ಕೊಳೆ ನಿವಾರಣೆ

ಗುರುರಾಜ ಕರಜಗಿ
Advertisement

ಪರಮಪೂಜ್ಯ ಹರಿಪ್ರಸಾದ ಸ್ವಾಮೀಜಿಯವರೊಂದಿಗೆ ಅನೇಕ ಬಾರಿ ಅಮೇರಿಕೆಯಲ್ಲಿ ಸುತ್ತಾಡುವ ಭಾಗ್ಯ ನನಗೆ ಲಭಿಸಿತ್ತು. ಅವರೊಂದಿಗೆ ಹತ್ತಾರು ರಾಜ್ಯಗಳಲ್ಲಿ ನಾನು ತಿರುಗಾಡಿರಬೇಕು. ಅವರ ಮಾತುಗಳಲ್ಲಿದ್ದ ದೇಶಪ್ರೇಮ, ಮೌಲ್ಯಗಳು, ಆತ್ಮೀಯತೆಗಳು ನನಗೆ ಬಹಳ ಸಂತೋಷ ಕೊಡುತ್ತಿದ್ದವು. ಅವರಿಗೆ ಆತ್ಮೀಯತೆ ಎನ್ನುವುದು ಬಹು ಮೆಚ್ಚುಗೆಯಾದ ಪದ. ದೇಶದಲ್ಲಿ, ರಾಜ್ಯಗಳಲ್ಲಿ, ವ್ಯಕ್ತಿಗಳಲ್ಲಿ, ಸಂಬಂಧಗಳಲ್ಲಿ ಆತ್ಮೀಯತೆ ಇರಬೇಕೆಂಬುದನ್ನು ತಮ್ಮ ಪ್ರತಿಯೊಂದು ಉಪನ್ಯಾಸದಲ್ಲಿ ಒತ್ತಿ ಒತ್ತಿ ಹೇಳುತ್ತಿದ್ದರು. ಅವರಿಗೆ ತರುಣರೆಂದರೆ ಬಲು ಪ್ರೀತಿ. ಅವರಿಂದಲೇ ಮುಂದಿನ ಪ್ರಜ್ವಲ ಭಾರತ ಎಂದು ನಂಬಿ ಅವರನ್ನು ಉತ್ತೇಜಿಸಲು ಅನೇಕ ಕಾರ್ಯಕ್ರಮಗಳನ್ನು ಹಾಕಿಕೊಳ್ಳುತ್ತಿದ್ದರು. ಅದರಲ್ಲಿ, ಪರದೇಶದಲ್ಲಿರುವ ತರುಣರಿಗೆ ಪ್ರತಿವರ್ಷ ಒಂದು ‘ಯೂಥ್ ಕ್ಯಾಂಪ್’ ನಡೆಸುವುದು ಮುಖ್ಯವಾಗಿತ್ತು. ಇಂಥ ಎರಡು ಮೂರು ಕ್ಯಾಂಪ್‌ಗಳಲ್ಲಿ ನಾನು ಭಾಗವಹಿಸಿದ್ದೆ.
