ಕ್ಷಮಿಸಿಬಿಡು ಅಮ್ಮಾ ನಿನ್ನ ಮಗನಾಗಲು ಯೋಗ್ಯನಲ್ಲ….

Advertisement

ಪ್ರಶಾಂತ ಕುಲಕರ್ಣಿ
ಖಾನಾಪುರ:
ತಮ್ಮ ಮಕ್ಕಳು ಕೊನೆಗಾಲದಲ್ಲಿ ತಮ್ಮ ಯೋಗಕ್ಷೇಮ ಗಮನಿಸುತ್ತಾರೆ ಎಂಬ ಸದುದ್ದೇಶದಿಂದ ಮಕ್ಕಳಿಗೆ ಶಿಕ್ಷಣ ನೀಡಿ ಅವರನ್ನು ಸ್ಥಿತಿವಂತರನ್ನಾಗಿಸುವುದು ಪ್ರತಿಯೊಬ್ಬ ಹೆತ್ತವರು ಬಯಸುವ ಆಸೆ. ಅದೇ ಹೆತ್ತವರಿಂದ ಉಸಿರು-ಹೆಸರು, ಬದುಕು ಮತ್ತು ಸ್ಥಾನಮಾನ ಪಡೆಯುವ ಮಕ್ಕಳು ತಮ್ಮ ರೆಕ್ಕೆಗಳು ಬಲಿತ ಮೇಲೆ ಮಹಾನಗರಗಳಿಗೆ ಅಥವಾ ವಿದೇಶಕ್ಕೆ ಹಾರುವ ಮೂಲಕ ತಮ್ಮನ್ನು ಹೆತ್ತು-ಹೊತ್ತು ಸಾಕಿ ಸಲುಹಿದವರನ್ನು ಅನಾಥರನ್ನಾಗಿಸಿ ಅನಾಥಾಶ್ರಮಗಳಿಗೆ ದೂಡುವುದು ಇಂದಿನ ಯುವಪಡೆಯ ಪಾಲಿಗೆ ಸ್ವಾಭಾವಿಕ ಎನ್ನಿಸಿಬಿಟ್ಟಿದೆ.
ಆದರೆ ಇಲ್ಲೊಬ್ಬ ಯುವಕ ತನ್ನ ಕಿತ್ತು ತಿನ್ನುವ ಬಡತನಕ್ಕೆ, ನಿರುದ್ಯೋಗಕ್ಕೆ ಮತ್ತು ಹಸಿವಿನಿಂದ ಕಂಗೆಟ್ಟ ತಾಯಿಯ ಸ್ಥಿತಿಗೆ ಮಮ್ಮಲಮರುಗಿ, ತನಗೆ ಬಂದ ಪರಿಸ್ಥಿತಿ ತನ್ನ ಶತ್ರುವಿಗೂ ಬರಬಾರದು ಎಂದು ನೊಂದು-ಬೆಂದು ಆತ್ಮಹತ್ಯೆ ಮಾಡಿಕೊಂಡ ಹೃದಯವಿದ್ರಾವಕ ಘಟನೆ ತಾಲೂಕಿನ ನಂದಗಡ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬುಧವಾರ ವರದಿಯಾಗಿದೆ.
ಏನಿದು ಪ್ರಕರಣ…!: ಬಸವರಾಜ ವೆಂಕಟ ಎಂಬ ೩೦ ವಯಸ್ಸಿನ ಯುವಕ ಮೂಲತಃ ಹಾವೇರಿ ಜಿಲ್ಲೆ, ಹಾವೇರಿ ತಾಲೂಕಿನ ಯಲಗಚ್ಚ ಗ್ರಾಮದವ. ಈತನ ತಂದೆ ಬಹಳ ಹಿಂದೆಯೇ ತೀರಿಹೋಗಿದ್ದು, ತಾಯಿ ಶಾಂತವ್ವಳ(೫೫) ಜೊತೆ ವಾಸಿಸುತ್ತಿದ್ದ. ಇವರಿಗೆ ಆಸ್ತಿಪಾಸ್ತಿ ಇಲ್ಲದ್ದರಿಂದ ಉದರಪೋಷಣೆಗಾಗಿ ಬಹಳ ವರ್ಷಗಳ ಹಿಂದೆಯೇ ಸ್ವಂತ ಊರನ್ನು ಬಿಟ್ಟು ಅಲೆಮಾರಿಗಳಾಗಿ ಊರಿಂದ ಊರಿಗೆ ಅಲೆಯುತ್ತ ಅವಕಾಶ ಸಿಕ್ಕ ಕಡೆ ಕೆಲಸ ಮಾಡುವುದು, ಕೆಲಸ ಸಿಗದಿದ್ದಾಗ ಭಿಕ್ಷೆ ಬೇಡಿ ಜೀವನ ನಡೆಸುವುದು ಇವರ ದೈನಂದಿನ ದಿನಕ್ರಮವಾಗಿತ್ತು.
ಕಳೆದ ವಾರ ಅಮ್ಮ-ಮಗ ಇಬ್ಬರೂ ಸೇರಿ ಹುಬ್ಬಳ್ಳಿ ರೈಲು ನಿಲ್ದಾಣದಿಂದ ವಾಸ್ಕೋ ರೈಲನ್ನೇರಿ ಗೋವಾ ರಾಜ್ಯಕ್ಕೆ ತೆರಳಿದ್ದರು. ಮರ‍್ನಾಲ್ಕು ದಿನಗಳ ಕಾಲ ಗೋವಾದ ಹಲವೆಡೆ ಅಲೆದರೂ ಅವರಿಬ್ಬರಿಗೂ ಅವಶ್ಯವಿದ್ದ ಉದ್ಯೋಗವಾಗಲಿ ಅಥವಾ ಹೊಟ್ಟೆ ತುಂಬಲು ಸಾಕಷ್ಟು ಭಿಕ್ಷೆಯಾಗಲಿ ಸಿಕ್ಕಿರಲಿಲ್ಲ. ಗೋವಾ ರಾಜ್ಯದ ಸಹವಾಸ ಸಾಕು ಎಂದುಕೊಂಡ ಅಮ್ಮ-ಮಗ ಜ.೩೦ರಂದು ಮರಳಿ ಹುಬ್ಬಳ್ಳಿಯತ್ತ ಸಾಗುವ ರೈಲನ್ನೇರಿದ್ದರು.
ಇವರು ಪ್ರಯಾಣಿಸುತ್ತಿದ್ದ ರೈಲು ಲೋಂಡಾ ನಿಲ್ದಾಣ ದಾಟಿ ಮುಂದೆ ಸಾಗುತ್ತಿದ್ದಾಗ ಇವರಿದ್ದ ಬೋಗಿ ಪ್ರವೇಶಿಸಿದ ರೈಲ್ವೆ ಪೊಲೀಸರು ಮತ್ತು ಸಿಬ್ಬಂದಿ ಇವರ ಬಳಿ ಟಿಕೆಟ್ ಇಲ್ಲದಿರುವುದನ್ನು ಗಮನಿಸಿ ಗದರಿಸಿದ್ದರು. ಹೀಗಾಗಿ ಇವರಿಬ್ಬರೂ ಅಳ್ನಾವರ ನಿಲ್ದಾಣದಲ್ಲಿ ರೈಲು ನಿಂತಾಗ ರೈಲಿನಿಂದ ಇಳಿದಿದ್ದರು. ಮರ‍್ನಾಲ್ಕು ದಿನಗಳ ಕಾಲ ಹೊಟ್ಟೆಗೆ ಸರಿಯಾದ ಆಹಾರವಿಲ್ಲದ್ದರಿಂದ ಬಸವರಾಜನ ತಾಯಿ ನಿತ್ರಾಣಗೊಂಡಿದ್ದರು. ಅವರನ್ನು ನಿಲ್ದಾಣದಲ್ಲಿ ಕೂಡ್ರಿಸಿದ ಬಸವರಾಜ ತಾಯಿಗೆ ಆಹಾರ ತರುವುದಾಗಿ ಹೇಳಿ ನಿಲ್ದಾಣದಿಂದ ಹೊರಟಿದ್ದ. ಬಹಳಷ್ಟು ಸಮಯ ಅಳ್ನಾವರ ಪಟ್ಟಣದಲ್ಲಿ ಕೆಲಸಕ್ಕಾಗಿ ಮತ್ತು ಆಹಾರಕ್ಕಾಗಿ ಅಲೆದಿದ್ದ ಬಸವರಾಜನಿಗೆ ಕೇವಲ ನಿರಾಸೆ ಮಾತ್ರ ಕಾದಿತ್ತು. ಭಾರವಾದ ಮನಸ್ಸಿನಿಂದ ಅಳ್ನಾವರ ಪಟ್ಟಣದಿಂದ ಪೂರ್ವ ದಿಕ್ಕಿನ ಧಾರವಾಡ ರಸ್ತೆಯಲ್ಲಿ ಹೊರಟಿದ್ದ ಆತನ ಮನಸ್ಸಿನಲ್ಲಿ ಕಿತ್ತು