ಕುಷ್ಟಗಿ: ಎಚ್.ಡಿ ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಒಳ್ಳೆಯ ಕೆಲಸ ಮಾಡಿದ್ದಾರೆ ಎಂದು ಅವರ ಕೆಲಸ ಕಾರ್ಯಗಳನ್ನು ಮೆಚ್ಚಿಕೊಂಡ ಯುವತಿ ಎಚ್.ಡಿ, ಕುಮಾರಸ್ವಾಮಿಯವರಿಗೆ ಐದು ಸಾವಿರ ರೂಪಾಯಿ ದೇಣಿಗೆ ನೀಡುವುದರ ಮೂಲಕ ಎಲ್ಲರ ಹುಬ್ಬೇರುವಂತೆ ಮಾಡಿದ್ದಾಳೆ.
ತಾಲೂಕಿನ ತಾವರಗೇರಾ ಮಾರ್ಗವಾಗಿ ಕುಷ್ಟಗಿ ಪಟ್ಟಣಕ್ಕೆ ಆಗಮಿಸುವ ವೇಳೆ ಗುಮಗೇರಾ ಗ್ರಾಮದ ಯುವತಿ ಸುಜಾತ ಶಿವಪುತ್ರಪ್ಪ ಗುಮಗೇರಿ ತಾನು ಕೂಡಿಟ್ಟಿದ್ದ 5000 ಹಣ ಕೊಡಬೇಕೆಂಬ ಉದ್ದೇಶದಿಂದಾಗಿ ತಮ್ಮ ಮನೆ ಮುಂದೆ ಹೋಗುತ್ತಿದ್ದ ಕುಮಾರಸ್ವಾಮಿ ಅವರನ್ನು ಮನೆ ಮುಂದೆ ನಿಲ್ಲಿಸಿ ಎಳನೀರು ಕೊಟ್ಟು ಮಾಲಾರ್ಪಣೆ ಮಾಡಿದ್ದಾಳೆ.
ಈ ವೇಳೆ ಸುಜಾತ, ನೀವು ಕಾಂಗ್ರೆಸ್ ಮತ್ತು ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ರೈತರ ಸಾಲ ಸೇರಿದಂತೆ ಇನ್ನಿತರ ಜನಪರ ಯೋಜನೆಗಳನ್ನು ಜಾರಿಗೆ ತಂದಿದ್ದೀರಿ. ನೀವು ಮುಖ್ಯಮಂತ್ರಿ ಆಗಿದ್ದ ವೇಳೆಯಲ್ಲಿ ರೈತರ, ಮಹಿಳೆಯರ, ಬಡವ ಬಲ್ಲಿಗ ದೀನ ದಲಿತರ ಉದ್ಧಾರಕ್ಕಾಗಿ ಶ್ರಮಿಸಿದಂತಹ ವ್ಯಕ್ತಿಯಾಗಿದ್ದೀರಿ, ನೀವು ಅಧಿಕಾರದಲ್ಲಿ ಇದ್ದ ಸಂದರ್ಭದಲ್ಲಿ ಗ್ರಾಮ ವಾಸ್ತವ್ಯ ಅಂತಹ ಕಾರ್ಯಕ್ರಮಗಳನ್ನು ಹಾಕಿಕೊಂಡು ಜನರ ಹತ್ತಿರದ ಸಿಎಂ ಆಗಿ ಹೊರಹೊಮ್ಮಿದ್ದೀರಿ ಎಂದು ಕುಮಾರಸ್ವಾಮಿಯವರಿಗೆ ಹೇಳಿದ್ದಾಳೆ.
ಬಳಿಕ ಕುಮಾಸ್ವಾಮಿ ಮಾತನಾಡಿ, ನಿನ್ನಂತ ಯುವತಿ ನನಗೆ 5ಸಾವಿರ ರೂ. ಕೊಟ್ಟಿದ್ದು 5 ಕೋಟಿ ಇದ್ದಂತೆ ನಾನು ನಿನಗೆ ಚಿರಖುಣಿಯಾಗಿರುತ್ತೇನೆ. ನಿಮ್ಮ ಈ ಸಹಾಯವನ್ನು ನಾನು ಎಂದಿಗೂ ಕೂಡ ಮರೆಯೋದಿಲ್ಲ ಎಂದರು.