ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲಾ ಅವರ ಸಮ್ಮುಖದಲ್ಲಿ ದಲಿತ ಸಂಘಟನೆಯ ಮುಖಂಡರಾದ ಸುದಾಮ್ ದಾಸ್, ನಿಂಬಣ್ಣ, ಬಿ. ಗೋಪಾಲ್, ಶ್ರೀನಿವಾಸ್ ಸೇರಿ ಅನೇಕ ದಲಿತ ನಾಯಕರು ಕಾಂಗ್ರೆಸ್ ಪಕ್ಷಕ್ಕೆ ಇಂದು ಸೇರ್ಪಡೆಯಾದರು. ಈ ವೇಳೆ ಮಾಜಿ ಉಪಮುಖ್ಯಮಂತ್ರಿ ಡಾ. ಜಿ.ಪರಮೇಶ್ವರ್, ಮಾಜಿ ಸಂಸದ ಕೆ.ಎಚ್. ಮುನಿಯಪ್ಪ ಸೇರಿ ಹಲವು ಮುಖಂಡರು ಉಪಸ್ಥಿತರಿದ್ದರು.
ಈ ವೇಳೆ ಮಾತನಾಡಿದ ರಣದೀಪ್ ಸುರ್ಜೇವಾಲಾ, ಕಾಂಗ್ರೆಸ್ ಪಕ್ಷದ ಹೊರಗಿರುವ ಪರಿಶಿಷ್ಟ ಜಾತಿ ಹಾಗೂ ಪಂಗಡಗಳ ಪರವಾಗಿ ಧ್ವನಿ ಎತ್ತಿರುವ ನಾಯಕರು ಕಾಂಗ್ರೆಸ್ ಪಕ್ಷವನ್ನು ಸೇರಿ ಶೋಷಿತ ವರ್ಗದ ಪರವಾಗಿ ಕೆಲಸ ಮಾಡಲು ತೀರ್ಮಾನಿಸಿದ್ದಾರೆ. ಬಿಜೆಪಿ ಸರ್ಕಾರದ ದೌರ್ಜನ್ಯಕ್ಕೆ ಒಳಗಾಗಿರುವ ಪರಿಶಿಷ್ಟ ಸಮುದಾಯದ ನಾಯಕರು ಇಂದು ಕಾಂಗ್ರೆಸ್ ಪಕ್ಷದ ಜತೆ ಕೆಲಸ ಮಾಡಲು ಮುಂದಾಗಿದ್ದಾರೆ. ಈ ನಾಯಕರು ಇಷ್ಟು ದಿನ ರಾಜಕೀಯ ಪಕ್ಷಗಳಿಂದ ಹೊರಗಿದ್ದು ಕೆಲಸ ಮಾಡಿದ್ದಾರೆ. ಈಗ ಕಾಂಗ್ರೆಸ್ ಪಕ್ಷದಿಂದ ಮಾತ್ರ ಈ ವರ್ಗದವರಿಗೆ ನ್ಯಾಯ ಸಿಗಲಿದೆ ಎಂದು ಅರಿತು ಪಕ್ಷ ಸೇರುತ್ತಿದ್ದಾರೆ ಎಂದರು.