ಮಂಗಳೂರು: ಕೆಎಸ್‌ಆರ್‌ಟಿಸಿ ರಾಜ್ಯದಲ್ಲಿ ಇಲೆಕ್ಟ್ರಿಕ್ ಬಸ್‌ಗಳನ್ನು ಸಂಚಾರಕ್ಕಿಳಿಸಲಿದ್ದು, ಒಟ್ಟು 350 ಇಲೆಕ್ಟ್ರಿಕ್ ಬಸ್(ಇ-ಬಸ್) ಖರೀದಿಗೆ ಸರ್ಕಾರ ಒಪ್ಪಂದ ಮಾಡಿಕೊಂಡಿದೆ ಎಂದು ಕರ್ನಾಟಕ ರಾಜ್ಯ ಸಾರಿಗೆ ನಿಗಮದ ಅಧ್ಯಕ್ಷ ಎಂ. ಚಂದ್ರಪ್ಪ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅ. 15ರ ವೇಳೆಗೆ ಮೊದಲ ಇ-ಬಸ್ ಪ್ರಾಯೋಗಿಕವಾಗಿ ಸಂಚಾರ ನಡೆಸಲಿದೆ ಕೋವಿಡ್‌ನಿಂದಾಗಿ ಹೊಸ ಬಸ್ ಖರೀದಿ ನಡೆದಿಲ್ಲ. ಈಗಾಗಲೇ 9 ಲಕ್ಷ ಕಿ.ಮೀ. ಸಂಚರಿಸಿದ ಬಸ್‌ಗಳನ್ನು ಮರಳಿ ಸುಸ್ಥಿತಿಗೆ ತಂದು ಮರು ಬಳಕೆ ಮಾಡಲಾಗುತ್ತಿದೆ. 650 ಹೊಸ ಬಸ್‌ಗಳ ಖರೀದಿಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಇ-ಬಸ್‌ಗಳು ಅತ್ಯಾಧುನಿಕ ಮಾದರಿಯದ್ದಾಗಿದ್ದು, ಮೊದಲ ಹಂತದಲ್ಲಿ 50 ಇ-ಬಸ್ ಆಗಮಿಸಲಿದೆ. 450 ಕಿ.ಮೀ. ವ್ಯಾಪ್ತಿ ಸಂಚಾರದ ಇ-ಬಸ್‌ಗಳನ್ನು ದೂರದ ರೂಟ್‌ಗಳ ಸಂಚಾರಕ್ಕೆ ಬಳಸಲಾಗುವುದು ಎಂದರು.
ಮೈಸೂರಿನಲ್ಲಿರುವ ನಗರ ಹಾಗೂ ಗ್ರಾಮೀಣ ಸಾರಿಗೆ ವಿಭಾಗವನ್ನು ವಿಲೀನಗೊಳಿಸಿ ಒಂದೇ ವಿಭಾಗ ಮಾಡಲಾಗಿದೆ. ಅದೇ ರೀತಿ ಬಿಎಂಟಿಸಿ ಹೊರತುಪಡಿಸಿ ಕೆಎಸ್‌ಆರ್‌ಟಿಸಿ ನಾಲ್ಕು ವಿಭಾಗಗಳನ್ನು ವಿಲೀನಗೊಳಿಸಿ ಒಂದೇ ವಿಭಾಗ ರೂಪಿಸುವ ಬಗ್ಗೆ ಶ್ರೀನಿವಾಸಮೂರ್ತಿ ಸಮಿತಿ ವರದಿಯಲ್ಲಿ ಪ್ರಸ್ತಾಪಿಸಲಾಗಿದೆ. ಇದರ ಸಾಧಕ, ಬಾಧಕ ಬಗ್ಗೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ನಾಲ್ಕು ವಿಭಾಗಗಳ ಸಾರಿಗೆ ಸಿಬ್ಬಂದಿಗೆ ಆರನೇ ವೇತನ ಆಯೋಗದ ಪ್ರಕಾರ ವೇತನ ಏರಿಕೆ ಮಾಡುವಂತೆ ಬೇಡಿಕೆ ಸಲ್ಲಿಸಿದ್ದಾರೆ. ಪ್ರಸಕ್ತ ಸಾರಿಗೆ ನೌಕರರಿಗೆ ಪ್ರತಿ ತಿಂಗಳ ಒಂದನೇ ತಾರೀಕಿಗೆ ವೇತನ ಪಾವತಿಯಾಗುತ್ತಿದೆ. ವೇತನ ಏರಿಕೆ ವಿಚಾರವನ್ನು ಸರ್ಕಾರ ಪರಿಶೀಲನೆ ನಡೆಸುತ್ತಿದ್ದು, ಮುಂದಿನ ದಿನಗಳಲ್ಲಿ ವೇತನ ಹೆಚ್ಚಳಕ್ಕೆ ಸರ್ಕಾರ ಕ್ರಮ ಕೈಗೊಳ್ಳುವ ವಿಶ್ವಾಸ ಇದೆ ಎಂದರು.
ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಇ-ಟಿಕೆಟ್ ಯೋಜನೆ ಜಾರಿಗೆ ತರುವ ನಿಟ್ಟಿನಲ್ಲಿ ಪ್ರಯತ್ನ ನಡೆಸಲಾಗುವುದು. ಈಗಾಗಲೇ ಕೆಲವು ಖಾಸಗಿ ಬಸ್‌ಗಳಲ್ಲಿ ಇ-ಟಿಕೆಟ್ ಸೌಲಭ್ಯ ಇರುವುದು ಗಮನಕ್ಕೆ ಬಂದಿದೆ ಎಂದ ಅವರು, ಕಳೆದ ವರ್ಷ ಚಾಲಕ-ನಿರ್ವಾಹಕರು ವರ್ಗಾವಣೆಗೊಂಡಿದ್ದರೂ ಅವರನ್ನು ಬಿಡುಗಡೆಗೊಳಿಸಿರಲಿಲ್ಲ. ಅವರನ್ನು ಕಳುಹಿಸಿದರೆ, ಇಲ್ಲಿ ಪರ್ಯಾಯ ವ್ಯವಸ್ಥೆ ಇಲ್ಲ. ಚಾಲಕ-ನಿರ್ವಾಹಕರ ಸೇವೆ ಕೆಎಸ್‌ಆರ್‌ಟಿಸಿ ಅತ್ಯಗತ್ಯವಾಗಿದ್ದು, ಪರ್ಯಾಯ ವ್ಯವಸ್ಥೆ ನಂತರವೇ ಅವರ ವರ್ಗಾವಣೆಯನ್ನು ಅನುಷ್ಠಾನಗೊಳಿಸಲಾಗುವುದು.
ಇಂಧನ ಬೆಲೆ ಏರಿಕೆಯಾದರೂ ಪ್ರಯಾಣಿಕರ ಟಿಕೆಟ್ ದರ ಏರಿಕೆ ಮಾಡಿಲ್ಲ. ಸಾರ್ವಜನಿಕರ ಹಿತದೃಷ್ಟಿಯಿಂದ ಪ್ರಯಾಣ ದರ ಏರಿಕೆ ಮಾಡದೇ ಇರಲು ನಿರ್ಧರಿಸಲಾಗಿದೆ ಎಂದ ಅವರು, ಕೆಎಸ್‌ಆರ್‌ಟಿಸಿ ಸೋಮವಾರ ಒಂದೇ ದಿನದಲ್ಲಿ 22.56 ಕೋಟಿ ರು. ಗರಿಷ್ಠ ಲಾಭ ಗಳಿಸಿದೆ. ಕಳೆದ ಎರಡು ವರ್ಷದ ಇತಿಹಾಸದಲ್ಲಿ ದಿನದಲ್ಲಿ ಗಳಿಸಿದ ಗಳಿಕೆಯಲ್ಲಿ ಇದು ದಾಖಲೆಯಾಗಿದೆ ಎಂದರು.