ಕೊಟ್ಟ ಮಾತಂತೆ ನಡೆದುಕೊಂಡ ನಾಯಕ ಕುಮಾರಸ್ವಾಮಿ

Advertisement

ಶ್ರೀರಂಗಪಟ್ಟಣ: ಜೆಡಿಎಸ್ ರಾಜ್ಯಾಧ್ಯಕ್ಷ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರ ಬಗ್ಗೆ ಹಗುರವಾಗಿ ಮಾತನಾಡುವ ಶಾಸಕರು ತಾವು ಬೆಳೆದು ಬಂದ ದಾರಿಯನ್ನು ಅರಿತು ಮಾತನಾಡಲಿ ಎಂದು ಜೆಡಿಎಸ್ ರಾಜ್ಯ ಯುವ ಘಟಕದ ಅಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ, ಶಾಸಕ ರಮೇಶ್ ಬಂಡಿಸಿದ್ದೇಗೌಡರಿಗೆ ಖಡಕ್ ಎಚ್ಚರಿಕೆ ನೀಡಿದರು.
ಪಟ್ಟಣದ ಟಿಎಪಿಸಿಎಂಎಸ್ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಜೆಡಿಎಸ್ ಮತ್ರು ಬಿಜೆಪಿ ಕಾರ್ಯಕರ್ತರು ಹಾಗೂ ಮುಖಂಡರುಗಳ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಹಿಂದೆ ಪಕ್ಷದ ವರಿಷ್ಠರ ಸಲಹೆ ಸೂಚನೆ ಮೇರೆಗೆ ಸಮಾಲೋಚನೆ ಮಾಡಿದ್ವಿ 2019ರ ಫಲಿತಾಂಶ ನಮ್ಮ ಕಾರ್ಯಕರ್ತರಿಗೆ ನೋವು, ಆಕ್ರೋಶ ಉಂಟು ಮಾಡಿತ್ತು. ಇದೀಗ ಸಿದ್ದರಾಮಯ್ಯರವರು ಸಿಎಂ ಆದಾಗ ಬರಗಾಲ ಬಂದಿದೆ. ರೈತರ ಸಾಲವನ್ನ ಮನ್ನಾ ಮಾಡಿದ್ದು ಕುಮಾರಸ್ವಾಮಿಯವರು. ಅಧಿಕಾರ ಇಲ್ಲದೆ ಇದ್ದಾಗ, ರೈತರು ಆತ್ಮಹತ್ಯೆ ಮಾಡಿಕೊಂಡಾಗ ಮನೆ ಮನೆಗೆ ಹೋಗಿ ಸಾಂತ್ವಾನ ಹೇಳಿ, ಆರ್ಥಿಕ ಸಹಾಯ ಮಾಡಿದ್ರು. ಅಂದೇ ತೀರ್ಮಾನ ಮಾಡಿ ನಂತರ ಸಿಎಂ ಆದಾಗ ರೈತರ ಸಾಲ ಮನ್ನಾ ಸಹ ಮಾಡಿದ್ರು. ಕೊಟ್ಟ ಮಾತಂತೆ ನಡೆದುಕೊಂಡ ನಾಯಕ ಅಂದರೆ ಅದು ಕುಮಾರಸ್ವಾಮಿ ಅವರು ಎಂದರು.
ಕಾಂಗ್ರೆಸ್‌ನ ಮಂತ್ರಿಗಳು ಶಾಸಕರು ದುರಂಹಕಾರದ ಮಾತುಗಳನ್ನ ಆಡುತ್ತಿದ್ದಾರೆ. ಲಘುವಾದ ಮಾತುಗಳನ್ನ ಆಡುತ್ತಿದ್ದಾರೆ. ಜೆಡಿಎಸ್‌ ಕಾರ್ಯಕರ್ತರನ್ನ ಕೆರಳಿಸುವ ಮಾತುಗಳನ್ನ ಆಡಬೇಡಿ ಎಂದು ಕಾಂಗ್ರೆಸ್ ನಾಯಕರಿಗೆ ಎಚ್ಚರಿಕೆ ಕೊಟ್ಟ ನಿಖಿಲ್, ಈ ಬಾರಿ ಹೊಸ ತಂತ್ರಜ್ಞಾನದ ಮೂಲಕ ಕುಮಾರಸ್ವಾಮಿ ಅವರಿಗೆ ಹಾರ್ಟ್ ಆಪರೇಷನ್ ಮಾಡಲಾಗಿದೆ. ನಮ್ಮ ತಂದೆಯ ಬಳಿ ಪ್ರತಿದಿನ ಕಷ್ಟ ಹೇಳಿಕೊಂಡು