ಕೃಷಿ ಶೋಕೀನ್ `ಶೌಖತ್ ಅಲಿ’

Advertisement

ನವಲಗುಂದ: ಜಮೀನಿನಲ್ಲಿ ಉಳುಮೆ ಮಾಡದೇ ಪಟ್ಟಣ ಸೇರುತ್ತಿರುವಂತಹ ಕಾಲಘಟ್ಟದಲ್ಲಿ ನವಲಗುಂದ ತಾಲೂಕಿನ ನಾಗನೂರ ಗ್ರಾಮದ ಪಿಎಚ್‌ಡಿ ಪದವೀಧರ ಶೌಕತ್‌ಅಲಿ ಲಂಬೂನವರ ಸಮಗ್ರ ಕೃಷಿಯಲ್ಲಿ ಸಾಧನೆ ಮಾಡುವುದರ ಮೂಲಕ ಯುವಕರಿಗೆ ಮಾದರಿಯಾಗಿದ್ದಾರೆ.
ಕೃಷಿಯತ್ತ ಒಲವು ಕಡಿಮೆಯಾಗುತ್ತಿರುವ ದಿನಮಾನಗಳಲ್ಲಿ ಪಿಎಚ್.ಡಿ ಪದವೀಧರ ಲಂಬೂನವರ ಅವರು ಕೃಷಿಯಲ್ಲೇ ಬದುಕು ಕಟ್ಟಿಕೊಂಡಿದ್ದು, ತಮ್ಮ ಎರಡು ಎಕರೆ ಜಮೀನಿನಲ್ಲಿ ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಂಡು ಯಶಸ್ಸು ಕಂಡಿದ್ದಾರೆ.
ತರಹೇವಾರಿ ಬೆಳೆ
೨೦೨೨-೨೩ನೇ ಸಾಲಿನ ಜಿಲ್ಲಾ ಮಟ್ಟದ ಶ್ರೇಷ್ಟ ಕೃಷಿಕ ಪ್ರಶಸ್ತಿ ಪಡೆದಿರುವ ಶೌಕತ್‌ಅಲಿ, ತಮ್ಮ ಜಮೀನಿನಲ್ಲಿ ಶ್ರೀಗಂಧ, ಹೆಬ್ಬೇವು, ತೆಂಗು, ಸೇಬು, ಅಡಿಕೆ, ರಕ್ತ ಚಂದನ, ರೋಜ್ ವುಡ್, ತೇಗ, ಸೀತಾಫಲ, ತೈವಾನ ಪಿಂಕ್, ಲಖನೌ ೪೯, ಮೋಸಂಬಿ, ಚರಿ, ಚಿಕ್ಕು, ಚಕ್ಕೋತಾ, ದಾಳಿಂಬೆ, ಗೋಡಂಬಿ, ಪಪ್ಪಾಯಿ, ಯಾಲಕ್ಕಿ ಬಾಳೆಹಣ್ಣು, ಜಂಬೂ ನೆರಲೇ, ಗಜಲಿಂಬೆ, ಡ್ರ‍್ಯಾಗನ್ ಫ್ರುಟ್, ಲಿಂಬೆ, ನೆಲ್ಲಿ, ಬೆಟ್ಟದ ನೆಲ್ಲಿ, ನುಗ್ಗಿ, ಕುದುರೆ ಮೆಂತೆ, ಹುಣಸೆ ಬೆಳೆ ಬೆಳೆದು ಸೈ ಎನ್ನಿಸಿಕೊಂಡಿದ್ದಾರೆ.
ಇನ್ನು ತರಕಾರಿ ಬೆಳೆಯುವಲ್ಲೂ ಹಿಂದುಳಿಯದೇ ಬದನೇಕಾಯಿ, ಹಿರೇಕಾಯಿ, ಟೊಮೆಟೊ, ಬೆಂಡಿ, ಚವಳಿ, ಸಬ್ಬಸಗಿ, ಕೊತಂಬರಿ, ಕಿರಿಕಸಾಲಿ, ರಾಜಗಿರಿ, ಹರವಿ ಸೇರಿದಂತೆ ಹಲವಾರು ತರಕಾರಿ ಬೆಳೆಗಳನ್ನು ಬೆಳೆಯುವ ಮೂಲಕ ಇತರರು ಹುಬ್ಬೇರಿಸುವಂತೆ ಮಾಡಿದ್ದಾರೆ.
ತಾವು ಬೆಳೆದ ನುಗ್ಗೆಕಾಯಿ ಬೀಜಗಳನ್ನು ಸ್ಥಳೀಯ ರೈತರಿಗೆ ಕಡಿಮೆ ದರದಲ್ಲಿ ಮಾರಾಟ ಮಾಡುತ್ತಿದ್ದಾರೆ. ದಿನನಿತ್ಯದ ಖರ್ಚು ನಿಭಾಯಿಸಲು ಜವಾರಿ ಕೋಳಿ ಸಾಕಾಣಿಕೆ ಮಾಡಿ ಅವುಗಳಿಂದ ಬರುವಂತಹ ಮೊಟ್ಟೆಗಳನ್ನು ಕಡಿಮೆ ದರದಲ್ಲಿ ಮಾರಾಟ ಮಾಡುತ್ತಿದ್ದಾರೆ. ೨೦೧೭ರಲ್ಲಿ ಗ್ರಾಮ ಪಂಚಾಯತಿ ನರೇಗಾ ಯೋಜನೆಯಡಿ ಕೃಷಿ ಹೊಂಡ ನಿರ್ಮಾಣ ಮಾಡಿ ದೇಶಪಾಂಡೆ ಫೌಂಡೇಶನ ನೆರವಿನೊಂದಿಗೆ ಮೀನು ಸಾಕಾಣಿಕೆ ಮಾಡುತ್ತಿದ್ದಾರೆ.
ಹತ್ತಿ, ಗೋವಿನ ಜೋಳಗಳನ್ನು ತಮ್ಮ ಸಮಗ್ರ ಕೃಷಿ ಪದ್ಧತಿಯಲ್ಲಿ ಅಳವಡಿಸಿಕೊಂಡಿದ್ದರಿಂದ ವಾರ್ಷಿಕವಾಗಿ ೩ರಿಂದ ೪ ಲಕ್ಷದವರೆಗೂ ಆದಾಯ ಪಡೆಯುತ್ತಿದ್ದು, ಕಷ್ಟದ ಪರಿಸ್ಥಿತಿಯಲ್ಲಿಯೂ ಸಹ ಕೃಷಿಯಲ್ಲಿ ಸಂಶೋಧನೆಗೆ ಇಳಿದಿದ್ದಾರೆ ಎಂಬುವುದು ಸಾಮಾನ್ಯ ಮಾತಲ್ಲ.

