ದಾವಣಗೆರೆ: ನಗರದ ಅಶೋಕ ಚಿತ್ರಮಂದಿರದ ಬಳಿ ನಿರ್ಮಿಸುತ್ತಿರುವ ರೈಲ್ವೆ ಅಂಡರ್ಪಾಸ್ ಕಾಮಗಾರಿ ಹಂತದಲ್ಲಿಯೇ ಕುಸಿದಿರುವುದು ಸಂಸದ ಜಿ.ಎಂ. ಸಿದ್ದೇಶ್ವರ್ ಅವರ ಶೇ.೪೦ರಷ್ಟು ಕಮಿಷನ್ಗೆ ಸಾಕ್ಷಿಯಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ಹಾಗೂ ಪಾಲಿಕೆ ವಿಪಕ್ಷ ಟೀಕಿಸಿದೆ.
ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ. ಶೆಟ್ಟಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಜಿ. ಶಿವಕುಮಾರ್, ಆಯೂಬ್ ಪೈಲ್ವಾನ್ ಹಾಗೂ ಪಾಲಿಕೆ ವಿಪಕ್ಷ ನಾಯಕ ಗಡಿಗುಡಾಳ್ ಮಂಜುನಾಥ್ ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿದ್ದು, ಅಂಡರ್ ಪಾಸ್ ದಿಢೀರ್ ಕುಸಿಯಲು ಕಳಪೆ ಗುಣಮಟ್ಟ ಕಾರಣ. ಇದು ಅವೈಜ್ಞಾನಿಕ ಕಾಮಗಾರಿ ಎಂದು ಹರಿಹಾಯ್ದಿದ್ದಾರೆ.
ಜಿಲ್ಲೆಯಲ್ಲಿ ಭ್ರಷ್ಟಾಚಾರದ ಪಿತಾಮಹ ಆಗಿರುವ ಸಂಸದ ಜಿ.ಎಂ. ಸಿದ್ದೇಶ್ವರ್, ಭ್ರಷ್ಟ ಅಧಿಕಾರಿಗಳನ್ನು ರಕ್ಷಿಸುವುದರ ಜತೆಗೆ ಕಾಮಗಾರಿಯಲ್ಲೂ ಸಹ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ ಎಂಬುದಕ್ಕೆ ಈ ಕಾಮಗಾರಿಯೇ ಸಾಕ್ಷಿಯಾಗಿದೆ. ಸಿದ್ದೇಶ್ವರ್ ಅವಧಿಯಲ್ಲಿ ನಡೆದಿರುವ ಎಲ್ಲಾ ಕಾಮಗಾರಿಗಳ ಬಗ್ಗೆ ಉನ್ನತಮಟ್ಟದ ತನಿಖೆಯಾಗಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಡಿಸಿಎಂ ಟೌನ್ ಶಿಪ್, ಎಪಿಎಂಸಿ ಸೇತುವೆ ಕೆಳಗಿನ ಅಂಡರ್ ಬ್ರಿಡ್ಜ್ ಹಾಗೂ ಗೀತಾಂಜಲಿ ಥಿಯೇಟರ್ ಎದುರಿನ ರೈಲ್ವೆ ಕೆಳ ಸೇತುವೆ ಕುಸಿದಿರುವ ಕಾಮಗಾರಿಗಳು ಕಪ್ಪು ಚುಕ್ಕೆಗಳು. ಬಿಜೆಪಿಯ ಅವೈಜ್ಞಾನಿಕ ಈ ಮೂರು ಕಾಮಗಾರಿಗಳಿಂದ ಜನರು ಸಮಸ್ಯೆ ಎದುರಿಸುವಂತಾಗಿದೆ. ಈ ಎಲ್ಲಾ ಕಾಮಗಾರಿಗಳ ಬಗ್ಗೆ ತನಿಖೆ ನಡೆಯಬೇಕು. ವಿರೋಧ ಪಕ್ಷ ಸತ್ಯ ಹೊರತೆಗೆದರೆ ಉಡಾಫೆ ಮಾತನಾಡುವ ಸಂಸದರಿಗೆ ನಾಚಿಕೆಯಾಗಬೇಕು ಎಂದು ಕಿಡಿಕಾರಿದ್ದಾರೆ.