ಅಭಯ ರಾಮ ಮನಗೂಳಿ
ಬಾಗಲಕೋಟೆ: ಚುನಾವಣೆ ನೀತಿ ಸಂಹಿತೆ ಜಾರಿ ನಂತರ ಬಾಗಲಕೋಟೆ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ೨೬ ಕಡೆಗಳಲ್ಲಿ ತೆರೆಯಲಾಗಿರುವ ಚೆಕ್‌ಪೋಸ್ಟ್‌ಗಳ ಮುಖಾಂತರ ೧.೭೦ ಕೋಟಿ ರೂ. ದಾಖಲೆ ಇಲ್ಲದ ನಗದು ವಶಪಡಿಸಿಕೊಳ್ಳಲಾಗಿದೆ. ಆದರೆ ಈ ಮೊತ್ತ ಯಾವುದೇ ರಾಜಕೀಯ ಪಕ್ಷದ ಧುರೀಣರಿಗೆ ಸೇರಿದ್ದಲ್ಲ; ಜನಸಾಮಾನ್ಯರಿಗೆ ಸೇರಿದ್ದು.
ಬರಗಾಲದಿಂದ ಮೊದಲೇ ತತ್ತರಿಸಿರುವ ಗ್ರಾಮೀಣ ಭಾಗದ ಜನ ತಮ್ಮ ಜಾನುವಾರುಗಳನ್ನು ಮಾರಾಟ ಮಾಡುತ್ತಿದ್ದು, ಹೀಗೆ ಮಾರಾಟ ಮಾಡಿದವರ ಹಣ ಮನೆ ಸೇರದೆ ಸರ್ಕಾರದ ಖಜಾನೆ ಸೇರಿದೆ. ಹಣ ಕಳೆದುಕೊಂಡಿರುವ ಬಡಜನ ಈಗ ಜಿಲ್ಲಾಡಳಿತ ಭವನಕ್ಕೆ ಕಣ್ಣೀರು ಸುರಿಸುತ್ತ ಬರುತ್ತಿದ್ದಾರೆ.
ಜಿಲ್ಲೆಯ ಕೆರೂರ, ಅಮೀನಗಡ, ಮುಧೋಳ ಸೇರಿದಂತೆ ನಾನಾ ಕಡೆಗಳಲ್ಲಿ ಕುರಿಗಳ ಸಂತೆ ದೊಡ್ಡ ಮಟ್ಟದಲ್ಲಿ ಜರುಗುತ್ತದೆ. ತೀವ್ರ ಬರದಿಂದ ತತ್ತರಿಸಿರುವ ಜನ ಕಷ್ಟಕಾಲಕ್ಕೆ ಆದೀತು ಎಂಬ ಕಾರಣಕ್ಕೆ ಮಾರಾಟಕ್ಕೆ ಬಂದರೆ ತಮಗೆ ಅರಿವಿಲ್ಲದಂತೆ ಸಮಸ್ಯೆಗೆ ಸಿಲುಕಿ ಹಾಕಿಕೊಳ್ಳುತ್ತಿದ್ದಾರೆ. ಕುರಿ ಸಂತೆಯಲ್ಲಿ ಮಾರಾಟ ಮಾಡಿ ಅದರಿಂದ ಬಂದಿರುವ ಹಣ ಎಂಬ ದಾಖಲೆಗಳನ್ನು ನೀಡಿದರೂ ಸಿಬ್ಬಂದಿ ಕರುಣೆ ತೋರದೆ ಸಿಕ್ಕ ಹಣವನ್ನೆಲ್ಲ ಸೀಜ್ ಮಾಡುತ್ತಿದ್ದಾರೆ ಎಂದು ಜನ ಅಳಲು ತೋಡಿಕೊಳ್ಳುತ್ತಿದ್ದಾರೆ.
೧೪೭ ಪ್ರಕರಣ ದಾಖಲು: ೫೦ ಸಾವಿರ ರೂ. ಮೇಲ್ಪಟ್ಟು ಹಣವಿದ್ದರೆ ಅದಕ್ಕೆ ದಾಖಲೆಗಳನ್ನು ಕಡ್ಡಾಯವಾಗಿ ತೋರಿಸಬೇಕಿದೆ. ಆದರೆ ತಮ್ಮ ದವಸಧಾನ್ಯ, ಕುರಿ, ಪಶುಗಳ ಮಾರಾಟಕ್ಕೆ ಬಂದ ಹಳ್ಳಿ ಜನರೇ ಹೆಚ್ಚು ಸಮಸ್ಯೆಗೆ ಸಿಲುಕಿ ಹಾಕಿಕೊಂಡಿದ್ದಾರೆ. ನೀತಿ ಸಂಹಿತೆ ಜಾರಿ ನಂತರ ಜಿಲ್ಲೆಯಲ್ಲಿ ಒಟ್ಟು ೧೪೭ ಪ್ರಕರಣಗಳು ದಾಖಲಾಗಿದ್ದು, ಅಷ್ಟೂ ಪ್ರಕರಣಗಳಲ್ಲಿ ಸಿಲುಕಿಕೊಂಡವರಿಗೆ ಯಾವುದೇ ರಾಜಕೀಯ ಹಿನ್ನೆಲೆ ಇಲ್ಲ. ರಾಜಕೀಯ ಹಿನ್ನೆಲೆ ಇರುವ ಯಾರೊಬ್ಬರೂ ಸಿಲುಕಿಕೊಂಡಿಲ್ಲ. ಏನೂ ಅರಿಯದ ಮುಗ್ಧ ಜನರೇ ಹಣದೊಂದಿಗೆ ಚೆಕ್‌ಪೋಸ್ಟ್ಗಳಲ್ಲಿ ಸಿಕ್ಕಿಬಿದ್ದಿದ್ದಾರೆ. ಸಿಕ್ಕ ಮೊತ್ತವೂ ೫೦ ರಿಂದ ೭೦ ಸಾವಿರ ರೂ.ಗಳ ಒಳಗಿದ್ದು, ಚೆಕ್‌ಪೋಸ್ಟ್ ಸಿಬ್ಬಂದಿಗೆ ಕಾಡಿಬೇಡಿದರೂ ಅವರು ಬಿಟ್ಟು ಕಳುಹಿಸಿಲ್ಲ.