ಮುಂಬೈ: ಮುಂಬೈನಲ್ಲಿ ನಡೆದ 71ನೇ ವಿಶ್ವ ಸುಂದರಿ ಸ್ಪರ್ಧೆಯಲ್ಲಿ 24 ವರ್ಷದ ಕ್ರಿಸ್ಟಿನಾ ಪಿಸ್ಕೋವಾ ಅಂತಿಮ ಹಂತದಲ್ಲಿ ತಮ್ಮ ಈ ಉತ್ತರದೊಂದಿಗೆ ಪ್ರತಿಷ್ಟಿತ ಪ್ರಶಸ್ತಿ ಮುಡಿಗೇರಿಸಿಕೊಂಡರು. 28 ವರ್ಷಗಳ ಸುದೀರ್ಘ ಸಮಯದ ಬಳಿಕ ಭಾರತದಲ್ಲಿ ಅಂತಾರಾಷ್ಟ್ರೀಯ ಮಟ್ಟದ ಸೌಂದರ್ಯ ಸ್ಪರ್ಧೆ ಆಯೋಜಿಸಲಾಗಿತ್ತು.
2024ರ ‘ವಿಶ್ವ ಸುಂದರಿ’ಯಾಗಿ ಜೆಕ್ ಗಣರಾಜ್ಯದ ಕ್ರಿಸ್ಟಿನಾ ಪಿಸ್ಕೋವಾ ಹೊರಹೊಮ್ಮಿದ್ದಾರೆ. ಮುಂಬೈನಲ್ಲಿ ಶನಿವಾರ ರಾತ್ರಿ ನಡೆದ ವರ್ಣರಂಜಿತ ಕಾರ್ಯಕ್ರಮದಲ್ಲಿ ಕ್ರಿಸ್ಟಿನಾ ಅವರನ್ನು 2024ರ ಮಿಸ್ ವರ್ಲ್ಡ್ ಎಂದು ಘೋಷಿಸಲಾಯಿತು. ಹಿಂದುಳಿದ ಮಕ್ಕಳಿಗೆ ಕಲಿಯುವ ಅವಕಾಶ ಒದಗಿಸುವುದು 2024ರ ವಿಶ್ವಸುಂದರಿ ಕ್ರಿಸ್ಟಿನಾ ಪಿಸ್ಕೋವಾ ಅವರ ಗುರಿಯಾಗಿದೆ
ಪೋಲೆಂಡ್ನ ವಿಶ್ವ ಸುಂದರಿ ಕರೋಲಿನಾ ಬಿಲಾಸ್ಕಾ ಅವರು ಕ್ರಿಸ್ಟಿನಾ ಪಿಸ್ಕೋವಾ ಅವರಿಗೆ ಈ ಸಾಲಿನ ವಿಶ್ವ ಸುಂದರಿ ಕಿರೀಟ ತೊಡಿಸಿದರು. ಲೆಬನಾನ್ ಸುಂದರಿ ಯಾಸ್ಮಿನಾ ಜೈಟೌನ್ ಮೊದಲ ರನ್ನರ್ ಅಪ್ ಆದರು. ಭಾರತ ಪ್ರತಿನಿಧಿಸಿದ ಕನ್ನಡತಿ ಸಿನಿ ಶೆಟ್ಟಿ ಟಾಪ್ 8ರಲ್ಲಿ ಸ್ಥಾನ ಪಡೆದರು.
ಟಾಪ್ ನಾಲ್ಕು ಸ್ಪರ್ಧಿಗಳಲ್ಲಿ ಓರ್ವರಾಗಿದ್ದ ಕ್ರಿಸ್ಟಿನಾ ಪಿಸ್ಕೋವಾ, ತೀರ್ಪುಗಾರರನ್ನು ಮತ್ತು ಪ್ರೇಕ್ಷಕರನ್ನು ಉದ್ದೇಶಿಸಿ ಮಾತನಾಡಿ, “ಪ್ರತೀ ಮಗುವಿಗೂ ಶಿಕ್ಷಣ ಪಡೆಯುವ ಮೂಲಭೂತ ಹಕ್ಕಿದೆ ಎಂದು ನಾನು ಭಾವಿಸುತ್ತೇನೆ. ನಾನು ಆ ಮಕ್ಕಳಿಗಾಗಿ ಮಾತನಾಡಲು ಇಲ್ಲಿದ್ದೇನೆ. ನಾನು ಇದನ್ನು ಬಹಳ ಸಮಯದಿಂದ ಮಾಡಿಕೊಂಡು ಬಂದಿದ್ದೇನೆ. ಸ್ಪರ್ಧೆಗಳಲ್ಲಿ ನನ್ನನ್ನು ತೊಡಗಿಸಿಕೊಂಡಿದ್ದಕ್ಕಿಂತ ಹೆಚ್ಚು ಈ ವಿಚಾರವಾಗಿ ಕೆಲಸ ಮಾಡಿದ್ದೇನೆ. ನಾನು ವಿಶ್ವ ಸುಂದರಿ ಸ್ಪರ್ಧೆಯಲ್ಲಿ ಗೆದ್ದರೂ ಅಥವಾ ಸೋತರೂ, ನಾನಿದನ್ನು ಮನಸ್ಪೂರ್ವಕವಾಗಿ ಮಾಡುತ್ತೇನೆ” ಎಂದರು. 24ರ ಹರೆಯದ ಈ ಚೆಲುವೆ ತಮ್ಮ ಉತ್ತರಕ್ಕಾಗಿ ವಿಶ್ವಸುಂದರಿ ಕಿರೀಟವನ್ನು ಮುಡಿಗೇರಿಸಿಕೊಂಡರು.