ಕುಮಠಳ್ಳಿ ಪರ ಬ್ಯಾಟಿಂಗ್ ಮಾಡೋದು ನನ್ನ ಧರ್ಮ, ಆದರೆ ಲಕ್ಷ್ಮಣ ಸವದಿ ವಿರುದ್ಧ ಅಲ್ಲ

ರಮೇಶ ಜಾರಕಿಹೊಳಿ
Advertisement

ಗೋಕಾಕ : ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಮತ್ತು ನಾನು ನಿಜವಾಗಿಯೂ ಉತ್ತಮ ಸ್ನೇಹಿತರು. ಕೆಟ್ಟ ಘಳಿಗೆಯಲ್ಲಿ ನಾವಿಬ್ಬರು ಬೇರೆ ಬೇರೆಯಾಗಿದ್ದೇವೆ. ನಾನು ಕಾಂಗ್ರೆಸ್‌ನಲ್ಲಿದ್ದೇ, ಅವನು ಬಿಜೆಪಿಯಲ್ಲಿದ್ದ. ಅಚಾನಕ್ ನಾವಿಬ್ಬರೂ ಒಂದೇ ಪಕ್ಷದಲ್ಲಿದ್ದೇವೆ ಎಂದು ಮಾಜಿ ಮಂತ್ರಿ, ಗೋಕಾಕ ಶಾಸಕ ರಮೇಶ ಜಾರಕಿಹೊಳಿ ಹೇಳಿದ್ದಾರೆ.
ಗೋಕಾಕನಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಗೋಕಾಕ ವಿಧಾನಸಭೆ ಕ್ಷೇತ್ರಕ್ಕೆ ಸ್ಪರ್ಧೆ ಕೋರಿ ನಾಮಪತ್ರ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲಕ್ಷ್ಮಣ ಸವದಿಗೆ ಮಾಧ್ಯಮಗಳ ಮೂಲಕ ಮನವಿ ಮಾಡುತ್ತೇನೆ. ನಿಮ್ಮ ನಿರ್ಧಾರ ಪುನರ್ ಪರಿಶೀಲನೆ ಮಾಡಿ, ಯಾವುದೇ ದುಡುಕಿನ ನಿರ್ಧಾರ ಬೇಡ ಎಂದರು.
ನಾವಿಬ್ಬರೂ ಸೇರಿ ೨೦೨೩ಕ್ಕೆ ಜಿಲ್ಲೆ, ರಾಜ್ಯದಲ್ಲಿ ಬಿಜೆಪಿ ಸರ್ಕಾರ ತರೋಣ, ಬಿಜೆಪಿ ಕಟ್ಟೋಣ ಬೇಕಿದ್ದರೆ ನಾನೇ ಒಂದು ಹೆಜ್ಜೆ ಹಿಂದೆ ಸರಿಯುತ್ತೇನೆ. ಮತ್ತೊಮ್ಮೆ ವಿಚಾರ ಮಾಡಿ ಬಿಜೆಪಿಯಲ್ಲಿ ಮುಂದುವರೆಯಬೇಕು ಎಂದು ಮನವಿ ಮಾಡಿದರು.
ನಮ್ಮಿಬ್ಬರಲ್ಲಿ ಯಾವುದೇ ಭಿನ್ನಾಭಿಪ್ರಾಯ ಇದ್ದರೆ ಕುಳಿತು ಬಗೆಹರಿಸಿಕೊಳ್ಳೋಣ. ಮಹೇಶ್ ಕುಮಠಳ್ಳಿ ಪರ ಬ್ಯಾಟಿಂಗ್ ಮಾಡೋದು ನನ್ನ ಧರ್ಮ ನಾನು ಮಾಡಿದ್ದೀನಿ. ಆದರೆ ಲಕ್ಷ್ಮಣ ಸವದಿ ವಿರುದ್ಧ ಅಲ್ಲ, ನಿನ್ನ ಸ್ಥಾನಮಾನ ಕಸಿದುಕೊಂಡಿಲ್ಲ. ಹಿಂದಿನ ಕಾಂಗ್ರೆಸ್ ಪಕ್ಷದಲ್ಲಿದ್ದಾಗ ಕಾಂಗ್ರೆಸ್ ಗೆಲ್ಲಿಸುವುದು ನನ್ನ ಕರ್ತವ್ಯ ಮಾಡಿದ್ದೀನಿ. ಈಗ ಎಂಎಲ್‌ಸಿ ಇದ್ದೀರಿ ೫ವರ್ಷ ಅಧಿಕಾರ ಅವಧಿ ಇದೆ. ಕುಮಠಳ್ಳಿ ಎಂಎಲ್‌ಎ ಆಗಬೇಕು, ಮುಂದಿನ ದಿನದಲ್ಲಿ ಇಬ್ಬರೂ ಸೇರಿ ಬಿಜೆಪಿಗಾಗಿ ಕೆಲಸ ಮಾಡೋಣ ಎಂದರು.
ಕಾಂಗ್ರೆಸ್ ಮೋಸಗಾರ ಪಕ್ಷ. ಅಲ್ಲಿಗೆ ಹೋಗಬೇಡಿ ಎಂದು ಸವದಿಯವರಿಗೆ ಮನವಿ ಮಾಡುತ್ತೇನೆ. ನಾನು-ನೀನು ಬೊಮ್ಮಾಯಿ ಸ್ನೇಹಿತರು, ಹೈಕಮಾಂಡ್ ಹೇಳಿದರೆ ಸಂಧಾನ ಮಾಡುತ್ತೇನೆ. ಎಲ್ಲ ಸರಿ ಹೋದ ಮೇಲೆ ಅಥಣಿಗೆ ಬಂದು ಹೋಗುತ್ತೇನೆ. ಜಿಲ್ಲೆ, ರಾಜ್ಯದಲ್ಲಿ ನಾನು ನೀನು ಸೇರಿ ಕೆಲಸ ಮಾಡೋಣ, ಯಾವುದೇ ತೀರ್ಮಾಣ ಮಾಡಿಬೇಡಿ ಎಂದು ಮತ್ತೊಮ್ಮೆ ಮನವಿ ಮಾಡಿದರು.