ಕೋಚ್ ಗಂಭೀರ್ ಖಚಿತ ಘೋಷಣೆಯಷ್ಟೇ ಬಾಕಿ?

Advertisement

ಮುಂಬೈ: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ)ಗೆ ಸವಾಲೊಂದು ಎದುರಾಗಿದೆ. ಭಾರತ ಕ್ರಿಕೆಟ್ ತಂಡದ ಕೋಚ್ ಸ್ಥಾನಕ್ಕೆ ಅರ್ಜಿಗಳನ್ನು ಸ್ವೀಕರಿಸಿರುವ ಬಿಸಿಸಿಐ ಅಧಿಕಾರಿಗಳು ಈಗಾಗಲೇ ಒಟ್ಟು ೩ ಸಾವಿರಕ್ಕೂ ಅಧಿಕ ಅರ್ಜಿಗಳು ಬಂದಿವೆ. ಆದರೆ, ಇದರಲ್ಲಿ ನಕಲಿ ಅರ್ಜಿಗಳು ಕೂಡ ಬಂದಿವೆ.
ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಅಮಿತ್ ಶಾ, ಸಚಿನ್ ತೆಂಡುಲ್ಕರ್, ಹರ್ಭಜನ್ ಸಿಂಗ್, ವೀರೇಂದ್ರ ಸೆಹ್ವಾಗ್‌ರ ಹೆಸರಿನಲ್ಲಿ ಕೋಚ್ ಸ್ಥಾನಕ್ಕಾಗಿ ಕೆಲವರು ಅರ್ಜಿ ಸಲ್ಲಿಸಿದ್ದಾರೆ. ಹಾಗಾಗಿ, ಬಿಸಿಸಿಐ ಈ ಅರ್ಜಿಗಳ ಪರಿಶೀಲನೆ ವೇಳೆ ಯಾವುದು ನಕಲಿ ಯಾವುದು ಅಸಲಿ ಎಂದು ತಿಳಿದುಕೊಳ್ಳಲು ಸಮಯ ತೆಗೆದುಕೊಳ್ಳುತ್ತಿದೆ.
ನಕಲಿ ಅರ್ಜಿಗಳ ವಿಚಾರ ಒಂದೆಡೆಯಾದರೆ, ಇನ್ನೊಂದೆಡೆ ಕೋಚ್ ಸ್ಥಾನಕ್ಕೆ ಸೂಕ್ತ ಅಭ್ಯರ್ಥಿಯನ್ನು ನೇಮಿಸುವುದು ಕೂಡ ಬಿಸಿಸಿಐಗೆ ಹಿಂದೆಂದೂ ಇಷ್ಟೊಂದು ತ್ರಾಸವಾಗಿರಲಿಲ್ಲ. ಏಕೆಂದರೆ, ಈ ಬಾರಿ ಭಾರತ ತಂಡದ ಕೋಚ್ ಸ್ಥಾನ ಬೇಕು ಎನ್ನುವವರಿಗಿಂತಲೂ ಬೇಡ ಎನ್ನುವವರೇ ಹೆಚ್ಚಾಗಿದ್ದಾರೆ. ಹಾಗಾಗಿ, ಸಾಕಷ್ಟು ವಿದೇಶಿ ಮಾಜಿ ಕ್ರಿಕೆಟರ್‌ಗಳು ಅರ್ಜಿಯನ್ನೇ ಹಾಕಲು ಮುಂದಾಗಿಲ್ಲ. ಇನ್ನು ಕೆಲವರು ಅರ್ಜಿ ಸಲ್ಲಿಸಿದ್ದರೂ, ಬಿಸಿಸಿಐ ಕೂಡ ತಿರಸ್ಕರಿಸಿವೆ. ಇದರಿಂದ ಭಾರತ ತಂಡದ ಭವಿಷ್ಯದ ಕೋಚ್ ಯಾರೆಂಬ ಕುತೂಹಲ ಮತ್ತಷ್ಟು ಮುಂದುವರೆದಿದೆ.