ಸಾಕಷ್ಟು ಜನ ಬರುತ್ತಾರೆ. ಯಾರೋ ಗುತ್ತಿಗೆದಾರರು, ದುಡ್ಡು ಇರುವವರು ಬರುವುದಿಲ್ಲ. ಮಾತೃ ಹೃದಯ ಇರುವ ವ್ಯಕ್ತಿ ಅಂದರೆ ಅದು ಕುಮಾರಸ್ವಾಮಿ. ತುಮಕೂರಿನಲ್ಲಿ 2019ರಲ್ಲಿ ದೇವೇಗೌಡರನ್ನ, ಮಂಡ್ಯದಲ್ಲಿ ನನ್ನನ್ನು ಮೈತ್ರಿ ಅಭ್ಯರ್ಥಿಯನ್ನಾಗಿಸಿ ಕುತ್ತಿಗೆ ಕುಯ್ದರು ಎಂದು ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಬಿಜೆಪಿ ಹಾಗೂ ಜೆಡಿಎಸ್ ಕಾರ್ಯಕರ್ತರು ಅಣ್ಣ ತಮ್ಮನ ರೀತಿ ಕೆಲಸ ಮಾಡಬೇಕು. ಬೆಂಗಳೂರು ಗ್ರಾಮಾಂತರದಲ್ಲಿ ಡಾ. ಮಂಜುನಾಥ್ ಅವರ ಪರ ಪಕ್ಷಾತೀತಾವಾಗಿ ಅಲೆ ಎದ್ದಿದೆ. ಯಾರು ಮೈಮರೆಯದೇ ಕಾರ್ಯಕರ್ತರು ಕೆಲಸ ಮಾಡಬೇಕು. ಕುಮಾರಸ್ವಾಮಿ ಗೆಲವು ಮಂಡ್ಯ ಜಿಲ್ಲೆಯ ಜನರ ಗೆಲುವಾಗಬೇಕು. ಕಾಂಗ್ರೆಸ್‌ನವರು ಐದು ಗ್ಯಾರಂಟಿಗಳನ್ನ ಇಟ್ಟುಕೊಂಡು ಚುನಾವಣೆ ಮಾಡುತ್ತಿದ್ದಾರೆ. ಫಲಾನುಭವಿಗಳ ಸಭೆ ಮಾಡಿ ಕೋಟ್ಯಂತರ ರೂ ಖರ್ಚು ಮಾಡಿದ್ದಾರೆ. ನುಡಿದಂತೆ ನಡೆದಿದ್ದೇವೆ ಎನ್ನುತ್ತಾರೆ. ಹೆಣ್ಣು ಮಕ್ಕಳಿಗೆ ಎರಡು ಸಾವಿರ ಕೊಟ್ಟು, ಗಂಡು ಮಕ್ಕಳ ಹೊಟ್ಟೆ ಮೇಲೆ ಹೊಡೆಯುತ್ತಿದ್ದಾರೆ. ಇದು ಇವರ ಸಾಧನೆ. ಇದುವರೆಗೂ ಎಷ್ಟು ಕ್ಷೇತ್ರಗಳಿಗೆ ಅನುದಾನ ಬಿಡುಗಡೆ ಮಾಡಿದ್ದಾರೆ ಎಂದು ಶಾಸಕರೇ ಈ ಬಗ್ಗೆ ಹೇಳುತ್ತಿದ್ದಾರೆ. ಚುನಾವಣೆ ನಂತರ ನಮ್ಮ ಬಳಿ ದುಡ್ಡು ಇಲ್ಲ ಅನ್ನುತ್ತಾರೆ. ಮಾಗಡಿ ಶಾಸಕರು ಬಾಲಕೃಷ್ಣ ಅವರು ಕಾಂಗ್ರೆಸ್‌ಗೆ ಮತ ಹಾಕದೇ ಇದ್ದರೇ ಗ್ಯಾರಂಟಿ ಕ್ಯಾನ್ಸಲ್ ಮಾಡುತ್ತೇವೆ ಎಂದಿದ್ದಾರೆ.
ಯಾರಾದರೂ ಇವರ ಬಳಿ ಗ್ಯಾರಂಟಿ ಕೇಳಿದ್ರಾ, ಕಳೆದ ಚುನಾವಣೆಯಲ್ಲಿ ಯಾರ ಬಗ್ಗೆನೂ ನಾನು ಲಘುವಾಗಿ ಮಾತನಾಡಿಲ್ಲ. ಆ ಸಂಸ್ಕೃತಿ ನನ್ನದಲ್ಲ. ದೇವೇಗೌಡರ ಹೋರಾಟವನ್ನ ಸ್ಫೂರ್ತಿಯಾಗಿ ತೆಗೆದುಕೊಂಡು ನಾನು ಸೇವೆ ಮಾಡುತ್ತೇನೆ. ಪ್ರತಿಯೊಬ್ಬರನ್ನೂ ವಿಶ್ವಾಸದಿಂದ ತೆಗೆದುಕೊಂಡು ಹೋಗುತ್ತೇನೆ. ಮಂಡ್ಯದ ಜನ ಬಹಳ ಸೂಕ್ಷ್ಮ, ಭಾವನಾತ್ಮಕ ಜೀವಿಗಳು ಎಂದು ನೊಂದು ಹೇಳಿದರು.