ಒಂದು ಬಾರಿ “ಯೂಥ್ ಕ್ಯಾಂಪ್”, ನ್ಯೂಯಾರ್ಕದಿಂದ ಸ್ವಲ್ಪ ದೂರವಿರುವ ಕನೆಕ್ಟಿಕಟ್ ಪ್ರದೇಶದಲ್ಲಿ ಆಯೋಜನೆಯಾಗಿತ್ತು. ಆ ನಾಲ್ಕು ದಿನಗಳ ಕಾರ್ಯಕ್ರಮದಲ್ಲಿ ನಾನೂ ಎರಡು ಮೂರು ಅವಧಿಗಳಲ್ಲಿ ಮಾತನಾಡುವುದು ತೀರ್ಮಾನವಾಗಿತ್ತು. ನನ್ನ ಜೊತೆಗೆ ಪ್ರಸಿದ್ಧ ಯೋಗ ಶಿಕ್ಷಕರಾದ ಡಾ. ಶ್ರೀಧರ್‌ರವರೂ ಇದ್ದರು. ಬೆಳಗಿನ ಅವಧಿ ಮುಗಿದ ನಂತರ ಊಟದ ಸಮಯ. ಪ್ರತಿಸಲದಂತೆ, ಈ ಬಾರಿಯೂ ತಮ್ಮೊಂದಿಗೇ ಊಟಕ್ಕೆ ಆಹ್ವಾನಿಸಿದ್ದರು ಸ್ವಾಮೀಜಿ. ಅಲ್ಲಿ ಒಂದು ತಮಾಷೆಯ ಪ್ರಸಂಗ ನಡೆಯಿತು. ಅವರ ಊಟದ ವಿಧಾನ ವಿಶೇಷ. ಮಾಡಿದ ಎಲ್ಲ ಪದಾರ್ಥಗಳನ್ನು ಒಂದು ಮರದಿಂದ ಮಾಡಿದ ಬುಟ್ಟಿಯಲ್ಲಿ ಹಾಕಿಕೊಂಡು ತಿನ್ನುವರು. ಬಹುಶ: ಅದರ ಉದ್ದೇಶ, ಯಾವುದನ್ನೂ ರುಚಿ ಮಾಡಿಕೊಂಡು ತಿನ್ನದೆ, ಎಲ್ಲವನ್ನೂ ಸೇರಿಸಿಕೊಂಡು ತಿಂದುಬಿಡಬೇಕು ಎಂದಿರಬೇಕು. ಸನ್ಯಾಸಿಗಳಿಗೆ ರುಚಿ, ವಾಸನೆಗಳು, ಸ್ಪರ್ಶ ಇವುಗಳ ಆಕರ್ಷಣೆಯಾಗಬಾರದು ಎಂದು ಈ ವಿಧಾನವನ್ನು ರೂಪಿಸಿರಬೇಕು. ಅವರ ಮುಂದೆಯೇ ಕುಳಿತು ಊಟಮಾಡುವ ನಮಗೆ ಅಂಥ ಯಾವ ನಿಯಮಗಳು ಇರಲಿಲ್ಲ. ಅದರ ಮೇಲೆ ಗುರುಗಳ ಒತ್ತಾಯ. “ಆನಂದಸ್ವಾಮಿ, ಅದನ್ನು ಕರಜಗಿ ಸಾಹೇಬರಿಗೆ ಹಾಕು, ತುಂಬ ಚೆನ್ನಾಗಿರುತ್ತದೆ. ಇದನ್ನು ಇನ್ನಷ್ಟು ಬಡಿಸು, ಇದು ಅವರಿಗೆ ಕರ್ನಾಟಕದಲ್ಲಿ ಸಿಗುವುದಿಲ್ಲ. ಆ ಇನ್ನೊಂದರ ರುಚಿಯನ್ನು ಅವರು ನೋಡಬೇಕು. ಹಾಕು, ಬೇಡವೆಂದರೂ ಒತ್ತಾಯಮಾಡಿ ಹಾಕು” ಎಂದು ಹಾಕಿಸುತ್ತಿದ್ದರು. ಅವರೊಂದಿಗೆ ಕುಳಿತಾಗ ಪ್ರತಿಬಾರಿಯೂ ನಾನು ಅತಿಯಾಗಿ ತಿನ್ನುವಂತಾಗುತ್ತಿತ್ತು. ಅಂದೂ ಸ್ವಾಮೀಜಿ, “ಆನಂದ ಸ್ವಾಮಿ, ಕರಜಗಿ ಸಾಹೇಬರಿಗೆ ಫಲಾಫಲ ಬಡಿಸು. ಅದು ಖಂಡಿತಾ ಅವರಿಗೆ ಇಷ್ಟವಾಗುತ್ತದೆ” ಎಂದರು. ಅದುವರೆಗೂ ನಾನು ಫಲಾಫಲ ಎನ್ನುವಂಥ ತಿಂಡಿ ಇದೆ ಎಂಬುದನ್ನು ಕೇಳಿಯೇ ಇರಲಿಲ್ಲ. ಒಬ್ಬ ಸ್ವಾಮೀಜಿ (ಅವರೇ ಬಡಿಸುವವರು) ಫಲಾಫಲವನ್ನು ತಂದು. ನನ್ನ ಎಡಭಾಗಕ್ಕೆ ಕುಳಿತ ಡಾ. ಶ್ರೀಧರ್‌ರವರಿಗೆ ಹಾಕಿ ನಂತರ ನನ್ನ ತಟ್ಟೆಗೂ ಹಾಕಿದರು. ನಾನು ಸ್ವಾಮಿಗಳ ಹತ್ತಿರ ಮಾತನಾಡುತ್ತಿದ್ದುದರಿಂದ ಅದನ್ನು ತಕ್ಷಣವೇ ತಿನ್ನಲಿಲ್ಲ. ಆದರೆ ಪಕ್ಕದಲ್ಲಿದ್ದ ಡಾ. ಶ್ರೀಧರ್ ಅದನ್ನೊಂದು ಚೂರು ಮುರಿದು ಬಾಯಿಗೆ ಹಾಕಿಕೊಂಡರು. ಮರುಕ್ಷಣವೇ ಸುತ್ತಲೂ ಜನರಿದ್ದಾರೆ, ಸ್ವಾಮೀಜಿ ಇದ್ದಾರೆ ಎಂಬುದನ್ನು ಮರೆತವರಂತೆ, ಹಾ, ಹಾ ಎಂದು ಅರಚತೊಡಗಿದರು. ಅವರ ಕಣ್ಣಲ್ಲಿ ನೀರು ಸುರಿಯುತ್ತಿತ್ತು. ಇದುವರೆಗೂ ಚೆನ್ನಾಗಿದ್ದ ಇವರಿಗೆ ಏನಾಯಿತು ಎಂದು ಯೋಚಿಸುತ್ತ, ನಾನು ಫಲಾಪಲದ ಒಂದು ಚೂರನ್ನು ಬಾಯಿಗಿಟ್ಟುಕೊಳ್ಳಲು ಹೊರಟೆ. ಅದನ್ನು ಕಂಡ ಡಾ. ಶ್ರೀಧರ್ ಗರಗರನೇ ಕಣ್ಣುಗಳನ್ನು, ಕೈಗಳನ್ನು ತಿರುಗಿಸುತ್ತ ತಿನ್ನಬೇಡಿ ಎಂದು ಸೂಚಿಸಲು ಹೆಣಗುತ್ತಿದ್ದರು. ಅವರು ನಾಲಿಗೆಯನ್ನೋ, ತುಟಿಯನ್ನೋ ಕಚ್ಚಿಕೊಂಡು ನೋವು ಅನುಭವಿಸುತ್ತಿರಬೇಕೆಂದುಕೊಂಡು ಫಲಾಫಲವನ್ನು ಬಾಯಿಗೆ ಹಾಕಿಕೊಂಡು ಕಚ್ಚಿದೆ. ನನಗೆ ಪ್ರಪಂಚ ಸರಿಯಾಗಿ ಕಂಡದ್ದು ಆ ಕ್ಷಣ ಮಾತ್ರ. ಮರುಕ್ಷಣ ಎಲ್ಲವೂ ಗರ‍್ರೆಂದು ತಿರುಗಿದಂತಾಗಿ ಪ್ರಜ್ಞೆ ಹೋದಂತಾಯಿತು. ಬಾಯಿಯಲ್ಲಿ ನಾಲ್ಕಾರು ಬೆಂಕಿಯ ಕೆಂಡಗಳನ್ನಿಟ್ಟುಕೊಂಡ ಹಾಗೆ ಭಾಸವಾಯಿತು. ನನ್ನ ನಾಲಿಗೆಗೆ, ಒಸಡುಗಳಿಗೆ, ಗಂಟಲು ಒಳಭಾಗದಲ್ಲಿ ಸ್ಪರ್ಶಜ್ಞಾನವೇ ಹೊರಟು ಹೋಯಿತು. ಕಣ್ಣಿನಲ್ಲಿ ಸುರಿದ ನೀರು ಹಾಕಿಕೊಂಡ ಶರ್ಟನ್ನೆಲ್ಲ ತೋಯಿಸಿತು. ಬಾಯಿಯಲ್ಲಿಯ ಬೆಂಕಿಯನ್ನು ತಣಿಸಲು ಗಟಗಟನೆ ನೀರು ಕುಡಿದೆ. ಆಗ ಬಾಯಿಯಲ್ಲಿದ್ದ ಬೆಂಕಿ, ಕರುಳಿನಲ್ಲಿ ಹರಿಯುತ್ತ, ಜಠರವನ್ನು ಸೇರಿ ಉರಿಯತೊಡಗಿತು. ಬಾಯಿಯ ಖಾರವನ್ನು ಕಡಿಮೆಮಾಡಲು ತಟ್ಟೆಯಲ್ಲಿದ್ದ ಎರಡು ಮೂರು ಸಿಹಿ ತಿಂಡಿಗಳನ್ನು, ಜನ್ಮದಲ್ಲೇ ಸಿಹಿಯನ್ನು ಕಾಣದವನಂತೆ, ಕಚಕಚನೆ ಕಡಿದು ನುಂಗಿದೆ. ಊಹೂಂ. ಖಾರದ ಪ್ರಭಾವ ಇನಿತೂ ಕಡಿಮೆಯಾಗಲಿಲ್ಲ. ಡಾ. ಶ್ರೀಧರ್ ಕೂಡ ಇಂಥದೇ ಪ್ರಯೋಗಗಳನ್ನು ಮಾಡುತ್ತಿದ್ದರು. ನಮ್ಮಿಬ್ಬರ ಅವಸ್ಥೆಯನ್ನು ಕಂಡ ಸ್ವಾಮೀಜಿ ಕೂಗಿಕೊಂಡರು “ಆನಂದಸ್ವಾಮಿ, ಏನು ಹಾಕಿದೆಯೋ ಅವರಿಗೆ? ನೋಡು ಅವರ ಅವಸ್ಥೆ”. ನಮ್ಮ ಪರಿಸ್ಥಿತಿಯನ್ನು ಕಂಡ ಸ್ವಾಮೀಜಿ ಊಟ ಮಾಡುವುದನ್ನು ನಿಲ್ಲಿಸಿದ್ದರು. ಪುಣ್ಯಕ್ಕೆ ಅವರ ಬುಟ್ಟಿಯಲ್ಲಿದ್ದ ಫಲಾಫಲ ಹಾಗೆಯೇ ಇತ್ತು. ಅವರದನ್ನು ತಿಂದಿರಲಿಲ್ಲ. ನಮಗೆ ಮತ್ತೆ ಪ್ರಜ್ಞಾಲೋಕಕ್ಕೆ ಬರಲು ಕನಿಷ್ಠ ಹತ್ತು ನಿಮಿಷ ಹಿಡಿಯಿತು. ನಮ್ಮ ಸುತ್ತಮುತ್ತಲೂ ಜನರು ಗಾಬರಿಯಿಂದ ನಮ್ಮಿಬ್ಬರನ್ನೇ ನೋಡುತ್ತಿದ್ದಾರೆ. ಅವರಿಗೆ ನಮ್ಮ ದುರವಸ್ಥೆಯ ಕಾರಣ ತಿಳಿದಿಲ್ಲ. ಒಬ್ಬರು ಆತಂಕದಿಂದ ಕೇಳಿದರು, “ಏನಾಯ್ತು ಸರ್?” ನಾನು ಸುಧಾರಿಸಿಕೊಂಡು ಹೇಳಿದೆ, “ಈ ಫಲಾಫಲದಿಂದಾಗಿ ನಾನು ಇದುವರೆಗೂ ಕಂಡಿರದಿದ್ದ ನನ್ನ ಅತ್ಯಂತ ಪೂರ್ವಜರನ್ನೆಲ್ಲ ಕಂಡು ಬಂದೆ. ಇನ್ನೊಂದು