ಲಕ್ಷ್ಮಣ್ ನಿರಾಸಕ್ತಿಯಿಂದ ಸಮಸ್ಯೆ
೨೦೨೧ರಲ್ಲಿ ಇಲ್ಲದ ಸಮಸ್ಯೆ ಈಗ ಬಿಸಿಸಿಐಗೆ ಎದುರಾಗಿದೆ. ಏಕೆಂದರೆ, ೨೦೨೧ರಲ್ಲಿ ರವಿ ಶಾಸ್ತ್ರಿ ಟೀಮ್ ಇಂಡಿಯಾದ ಕೋಚ್ ಸ್ಥಾನದಿಂದ ಹೊರ ಬಂದ ನಂತರ, ಕಿರಿಯ ಭಾರತ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿದ್ದ ರಾಹುಲ್ ದ್ರಾವಿಡ್, ಕೋಚ್ ಸ್ಥಾನಕ್ಕೆ ಸೂಕ್ತ ಎಂದು ಬಿಸಿಸಿಐ ನಿರ್ಧರಿಸಿತ್ತು. ಆದರೆ, ಈ ಕಳೆದ ೩ ವರ್ಷಗಳಲ್ಲಿ ರಾಹುಲ್ ದ್ರಾವಿಡ್ ಟೀಮ್ ಇಂಡಿಯಾವನ್ನು ಮುನ್ನಡೆಸಿದ ರೀತಿ, ಕಲ್ಲು ಮುಳ್ಳಿನ ಹಾದಿಯಿಂದಲೇ ಕೂಡಿತ್ತು. ಅತಿಯಾದ ಕ್ರಿಕೆಟ್ ಸರಣಿಗಳಲ್ಲಿ ಪಾಲ್ಗೊಂಡ ನಂತರವೂ ವಿಶ್ರಾಂತಿ ಪಡೆಯಲು ಮುಂದಾದರೆ, ಸಾಕಷ್ಟು ತೆಗಳಿಕೆ ಮಾತುಗಳು ಕೂಡ ಕೇಳಿ ಬಂದಿದ್ದವು. ಈ ವೇಳೆ ವಿವಿಎಸ್ ಲಕ್ಷ್ಮಣ್ ಹಂಗಾಮಿ ಕೋಚ್ ಆಗಿ ಕಾರ್ಯ ನಿರ್ವಹಿಸಿದ್ದರು. ಆದರೆ, ಈಗ ಪರಿಪೂರ್ಣ ಕೋಚ್ ಆಗಲು ಲಕ್ಷ್ಮಣ್ ಸಿದ್ಧರಿಲ್ಲ. ಹಾಗಾಗಿ, ಈಗ ಪರ್ಯಾಯ ಕೋಚ್ ಅಭ್ಯರ್ಥಿ ಹುಡುಕಾಟ ನಡೆಯುತ್ತಿದೆ.
ಗಂಭೀರ್ ಬಗ್ಗೆ ಬಿಸಿಸಿಐ ಮೌನ
ಸದ್ಯ ಟೀಮ್ ಇಂಡಿಯಾ ಕೋಚ್ ಆಯ್ಕೆ ವಿಚಾರದಲ್ಲಿ ಗೌತಮ್ ಗಂಭೀರ್ ಹೆಸರು ಅಂತಿಮ ಎಂದೇ ಹೇಳಲಾಗುತ್ತಿದೆ. ೧೭ನೇ ಐಪಿಎಲ್ ಗೆದ್ದ ಬಳಿಕ ಗೌತಮ್‌ಗೆ ಭಾರಿ ಬೇಡಿಕೆಯೂ ಇದೆ. ಅತ್ತ ಆಟಗಾರನಾಗಿ ೨ ಬಾರಿ ಹಾಗೂ ಮೆಂಟರ್ ಆಗಿ ಒಮ್ಮೆ ಟ್ರೋಫಿ ಗೆದ್ದಿರುವ ಗೌತಿ, ಲಖನೌ ತಂಡವನ್ನೂ ಪ್ಲೇಅಫ್‌ಗೆ ಕರೆದೊಯ್ಯುವಲ್ಲಿ ಕಳೆದ ೨ ಆವೃತ್ತಿಗಳಲ್ಲಿ ಯಶಸ್ವಿಯಾಗಿದ್ದರು. ಆದರೆ, ಗೌತಿ ಅತ್ತ ಕೆಕೆಆರ್ ತಂಡದಿಂದ ಹೊರ ಬಂದರೆ ಮಾತ್ರ ಕೋಚ್ ಆಗಲು ಸಾಧ್ಯ.
