ಕೃಷ್ಣನಗರಿಯಲ್ಲಿ ಅಷ್ಟಮಿ ಸಂಭ್ರಮ

Advertisement

ಉಡುಪಿ: ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ಬುಧವಾರ ಇಲ್ಲಿನ ಶ್ರೀ ಕೃಷ್ಣಮಠದಲ್ಲಿ ಸಂಭ್ರಮದಿಂದ ಆಚರಿಸಲಾಯಿತು. ಪರ್ಯಾಯ ಕೃಷ್ಣಾಪುರ ಶ್ರೀ ವಿದ್ಯಾಸಾಗರತೀರ್ಥ ಶ್ರೀಪಾದರ ಚತುರ್ಥ ಪರ್ಯಾಯದ ದ್ವೈವಾರ್ಷಿಕ ಪರ್ಯಾಯ ಪೂಜಾ ಕೈಂಕರ್ಯದ ಎರಡನೇ ವರ್ಷದ ಕೃಷ್ಣ ಜಯಂತಿ ಸಂಭ್ರಮ ಇದಾಗಿದ್ದು, ಶ್ರೀಗಳ ನೇತೃತ್ವದಲ್ಲಿ ಅಷ್ಟದಿನೋತ್ಸವವಾಗಿ ಕೃಷ್ಣ ಜಯಂತಿ ಆಚರಿಸಲಾಗುತ್ತಿದೆ.
ಶ್ರೀಮಠವನ್ನು ವಿಶೇಷವಾಗಿ ಹೂಗಳಿಂದ ಅಲಂಕರಿಸಲಾಗಿದ್ದು, ಸಹಸ್ರಾರು ಮಂದಿ ಭಕ್ತರು ಸರದಿಯ ಸಾಲಿನಲ್ಲಿ ಆಗಮಿಸಿ ಕೃಷ್ಣ ದರ್ಶನ ಪಡೆದರು. ಸೂಕ್ತ ಪೊಲೀಸ್ ಭದ್ರತೆ ನಿಯೋಜಿಸಲಾಗಿತ್ತು. ಶ್ರೀಕೃಷ್ಣನನ್ನು ಬೆಣ್ಣೆ ಮೆಲ್ಲುವ ಅಲಂಕಾರ ಮಾಡಲಾಗಿತ್ತು. ಶ್ರೀಗಳಿಂದ ವಿಶೇಷ ಪೂಜೆ ನಡೆಯಿತು. ವಿವಿಧ ಭಜನಾ ತಂಡಗಳಿಂದ ಭಜನೆ, ಸಂಕೀರ್ತನೆ, ವಿಷ್ಣು ಸಹಸ್ರನಾಮ ಪಠಣ ಇತ್ಯಾದಿ ನಡೆಯಿತು. ಮುದ್ದುಕೃಷ್ಣ ಸ್ಪರ್ಧೆ ಆಯೋಜಿಸಲಾಗಿದ್ದು, ವಿವಿಧ ವಯೋಮಾನದ ಪುಟಾಣಿಗಳು ಭಾಗವಹಿಸಿದ್ದವು. ಕೃಷ್ಣಾಷ್ಟಮಿ ಹಿನ್ನೆಲೆಯಲ್ಲಿ ಶ್ರೀಮಠದಲ್ಲಿ ನಿರ್ಜಲ ಉಪವಾಸವಿದ್ದು, ಭಕ್ತಾದಿಗಳಿಗೆ ಭೋಜನ ಪ್ರಸಾದ ಇರಲಿಲ್ಲ. ರಾತ್ರಿ ಪೂಜೆ ಸಂದರ್ಭದಲ್ಲಿ ನೈವೇದ್ಯ ಸಮರ್ಪಣೆಗಾಗಿ ವಿವಿಧ ಉಂಡೆಗಳ ಸಿದ್ಧತೆಗಾಗಿ ಪರ್ಯಾಯ ಕೃಷ್ಣಾಪುರ ಶ್ರೀ ವಿದ್ಯಾಸಾಗರತೀರ್ಥ ಶ್ರೀಪಾದರು ಉಂಡೆ ಕಟ್ಟಲು ಚಾಲನೆ ನೀಡಿದರು. ಶ್ರೀಮಠದ ಆವರಣದಲ್ಲಿ ಮಡಿಕೆ ಒಡೆಯುವುದು, ರಂಗವಲ್ಲಿ, ಹೂಕಟ್ಟುವುದು, ಮೊಸರು ಕಡಿಯುವುದು ಇತ್ಯಾದಿ ಸ್ಪರ್ಧೆಗಳು ನಡೆದವು. ರಾಜಾಂಗಣದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿತ್ತು. ನಗರದ ತುಂಬೆಲ್ಲ ವಿವಿಧ ವೇಷಗಳು, ಹುಲಿವೇಷ ಇತ್ಯಾದಿಗಳಿಂದಾಗಿ ಉಡುಪಿಗೆ ಉಡುಪಿಯೇ ಅಷ್ಟಮಿ ಸಂಭ್ರಮದಲ್ಲಿ ಮಿಂದೆದ್ದಂತಿತ್ತು.

