ನವದೆಹಲಿ: ಕೈಕತ್ತು ಹಿಸುಕುವ ಪ್ರಯತ್ನ ಆಡಳಿತದಲ್ಲಿರುವ ಬಿಜೆಪಿ ಮಾಡುತ್ತಿದೆ ಎಂದು ಕಾಂಗ್ರೆಸ್ ನಾಯಕಿ ಸೋನಿಯಾ ಆರೋಪಿಸಿದ್ದಾರೆ.
ಪಕ್ಷದ ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸುವ ಮೂಲಕ ಆರ್ಥಿಕ ಸಂಕಷ್ಟ ತರುವ ಪ್ರಯತ್ನ ನಡೆದಿದೆ. ಇದಕ್ಕೆ ಪಕ್ಷ ತಲೆಬಾಗುವುದಿಲ್ಲ. ಬೇರೆ ಯಾವುದೇ ಪಕ್ಷಕ್ಕೂ ಈ ಸಮಸ್ಯೆ ಬಂದಿಲ್ಲ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಬಿಜೆಪಿ ಪ್ರಯತ್ನ ಇಡೀ ಪ್ರಜಾಪ್ರಭುತ್ವ ವ್ಯವಸ್ಥೆ ಅಸ್ತಿತ್ವಕ್ಕೆ ಧಕ್ಕೆ ತರಲಿದೆ. ಜನರು ಪಕ್ಷಕ್ಕೆ ನೀಡಿದ್ದ ದೇಣಿಗೆಯನ್ನು ಸರ್ಕಾರ ಹಿಡಿದಿಟ್ಟುಕೊಳ್ಳಲು ಯತ್ನಿಸುತ್ತಿದೆ. ಆದಾಯ ತೆರಿಗೆ ಇಲಾಖೆ ೧೧೫ ಕೋಟಿ ರೂ. ಹಿಡಿದಿಟ್ಟುಕೊಂಡಿದೆ. ಇದಕ್ಕೆ ಕಾರಣ ೨೦೧೮-೧೯ ರಲ್ಲಿ ೨೧೦ ಕೋಟಿ ರೂ. ತೆರಿಗೆ ಬಾಕಿ ಇದೆ ಎಂದರು.
ಕಾಂಗ್ರೆಸ್ ಅಜಯ್ ಮಾಕನ್ ಮಾತನಾಡಿ, ಪಕ್ಷದ ಮನವಿ ಇನ್ನೂ ತೆರಿಗೆ ಮೇಲ್ಮನವಿ ವಿಚಾರಣೆ ಇರುವಾಗಲೇ ಸರ್ಕಾರ ೬೫ ಕೋಟಿ ರೂ.ಗಳನ್ನು ಹಿಡಿದಿಟ್ಟುಕೊಂಡಿದೆ. ಪಕ್ಷ ಆರ್ಥಿಕ ಸಂಕಷ್ಟದಲ್ಲಿದ್ದರೂ ಪಕ್ಷ ಚುನಾವಣೆ ಪಕ್ಷದ ಪ್ರಚಾರ ಕಾರ್ಯವನ್ನು ನಿಲ್ಲಿಸಿಲ್ಲ. ಸುಪ್ರೀಂ ಕೋರ್ಟ್ ಚುನಾವಣಾ ಬಾಂಡ್ ಅಸಂವಿಧಾನಿಕ ಎಂದು ಹೇಳಿದ್ದರೂ ಆಡಳಿತ ಪಕ್ಷ ಅತಿ ಹೆಚ್ಚಿನ ನೆರವು ಪಡೆದುಕೊಂಡಿದೆ. ಇದಕ್ಕೆ ಪ್ರತಿಯಾಗಿ ಪ್ರಮುಖ ಪ್ರತಿಪಕ್ಷ ಕಾಂಗ್ರೆಸ್ ಆರ್ಥಿಕ ಸಂಕಷ್ಟದಿಂದ ಬಳಲುತ್ತಿದೆ ಎಂದರು. ನಮ್ಮ ಪಕ್ಷದ ಖಾತೆಯಲ್ಲಿ ೨೮೫ ಕೋಟಿ ರೂ. ಇದೆ. ಕಳೆದ ವಾರ ೧೯೯೪-೯೫ ಅವಧಿಯ ವಿವರ ಕೇಳಿದ್ದಾರೆ. ಇದನ್ನು ನೋಡಿದರೆ ಸ್ವಾತಂತ್ರ್ಯ ಪೂರ್ವದ ಕಾಲದ ವಿವರವನ್ನೂ ಕೇಳಬಹುದು ಎಂದೆನಿಸುತ್ತದೆ ಎಂದರು.