ಕುಷ್ಟಗಿ: ಬಿಜೆಪಿಯವರು ಸಂವಿಧಾನವನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದ್ದಾರೆ. ಇದರ ಜೊತೆಗೆ ಕೋಮುಗಲಭೆಗಳನ್ನು ಸೃಷ್ಟಿಸಿ ತಾವೇ ಅಧಿಕಾರದಲ್ಲಿ ಇರಬೇಕೆಂಬ ಅಭಿಲಾಷೆ ಹೊಂದಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಶರಣಗೌಡ ಪಾಟೀಲ ಬಯ್ಯಾಪುರ ಹೇಳಿದರು.
ಇಲ್ಲಿನ ಶಾಸಕ ಅಮರೇಗೌಡ ಪಾಟೀಲ ಬಯ್ಯಾಪುರ ಅವರ ನಿವಾಸದಲ್ಲಿ ಮಾಜಿ ಸಂಸದ ಕೆ. ವಿರೂಪಾಕ್ಷಪ್ಪನವರ ಹೇಳಿಕೆಗೆ ತಿರುಗೇಟು ನೀಡಿದ ಅವರು, ಬಿಜೆಪಿಯವರು ಅಧಿಕಾರದಲ್ಲಿ ಇರುವಂತಹ ಸಂದರ್ಭದಲ್ಲಿ ಮುಸ್ಲಿಮರ ಮೇಲೆ ಹೆಚ್ಚು ಪ್ರಕರಣ ದಾಖಲಿಸಿದ್ದಾರೆ. ನಮ್ಮ ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬಂದ ಮೇಲೆ ಪೂರ್ವಾಪರ ವಿಚಾರ ಮಾಡಿ ಭಯೋತ್ಪಾದನೆ ಮತ್ತು ಇನ್ನಿತರ ಕೃತ್ಯಗಳಲ್ಲಿ ಭಾಗಿಯಾಗದಂತಹ ಪ್ರಾಮಾಣಿಕರನ್ನು ಗುರುತಿಸಿ ಪ್ರಕರಣಗಳನ್ನು ಹಿಂಪಡೆಯಲಾಗಿದೆ ಎಂದರು.
ನಮ್ಮ ಪಕ್ಷದಲ್ಲಿ ಹಿಂದೂ-ಮುಸ್ಲಿಂ ಎಂಬ ಜಾತಿ ಭೇದವಿಲ್ಲ. ಬಿಜೆಪಿಯವರು ಅಧಿಕಾರಕ್ಕೆ ಬರಬೇಕೆಂಬ ಉದ್ದೇಶದೊಂದಿಗೆ ಕಾಂಗ್ರೆಸ್ ಸರ್ಕಾರ ಇದ್ದಾಗ ಕೊಲೆಗಳನ್ನು ತಾವೇ ಮಾಡಿಸಿ ಮುಸ್ಲಿಮರ ಮೇಲೆ ಹಾಕಿರುವ ಇತಿಹಾಸವಿದೆ ಎಂದು ಆರೋಪಿಸಿದರು.
ಮೋದಿ ಪ್ರಧಾನಿಯಾದ ಮೇಲೆ ಎಲ್ಲಾ ಸರ್ಕಾರಿ ಸಂಸ್ಥೆಗಳನ್ನು ಖಾಸಗಿ ಅವರಿಗೆ ಮಾರಾಟವನ್ನು ಮಾಡಿದ್ದಾರೆ. ರೈಲ್ವೆ ಇಲಾಖೆ ಒಂದನ್ನು ಬಿಟ್ಟಿದ್ದಾರೆ. ಅದನ್ನು ಸಹ ಮುಂದೊಂದು ದಿನ ಮಾರಾಟ ಮಾಡುವ ಹಂತದಲ್ಲಿದ್ದಾರೆ. ಯಾವುದೇ ಜನಪರ ಯೋಜನೆಗಳನ್ನು ಜಾರಿಗೆ ತಂದಿಲ್ಲ ಎಂದರು.