ಗುರುವಾರ ನಡೆಯುವ ವಿಟ್ಲಪಿಂಡಿ ಮಹೋತ್ಸವಕ್ಕಾಗಿ ಸಿದ್ಧಗೊಂಡ ಶ್ರೀಕೃಷ್ಣನ ಮೃಣ್ಮಯ ಮೂರ್ತಿ

ಪುತ್ತಿಗೆ ಶ್ರೀಗಳಿಂದ ಲಡ್ಡೋತ್ಸವ : ಶ್ರೀಕೃಷ್ಣ ಜಯಂತಿ ಸಂದರ್ಭದಲ್ಲಿ ಬೆಂಗಳೂರಿನ ಪುತ್ತಿಗೆ ಮಠದ ಶ್ರೀ ಗೋವರ್ಧನ ಕ್ಷೇತ್ರದಲ್ಲಿ ಭಾವಿ ಪರ್ಯಾಯ ಪುತ್ತಿಗೆ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರಿಂದ ಶ್ರೀಕೃಷ್ಣನಿಗೆ ಸಮರ್ಪಿತವಾದ ವೈವಿಧ್ಯಮಯ ಭಕ್ಷ್ಯಗಳ ಉತ್ಸವ ಲಡ್ಡೋತ್ಸವವನ್ನು ಬುಧವಾರ ಮಹಾನಗರಪಾಲಿಕೆ ಮಾಜಿ ಆಡಳಿತ ನಾಯಕ ಎನ್.ಆರ್. ರಮೇಶ್ ಉದ್ಘಾಟಿಸಿದರು.
ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಸಾನ್ನಿಧ್ಯ ವಹಿಸಿದ್ದರು. ಈ ಸಂದರ್ಭದಲ್ಲಿ ಕೋಟಿ ಗೀತಾ ಲೇಖನ ಯಜ್ಞ ಹಾಗೂ ಸುಗುಣಮಾಲಾ ಮಾಸಪತ್ರಿಕೆಯ ಕಾರ್ಯಾಲಯ ತೆರೆಯಲಾಯಿತು

ಪಲಿಮಾರು ಶ್ರೀಗಳಿಂದ ಲಕ್ಷಾರ್ಚನೆ: ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಚೆನ್ನೈ ಅಣ್ಣಾನಗರದ ಪಲಿಮಾರು ಮಠದಲ್ಲಿ ಚಾತುರ್ಮಾಸ್ಯ ವ್ರತನಿರತರಾಗಿರುವ ಪಲಿಮಾರು ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು ಬುಧವಾರ ಶ್ರೀಮಠದ ಪಟ್ಟದದೇವರಾದ ಶ್ರೀರಾಮ- ಕೃಷ್ಣ ದೇವರಿಗೆ ಲಕ್ಷಾರ್ಚನೆ ನಡೆಸಿ, ಮಹಾಪೂಜೆ ನೆರವೇರಿಸಿದರು.