ಬಸವಕಲ್ಯಾಣ: ಕೆರೆಯಲ್ಲಿ ಈಜಲು ಹೋಗಿದ ಇಬ್ಬರು ಬಾಲಕಿಯರು ನೀರಲ್ಲಿ ಮುಳುಗಿ ಮೃತಪಟ್ಟ ಘಟನೆ ತಾಲೂಕಿನ ಫುಲ್ದರ್ ವಾಡಿ ಗ್ರಾಮದಲ್ಲಿ ನಡೆದಿದೆ. ಸಕ್ಕುಬಾಯಿ ಸುರೇಶ(15) ಹಾಗೂ ಚಾಂದನಿ ಬಾಬುರಾವ (15) ಕೆರೆ ನೀರಲ್ಲಿ ಮುಳುಗಿ ಮೃತಪಟ್ಟ ಬಾಲಕಿಯರಾಗಿದ್ದಾರೆ. 10ನೇ ತರಗತಿಯಲ್ಲಿ ಓದುತಿದ್ದ ಈ ಬಾಲಕಿಯರು, ಗ್ರಾಮದ ಬಳಿಯ ಕೆರೆಯಲ್ಲಿ ಈಜಲು ಹೋದ ವೇಳೆ ಆಕಸ್ಮಿಕವಾಗಿ ನೀರಿನಾಳದಲ್ಲಿ ಸಿಲುಕಿ ಮೃತಪಟ್ಟಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ಸ್ಥಳೀಯರು ತಕ್ಷಣ ನೀರಿಗಿಳಿದು ನೀರಲ್ಲಿ ಮುಳುಗಿದ ಬಾಲಕಿಯರ ರಕ್ಷಣೆಗೆ ಪ್ರಯತ್ನಿಸಿದ್ದಾರೆ. ಆದರೆ ಜನರು ಬರುವಷ್ಟರಲ್ಲಿ ಇವರಿಬ್ಬರು ಕೊನೆಯುಸಿರೆಳೆದಿದ್ದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಸುದ್ದಿ ತಿಳಿದ ಮಂಠಾಳ ಠಾಣೆ ಪಿಎಸ್ಐ ಶಿವಪ್ಪ ಮೇಟಿ ಹಾಗೂ ಪೊಲೀಸ್ ಅಧಿಕಾರಿಗಳ ತಂಡ ಸ್ಥಳಕ್ಕೆ ಭೇಟಿನೀಡಿ ಪರಿಶೀಲಿಸಿದ್ದು, ಈ ಕುರಿತು ಮಂಠಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಾಹಸಿ ಬಾಲಕ: ಕೆರೆ ನೀರಿನಲ್ಲಿ ಮುಳುಗುತಿದ್ದ ಬಾಲಕಿಯರ ರಕ್ಷಣೆಗೆ 14 ವರ್ಷದ ಬಾಲಕನೊಬ್ಬ ಶಕ್ತಿ ಮೀರಿ ಪ್ರಯತ್ನಿಸಿದ ಪ್ರಸಂಗ ಜರುಗಿದೆ. ಮೊದಲಿಗೆ ಸಕ್ಕುಬಾಯಿ ಹಾಗೂ ಚಾಂದನಿ ಎನ್ನುವ ಬಾಲಕಿಯವರು ನೀರಿಗೆ ಇಳಿದಿದ್ದು, ಇವರಿಬ್ಬರು ನೀರಿನಲ್ಲಿ ಸಿಲುಕಿ ಒದ್ದಾಡುತಿದ್ದರು. ಅಲ್ಲೆ ಇದ್ದ ಚಾಂದನಿ ಅವಳ ಕಿರಿಯ ಸಹೋದರ ಶಾಂತಪ್ಪ ಎನ್ನುವ ಬಾಲಕ ಹಾಗೂ ಮೃತ ಬಾಲಕಿಯರ ಸಹಪಾಠಿಯಾಗಿರುವ ಕೀರ್ತಿ ಸಕಾರಾಮ್ ಎನ್ನುವ ಬಾಲಕಿ ತಕ್ಷಣ ನೀರಿಗಿಳಿದು ಬಾಲಕಿಯರ ರಕ್ಷಣೆಗೆ ಹರಸಾಹಸ ಪಟ್ಟಿದ್ದಾರೆ. ರಕ್ಷಣೆಗೆ ಮುಂದಾದ ಕೀರ್ತಿ ಹಾಗೂ ಶಾಂತಪ್ಪ ಇಬ್ಬರಿಗೂ ಅಪಾಯ ಕಾಣಿಸಿದ ಹಿನ್ನೆಲೆಯಲ್ಲಿ ರಕ್ಷಣೆಯಿಂದ ಹಿಂದೆ ಸರಿದಿದ್ದಾರೆ. ಇದೆ ವೇಳೆ ಕೀರ್ತಿ ಸಹ ನೀರಿನಿಂದ ಹೊರಬರಲು ಸಾಧ್ಯವಾಗದೆ ಒದ್ದಾಡುತಿದ್ದಾಗ ಅಲ್ಲೆ ಇದ್ದ ಶಾಂತಪ್ಪ ಕೀರ್ತಿಗೆ ನೀರಿನಿಂದ ಹೊರ ತರುವ ಮೂಲಕ ರಕ್ಷಣೆ ಮಾಡಿದ್ದಾನೆ. ಬಾಲಕಿ ಕೀರ್ತಿ ಪ್ರಾಣ ರಕ್ಷಣೆ ಮಾಡಿದ ಬಾಲಕ ಶಾಂತಪ್ಪನ ಸಾಹಸಕ್ಕೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದಲ್ಲದೆ ಆತನಿಗೆ ಸರ್ಕಾರ ಗುರುತಿಸಿ, ಗೌರವಿಸಬೇಕಿದೆ ಎಂದು ಸ್ಥಳೀಯರು ಅಭಿಪ್ರಾಯ ಪಟ್ಟಿದ್ದಾರೆ.