ಬೆಂಗಳೂರು: ಕೇಜ್ರಿವಾಲ್ ಅವರ ಜಾಮೀನನ್ನು ಕೂಡಲೇ ರದ್ದುಗೊಳಿಸಬೇಕು ಎಂದು ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಅವರು ಅಬಕಾರಿ ನೀತಿ ಹಗರಣದಲ್ಲಿ ಭಾಗಿಯಾಗಿರುವ ಯಾರನ್ನೂ ಕೂಡ ಭೇಟಿ ಮಾಡುವಂತಿಲ್ಲ ಎಂದು ಸರ್ವೋಚ್ಚ ನ್ಯಾಯಾಲಯ ತನ್ನ ಜಾಮೀನು ಶರತ್ತಿನಲ್ಲಿ ಅರವಿಂದ್ ಕೇಜ್ರಿವಾಲ್ ಅವರಿಗೆ ತಿಳಿಸಿತ್ತು. ಜಾಮೀನು ಸಿಕ್ಕಿ ಕೆಲವೇ ಗಂಟೆಗಳಲ್ಲಿ ಅಬಕಾರಿ ಹಗರಣದಲ್ಲಿ ಮತ್ತೋರ್ವ ಆರೋಪಿ ಆಗಿರುವ ಸಂಜಯ್ ಸಿಂಗ್ ಅವರನ್ನು ಕೇಜ್ರಿವಾಲ್ ಭೇಟಿ ಮಾಡಿದ್ದಾರೆ. ಇದು ಜಾಮೀನು ಷರತ್ತುಗಳ ಸ್ಪಷ್ಟ ಉಲ್ಲಂಘನೆ. ರಾಜ್ಯದ ಮುಖ್ಯ ಮಂತ್ರಿಯಾಗಿ ಸಾಂವಿಧಾನಿಕ ಹುದ್ದೆಯನ್ನು ಅಲಂಕರಿಸುವ ಕೇಜ್ರಿವಾಲ್ ಅವರಿಗೆ ಕನಿಷ್ಠ ಕಾನೂನು ಜ್ಞಾನ/ವಿವೇಚನೆ ಇಲ್ಲದಿರುವುದು ಖೇದನೀಯ. ಹಾಗೂ ಮುಖ್ಯ ಮಂತ್ರಿಯಾಗಿ ಅವರ ಅಧಿಕಾರವನ್ನು ದುರುಪಯೋಗ ಮಾಡಿಕೊಂಡಿದ್ದಾರೆ. ಜಾಮೀನು ಷರತ್ತನ್ನು ಉಲ್ಲಂಘಿಸಿದ ಕೇಜ್ರಿವಾಲ್ ಅವರ ಜಾಮೀನನ್ನು ಕೂಡಲೇ ರದ್ದುಗೊಳಿಸಬೇಕು ಎಂದಿದ್ದಾರೆ.