ತುಂಡನ್ನೂ ಕಚ್ಚಿದ್ದರೆ ಅವರೊಂದಿಗೆ ಅಲ್ಲಿಯೇ ಇದ್ದು ಬಿಡುತ್ತಿದ್ದೆ”. ಪಾಪ! ಫಲಾಫಲವನ್ನು ಸಿದ್ಧಪಡಿಸಿದ್ದ ಆನಂದಸ್ವಾಮಿಯ ಮುಖ ಚಿಕ್ಕದಾಗಿತ್ತು. ಆತ ಗೊಣಗಿದರು, “ನಾನು ಪ್ರತಿಸಲ ಹಾಕುವಷ್ಟೇ ಮೆಣಸಿನಕಾಯಿ ಹಾಕಿದ್ದೇನೆ. ಅದೇಕೆ ಅಷ್ಟು ಖಾರವಾಯಿತೋ?” ಅವರು ಹಾಕಿದ್ದು ಅಷ್ಟೇ ಮೆಣಸಿನಕಾಯಿಗಳು. ಆದರೆ ಹಾಕಿದ್ದು ಮೆಕ್ಸಿಕನ್ ಮೆಣಸಿನಕಾಯಿಗಳು! ಒಂದು ಮೆಕ್ಸಿಕನ್ ಮೆಣಸಿನಕಾಯಿ ನಮ್ಮ ಸಾಧಾರಣ ನೂರು ಮೆಣಸಿನಕಾಯಿಯ ಖಾರಕ್ಕೆ ಸಮ. ಸ್ವಾಮೀಜಿ ಹೇಳಿದರು, “ಈ ಫಲಾಫಲವನ್ನು ಎಚ್ಚರದಿಂದ ನಿವಾರಿಸು. ಹೊರಗೆ ಎಲ್ಲಾದರೂ ಹಾಕಿದಾಗ, ನಾಯಿ, ಪಕ್ಷಿಗಳು ತಿಂದರೆ ಸತ್ತೇ ಹೋಗುತ್ತವೆ”.
ಮರುದಿನ ಇದನ್ನು ಸ್ವಾಮೀಜಿ ಸಭೆಯಲ್ಲಿ ನೆನೆಸಿಕೊಂಡು ನಕ್ಕರು. ನಾನು ಹೇಳಿದೆ, “ಫಲಾಫಲವನ್ನು ತಿನ್ನುವುದೊಂದು ಅಧ್ಯಾತ್ಮಿಕ ಪ್ರಕ್ರಿಯೆ. ಸರಿಯಾದ ಮೆಣಸಿನಕಾಯಿ ಹಾಕಿದರೆ ಅದು ಫಲ, ಸುಖವನ್ನು ಕೊಡುತ್ತದೆ. ಆದರೆ ತಿಳಿಯದೆ ಮೆಕ್ಸಿಕನ್ ಮೆಣಸಿನಕಾಯಿ ಬಳಸಿದರೆ ಅದು ಅಫಲ. ದು:ಖವನ್ನೇ ಕೊಡುತ್ತದೆ. ಹೀಗೆ ಫಲ, ಅಫಲಗಳು ನಮ್ಮ ಕೈಯಲ್ಲೇ ಇವೆ”. ಎಲ್ಲರೂ ಸಂತೋಷಪಟ್ಟರು.
ಆ ದಿನಗಳಲ್ಲಿ ನಾನೊಂದು ವಿಷಯವನ್ನು ಗಮನಿಸುತ್ತಿದ್ದೆ. ನನಗೆ ಸ್ವಾಮೀಜಿ ತೋರುತ್ತಿದ್ದ ಅನನ್ಯ ಪ್ರೀತಿ, ಗೌರವ, ಸಾಮೀಪ್ಯಗಳು; ಕೆಲವು ಸ್ವಾಮೀಜಿಯವರ ಆತ್ಮೀಯರಿಗೆ ಅಷ್ಟು ಇಷ್ಟವಾಗುತ್ತಿರಲಿಲ್ಲ. ಇವನು ಯಾವುನೋ ದಕ್ಷಿಣದಿಂದ ಬಂದಿದ್ದಾನೆ, ಮೂವತ್ತು, ನಲವತ್ತು ವರ್ಷಗಳಿಂದ ಜೊತೆಗಿರುವ ನಮಗಿಂತ ಹೆಚ್ಚು ಗೌರವವನ್ನು