ಎರೆಹುಳ ಘಟಕ ಸ್ಥಾಪನೆ
ತಮ್ಮ ಜಮೀನಿನಲ್ಲಿ ವಿಶೇಷ ಎರೆಹುಳು ಘಟಕ ಸ್ಥಾಪಿಸಿರುವ ಶೌಕತ್‌ಅಲಿ, ನಿರೂಪಯುಕ್ತ ವಸ್ತುಗಳನ್ನು ಬಳಸಿಕೊಂಡು ಗೊಬ್ಬರ ತಯಾರಿಸುವುದರ ಜೊತೆಗೆ ಹಸಿರೇಲೆ ಗೊಬ್ಬರ ಮಾಡಿ ಭೂಮಿಯ ಫಲವತ್ತತೆ ಹೆಚ್ಚುವಂತೆ ಮಾಡಿದ್ದಾರೆ. ಅಲ್ಲದೇ, ರಾಸಾಯನಿಕ ಸಿಂಪಡಣೆ ಮಾಡದೇ, ಸಾವಯವ ಕೃಷಿ ಪದ್ಧತಿ ಅಳವಡಿಸಿಕೊಂಡು ಉತ್ತಮ ಫಸಲು ಪಡೆಯುತ್ತಿದ್ದಾರೆ.

ಸಮಗ್ರ ಕೃಷಿ ಪದ್ಧತಿಯಿಂದ ಆದಾಯ ದ್ವಿಗುಣ
ತೋಟದಲ್ಲಿ ಯಾವುದೇ ವಿದ್ಯುತ್ ಶಕ್ತಿ, ಆಯಿಲ್ ಮಷಿನ್ ಬಳಸದೇ ಕೃಷಿ ಹೋಂಡದ ನೀರನ್ನು ಎತ್ತಲು ಚಿಕ್ಕದಾದ ಸೋಲಾರ್ ಪ್ಯಾನಲ್ ಬಳಸುತ್ತೇನೆ. ನಿರೂಪಯುಕ್ತ ವಸ್ತುಗಳನ್ನು ಜೋಡಣೆ ಮಾಡಿಕೊಂಡು ಭೂಮಿಯ ಸಮಪಾತದಡಿಯಲ್ಲಿ ೩೫೦ ರಿಂದ ೪೫೦ ಅಡಿಗಳಷ್ಟು ಹಾಗೂ ಭೂಮಿಯಿಂದ ಎತ್ತರಕ್ಕೆ ೨೫ ಅಡಿ ನೀರು ಚಿಮ್ಮಿಸಲಾಗುತ್ತಿದೆ. ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಂಡಲ್ಲಿ ಆದಾಯ ದ್ವಿಗುಣಗೊಳಿಸಬಹುದು.
ಶೌಕತಅಲಿ ಎಚ್. ಲಂಬೂನವರ, ಪ್ರಗತಿಪರ ರೈತ, ನಾಗನೂರ.

ಶೌಕತ್‌ಅಲಿ ಲಂಬೂನವರ ಅವರು ಪಿಎಚ್‌ಡಿ ಪದವಿ ಪಡೆದರೂ ನೌಕರಿಗೆ ಹೋಗದೇ ಕೃಷಿ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದಾರೆ. ಎರಡು ಎಕರೆ ಜಮೀನಿನಲ್ಲಿ ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಂಡು ದೊಡ್ಡ ಮಟ್ಟದ ಸಾಧನೆ ಮಾಡಿದ್ದಾರೆ. ಅವರ ನಿರಂತರ ಶ್ರಮಕ್ಕೆ ರಾಜ್ಯ ಸರ್ಕಾರ ರಾಜ್ಯ ಮಟ್ಟದ ಕೃಷಿ ಪ್ರಶಸ್ತಿ ವಿತರಣೆ ಮಾಡಲಿ.
– ಮಾಬುಸಾಬ ಎಂ. ಯರಗುಪ್ಪಿ, ಸಮಾಜ ಸೇವಕರು, ನವಲಗುಂದ.