ಅಲ್ಲದೇ, ಗಂಭೀರ್ ಟೀಮ್ ಇಂಡಿಯಾದ ಕೋಚ್ ಆದರೆ ಸೆಲೆಕ್ಷನ್ ಗ್ಯಾರೆಂಟಿಯನ್ನು ಷರತ್ತಾಗಿ ಕೇಳಿದ್ದಾರೆ. ಅಂದರೆ, ತಮಗೆ ಬೇಕಾದ ಆಟಗಾರರನ್ನು ತಂಡದಲ್ಲಿ ಸೇರಿಸಿಕೊಳ್ಳುವ ಬಗ್ಗೆ ಗೌತಿಗೆ ಅವಕಾಶ ನೀಡುವುದು. ಇದರಿಂದ ತಂಡದಲ್ಲಿರುವ ಹಿರಿಯ ಆಟಗಾರರಾಗಿರುವ ರೋಹಿತ್ ಶರ್ಮಾ, ಅದರಲ್ಲೂ ವಿರಾಟ್ ಕೊಹ್ಲಿ ಬಗ್ಗೆ ಸಾಕಷ್ಟು ಬಾರಿ ಟೀಕಿಸಿರುವ ಗೌತಿಯಿಂದ, ಸಮಸ್ಯೆ ಎದುರಾಗಬಹುದು. ಹಾಗಾಗಿ, ಇಲ್ಲಿ ಗೌತಿಗೆ ಪರ್ಯಾಯವಾಗಿ ಸೂಕ್ತ ಅಭ್ಯರ್ಥಿಯನ್ನು ಹುಡುಕಲು ಬಿಸಿಸಿಐ ಚಿಂತಿಸಿದೆ.
ಅಚ್ಚರಿ ಅಭ್ಯರ್ಥಿಯನ್ನು ಘೋಷಿಸುತ್ತಾ ಬಿಸಿಸಿಐ?
ಇದೆಲ್ಲಾದರ ಮಧ್ಯೆ ಬಿಸಿಸಿಐ ಅಚ್ಚರಿ ಅಭ್ಯರ್ಥಿಯನ್ನು ಕೋಚ್ ಆಗಿ ನೇಮಿಸುತ್ತಾ ಎಂಬ ಪ್ರಶ್ನೆಗಳು ಹಬ್ಬಿವೆ. ಅದರಲ್ಲೂ ಮಹೇಂದ್ರ ಸಿಂಗ್ ಧೋನಿಯನ್ನು ಕೋಚ್ ಆಗಿ ನೇಮಿಸಿದರೆ ಎಂಬ ಸಣ್ಣ ಆಲೋಚನೆ ಶುರುವಾಗಿದ್ದು, ಈ ಬಗ್ಗೆ ಬಿಸಿಸಿಐ ತುಟಿ ಬಿಚ್ಚಿಲ್ಲ. ಅಲ್ಲದೇ ಈಗಾಗಲೇ ಆಸ್ಟ್ರೇಲಿಯಾ ಸೇರಿ ವಿದೇಶಿ ಆಟಗಾರರನ್ನು ಸಂಪರ್ಕಿಸಿಲ್ಲ ಎಂದಿರುವ ಬಿಸಿಸಿಐ ಸದ್ಯ ಟಿ೨೦ ವಿಶ್ವಕಪ್‌ವರೆಗೂ ಕಾದು ನೋಡುವ ತಂತ್ರವನ್ನು ಅನುಸರಿಸುತ್ತಿದೆ.