ತಿನ್ನುವ ಬಡತನ, ನಿರುದ್ಯೋಗ, ಹಸಿವಿನಿಂದ ಕಂಗೆಟ್ಟ ತಾಯಿಯ ಸ್ಥಿತಿಗಳು ಜಿಗುಪ್ಸೆಯನ್ನು ತರಿಸಿದ್ದವು. ಅಳ್ವಾವರದಿಂದ ೩ ಕಿಮೀ ದೂರ ಕ್ರಮಿಸಿದ ಆತ ಬೆಳಗಾವಿ-ಧಾರವಾಡ ಜಿಲ್ಲೆಗಳ ಗಡಿಯ ಲಿಂಗನಮಠ ಗ್ರಾಮದ ಹದ್ದಿಯಲ್ಲಿರುವ ತೋಟವೊಂದರಲ್ಲಿ ಹೊಕ್ಕು ಮಾವಿನ ಮರಕ್ಕೆ ಕೊರಳೊಡ್ಡಿ ತಾಯಿಯ ಹಸಿವು ನೀಗಿಸದ ತನ್ನ ಜೀವನಕ್ಕೆ ಪೂರ್ಣ ವಿರಾಮ ನೀಡಿದ್ದಾನೆ.
ಪಟ್ಟಣದ ಆಸ್ಪತ್ರೆಯ ಬಳಿ ಮಗನ ಶವದ ಮುಂದೆ ದಿಕ್ಕು ತೋಚದೇ ಕುಳಿತಿದ್ದ ತಾಯಿ ಶಾಂತವ್ವಳ ಪರಿಸ್ಥಿತಿ ಗಮನಿಸಿದ ಖಾನಾಪುರದ ಕದಂಬ ಫೌಂಡೇಶನ್‌ನ ಜಾರ್ಡನ್ ಗೋನ್ಸಾಲ್ವಿಸ್, ಕುಮಾರ ತಂಗಂ, ಮೈಕಲ್ ಅಂದ್ರಾದೆ ಹಾಗೂ ಇತರೆ ಪದಾಧಿಕಾರಿಗಳು ಖಾನಾಪುರ ಪಟ್ಟಣ ಪಂಚಾಯ್ತಿಯ ಶವ ಸಾಗಿಸುವ ವಾಹನದಲ್ಲಿ ಬಸವರಾಜನ ಮೃತದೇಹವನ್ನು ನಂದಗಡಕ್ಕೆ ಸಾಗಿಸಿ ಅಲ್ಲಿಯ ಸ್ಮಶಾನದಲ್ಲಿ ಶಾಸ್ತ್ರೋಕ್ತ ಪದ್ಧತಿಯಂತೆ ಅಂತ್ಯಕ್ರಿಯೆ ನೆರವೇರಿಸಿ ಮಾನವೀಯತೆ ಮೆರೆದರು.
ಹಾವೇರಿಯ ಬಸವರಾಜ ಮತ್ತು ಆತನ ತಾಯಿ ಶಾಂತಮ್ಮರಿಗೆ ಸರ್ಕಾರದಿಂದ ಯಾವುದೇ ಸೌಲಭ್ಯಗಳು ಸಿಕ್ಕಿಲ್ಲ. ಇದರಿಂದಾಗಿ ಅವರು ತುತ್ತು ಅನ್ನಕ್ಕೂ ಪರಿತಪಿಸುವ ಪರಿಸ್ಥಿತಿ ಬಂದಿದೆ.
ಹೊಟ್ಟೆಗೆ ಅನ್ನ ಸಿಗದೇ, ದುಡಿಯಲು ಕೆಲಸ ಸಿಗದೇ ಜೀವನದಲ್ಲಿ ಜಿಗುಪ್ಸೆಗೊಂಡ ಮಧ್ಯವಯಸ್ಕ ಬಸವರಾಜ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮಗನನ್ನು ಕಳೆದುಕೊಂಡ ತಾಯಿ ಶಾಂತಮ್ಮ ಅನಾಥಳಾಗಿದ್ದಾಳೆ.