ಕೆಎಲ್‌ಇ ಆಸ್ಪತ್ರೆಯಲ್ಲಿ ಯಕೃತ್ ಮರುಜೋಡಣೆ ಯಶಸ್ವಿ

ಕೋರೆ
Advertisement

ಬೆಳಗಾವಿ: ಮೆದುಳು ನಿಷ್ಕ್ರಿಯಗೊಂಡಿದ್ದ ಅಥಣಿಯ 30 ವರ್ಷದ ಯುವಕನ ಲಿವರ್ ಅನ್ನು ಹಾವೇರಿಯ 19 ವರ್ಷದ ಯುವಕನಿಗೆ ಮರುಜೋಡಣೆ ಮಾಡುವಲ್ಲಿ ಆಸ್ಪತ್ರೆಯ ತಜ್ಞ ವೈದ್ಯರು ಯಶಸ್ವಿಯಾಗಿದ್ದಾರೆ. ಉತ್ತರ ಕರ್ನಾಟಕ, ಗೋವಾ ಹಾಗೂ ದಕ್ಷಿಣ ಮಹಾರಾಷ್ಟ್ರದಲ್ಲಿ ನಡೆದ ಪ್ರಥಮ ಲಿವರ್ ಕಸಿ ಇದಾಗಿದೆ ಎಂದು ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ. ಪ್ರಭಾಕರ ಕೋರೆ ಹೇಳಿದರು.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಎಲ್‌ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರ ಈಗ ಮತ್ತೊಂದು ಯಶಸ್ಸಿನ ಗುರಿ ಮುಟ್ಟಿ, ಲಿವರ್ ಕಸಿ ಮಾಡುವುದರ ಮೂಲಕ ವ್ಯಕ್ತಿಯೊಬ್ಬರಿಗೆ ಪುನರ್ಜನ್ಮ ನೀಡಿದೆ ಎಂದರು.
ಅಥಣಿಯ ಡಾ. ರವಿ ಪಾಂಗಿ ಅವರ ಅನ್ನಪೂರ್ಣ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಾಗಿದ್ದ 30 ವರ್ಷದ ವ್ಯಕ್ತಿಯ ಮೆದುಳು ನಿಷ್ಕ್ರಿಯಗೊಂಡಾಗ ಆ ರೋಗಿಯ ಲಿವರ್ ಅನ್ನು ತೆಗೆದು 19 ವರ್ಷದ ಯುವಕನಿಗೆ ಜೋಡಿಸಲಾಗಿದ್ದು ಯುವಕ ಸಂಪೂರ್ಣವಾಗಿ ಗುಣಮುಖಗೊಂಡಿದ್ದು, ಆಸ್ಪತ್ರೆಯು ಮತ್ತೊಂದು ಮೈಲುಗಲ್ಲನ್ನು ಸಾಧಿಸಿದೆ. 10 ದಿನಗಳ ಬಳಿಕ ಆಸ್ಪತ್ರೆಯಿಂದ ಯುವಕ ಬಿಡುಗಡೆಗೊಳ್ಳಲಿದ್ದಾನೆ ಎಂದರು.