ವಿಜಯಪರ: ಕೋಟ್ಯಾಧಿಪತಿಗಳಿಗೆ ಮೋದಿ ನೀಡಿದ ಸಂಪತ್ತನ್ನು ನಾವು ದೇಶದ ಬಡ ಜನರಿಗೆ ಹಂಚಲಿದ್ದೇವೆ ಎಂದು ಎಐಸಿಸಿ ರಾಷ್ಟ್ರೀಯ ನಾಯಕ ರಾಹುಲ್ ಗಾಂಧಿ ಭರವಸೆ ನೀಡಿದರು.
ವಿಜಯಪುರದ ಸೊಲ್ಲಾಪೂರ ರಸ್ತೆಯಲ್ಲಿರುವ ಎಎಸ್ಪಿ ವಾಣಿಜ್ಯ ಮಹಾವಿದ್ಯಾಲಯದ ಮೈದಾನದಲ್ಲಿ ನಡೆದ ಕಾಂಗ್ರೆಸ್ ಪಕ್ಷದ ಬೃಹತ್ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಅವರು, ಬಡತನ, ನಿರುದ್ಯೋಗ ಮತ್ತು ಬೆಲೆ ಏರಿಕೆ ಸೇರಿದಂತೆ ದೇಶದಲ್ಲಿ ಮೂರ್ನಾಲ್ಕು ಪ್ರಮುಖ ಸಮಸ್ಯೆಗಳಿವೆ. ಕಾಂಗ್ರೆಸ್ನಿಂದ ಮಾತ್ರ ನಿರುದ್ಯೋಗವನ್ನು ತೊಡೆದುಹಾಕಲು, ಬೆಲೆ ಏರಿಕೆಯನ್ನು ನಿಯಂತ್ರಿಸಲು ಮತ್ತು ಜನರಿಗೆ ಅವರ ಪಾಲು ನೀಡಲು ಸಾಧ್ಯ. ಮೋದಿ ಬಡವರ ಹಣವನ್ನು ಮಾತ್ರ ಕಿತ್ತುಕೊಂಡಿದ್ದಾರೆ. ಅವರು ಕೆಲವರನ್ನು ಕೋಟ್ಯಾಧಿಪತಿಗಳನ್ನಾಗಿ ಮಾಡಿದ್ದಾರೆ. ದೇಶದ 70 ಕೋಟಿ ಜನರ ಸಂಪತ್ತಿಗೆ ಸಮನಾದ ಸಂಪತ್ತನ್ನು ಕೇವಲ 22 ಮಂದಿ ಹೊಂದಿದ್ದಾರೆ. ಕೇವಲ ಒಂದು ಶೇಕಡಾ ಜನರು ರಾಷ್ಟ್ರದ ಶೇಕಡಾ 40ರಷ್ಟು ಸಂಪತ್ತನ್ನು ನಿಯಂತ್ರಿಸುತ್ತಿದ್ದಾರೆ ಎಂದರು.