಿದರು. ಇದರಿಂದ ಸದನವನ್ನು ಸ್ಪೀಕರ್ 15 ನಿಮಿಷಗಳ ಕಾಲ ಮುಂದೂಡಿದರು.