ಪಡೆದುಕೊಳ್ಳುತ್ತಾನೆ ಎಂದು ಅವರಿಗೆ ಅನ್ನಿಸಿದರೆ ಯಾವ ತಪ್ಪೂ ಇಲ್ಲ. ಅವರಿಗೆ ನನ್ನ ಬಗ್ಗೆ ಕೊಂಚ ಅಸೂಯೆ ಇದ್ದದ್ದು ಕೆಲವೊಂದು ಸಂದರ್ಭಗಳಲ್ಲಿ ವ್ಯಕ್ತವಾಗುತ್ತಿತ್ತು. ಆದರೆ ಸ್ವಾಮೀಜಿಯವರಿಗೆ ಕೇಳುವ ಧೈರ್ಯ ಯಾರಿಗೂ ಇರಲಿಲ್ಲ. ಸ್ವಾಮೀಜಿಯವರೂ ಅದನ್ನು ಗಮನಿಸಿದ್ದಿರಬೇಕು. ಇದಕ್ಕೊಂದು ಪರಿಹಾರ ಕಂಡುಕೊಳ್ಳಬೇಕೆಂದು ತೀರ್ಮಾನಿಸಿದೆ. ಅವರೆಲ್ಲ ಹಿರಿಯ ಭಕ್ತರು. ಅವರ ಮತ್ತು ಅವರ ಗುರುಗಳ ನಡುವೆ ಅಡ್ಡವಾಗಿ ನಿಲ್ಲುವ ಯಾವ ಅಧಿಕಾರವೂ, ಅಪೇಕ್ಷೆಯೂ ನನಗಿರಲಿಲ್ಲ. ಮರುದಿನ ಒಂದು ಅವಕಾಶ ಬಂದಿತು. ಅದೊಂದು ದೊಡ್ಡ ಸಭೆ. ನ್ಯೂಜೆರ್ಸಿಯ ಬಹುದೊಡ್ಡ ಸಭಾಂಗಣದಲ್ಲಿ ಕಾರ್ಯಕ್ರಮ. ಸ್ವಾಮೀಜಿಯವರ ಎಲ್ಲ ಹಿರಿ, ಕಿರಿಯ ಭಕ್ತರು, ತರುಣರು ನೆರೆದಿದ್ದರು. ಅಲ್ಲಿ ನಾನು ಮಾತನಾಡಬೇಕಿತ್ತು. ನಾನು ಮಾತಿಗೆ ಪ್ರಾರಂಭ ಮಾಡಿ ಹೇಳಿದೆ, “ನೀವು ಎಷ್ಟು ಒಳ್ಳೆಯವರು! ನಾನು ದೂರದ ಕರ್ನಾಟಕದಿಂದ ಬಂದವನು. ಸ್ವಾಮೀಜಿಯ ಪರಿಚಯ ನನಗೆ ಕೇವಲ ಮೂರು-ನಾಲ್ಕು ವರ್ಷದ್ದು. ನನಗೆ ಗುಜರಾತೀ ಭಾಷೆ ಬರದು. ತಾವೆಲ್ಲ ಸ್ವಾಮೀಜಿಯವರ ಜೊತೆಗೆ ದಶಕಗಳಿಂದ ಇದ್ದೀರಿ. ಅವರ ಆತ್ಮೀಯ ಬಂಧುಗಳಾಗಿದ್ದೀರಿ. ಅವರದೇ ಭಾಷೆಯಲ್ಲಿ ಮಾತನಾಡುತ್ತೀರಿ. ಇದ್ಯಾವನೋ ಕರ್ನಾಟಕದಿಂದ ಬಂದು ಸ್ವಾಮೀಜಿ ಜೊತೆಗೇ ಸೇರಿಕೊಂಡಿದ್ದಾನಲ್ಲ, ಅವರೊಂದಿಗೆ ಇಷ್ಟು ಸಲುಗೆಯಿಂದ ಅಡ್ಡಾಡುತ್ತಾನಲ್ಲ ಎಂಬ ಕೋಪ, ಅಸೂಯೆ ಬರಬೇಕಿತ್ತು. ನಾನು ನಿಮ್ಮ ಜಾಗದಲ್ಲಿದ್ದಿದ್ದರೆ ಖಂಡಿತವಾಗಿಯೂ ಕೋಪ ಮಾಡಿಕೊಂಡು ಸ್ವಾಮೀಜಿಯವರನ್ನು ಕೇಳಿಯೇ ಬಿಡುತ್ತಿದ್ದೆ. ಆದರೆ ನೀವು ತುಂಬ ಉದಾರಿಗಳು, ವಿಶಾಲ ಮನಸ್ಸಿನವರು. ಹಾಗೆ ಭಾವಿಸಲಿಲ್ಲ. ಮೊದಮೊದಲು ಸ್ವಾಮೀಜಿ ತೋರಿದ ಪ್ರೀತಿಯಿಂದ ನನಗೆ ಹೆಮ್ಮೆ, ಅಹಂಕಾರ ಬಂದದ್ದುಂಟು. ನಂತರ ಯಾಕೆ ಅವರು ನನ್ನನ್ನು ಸಮೀಪದಲ್ಲಿಯೇ ಇಟ್ಟುಕೊಂಡಿದ್ದಾರೆ ಎಂಬುದು ತಿಳಿಯಿತು. ಅದನ್ನು ತಮಗೆ ಹೇಳುತ್ತೇನೆ. ಬಟ್ಟೆ ಕೊಳೆಯಾದರೆ ಅದನ್ನು ವಾಶಿಂಗ್‌ಮೆಶಿನ್ನಿನಲ್ಲಿ ಹಾಕುತ್ತೇವೆ. ಆದರೆ ಬಟ್ಟೆ ಹೆಚ್ಚು ಕೊಳೆಯಾಗಿದ್ದರೆ ಅದನ್ನು ಸಾಬೂನಿನಲ್ಲಿ ನೆನಸಿ, ಕೈಯಿಂದ ಸರಿಯಾಗಿ ಉಜ್ಜಿ ಆಮೇಲೆ ವಾಶಿಂಗ್‌ಮೆಶಿನ್‌ಗೆ ಹಾಕುತ್ತೇವೆ. ಬಟ್ಟೆ ಕೊಳಕಾದಷ್ಟು ಹೆಚ್ಚು ಉಜ್ಜಬೇಕಾಗುತ್ತದೆ. ಅಂತೆಯೇ, ನೀವೆಲ್ಲ ನಿಷ್ಕಲ್ಮಷ ಭಕ್ತರಾದ್ದರಿಂದ ನೀವು ನೇರವಾಗಿ ಸ್ವಾಮಿಗಳ ವಾಶಿಂಗ್ ಮೆಶಿನ್‌ಗೆ ಹೋಗುವವರು. ಅವರಿಗೆ ನನ್ನಲ್ಲಿ ತುಂಬ ಕೊಳೆ ಕಂಡಿದೆ. ಅದನ್ನು ತೆಗೆಯಲು ಕೈಯಿಂದ ಹಿಡಿದು ಉಜ್ಜಲೇಬೇಕು. ಅದಕ್ಕಾಗಿಯೇ ನನ್ನನ್ನು ತಮ್ಮ ಹತ್ತಿರವೇ ಇಟ್ಟುಕೊಂಡು ಸ್ವಚ್ಛಗೊಳಿಸುತ್ತಿದ್ದಾರೆ. ನಾನೂ ನಿಮ್ಮ ಹಾಗೆಯೇ ಆದ ಮೇಲೆ ಉಜ್ಜವುದು ನಿಲ್ಲುತ್ತದೆ”. ಭಕ್ತರಿಗೆಲ್ಲ ಖುಷಿಯಾಯಿತು. ನನ್ನ ಬಗ್ಗೆ ಅನುಕಂಪೆಯೂ ಬಂದಿರಬೇಕು, ಈತ ಕೊಳೆಯನ್ನು ಕಳೆದುಕೊಳ್ಳ ಬೇಕಲ್ಲ, ಅಲ್ಲಿಯವರೆಗೂ ಸ್ವಾಮೀಜಿಯ ಬಳಿಯೇ ಇರಲಿ ಎಂದು ಕೊಂಡು ಸಂತೋಷದಿಂದ ಚಪ್ಪಾಳೆ ತಟ್ಟಿ ನಕ್ಕರು. ನನಗೂ ಹಗುರಾಯಿತು. ಸ್ವಾಮೀಜಿ ನನ್ನ ಕಡೆಗೆ ಅರ್ಥ ಗರ್ಭಿತವಾಗಿ ನೋಡಿ ಮೆಲುವಾಗಿ ನಕ್ಕರು. ಅವರೊಬ್ಬ ಪರಮಹಂಸರು. ಅವರಿಗೆ ನನ್ನ ಮನದ ಭಾವ ತಿಳಿಯದ್ದೇ?